ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಂಕಿ-ಅಂಶ ಗೊಂದಲ ಬೇಡ

Srinivasa Murthy VN
Updated On : 23 Jul 2013, 9:46 am

ಸದ್ಯದಲ್ಲೇ ದೇಶದಲ್ಲಿ ಪ್ರಯೋಗವಾಗಲಿರುವ ಆಹಾರ ಭದ್ರತೆ ಶಾಸನ ಜಾರಿಗೆ ಬರುವುದಕ್ಕೆ ಮುಂಚೆಯೇ, ಕರ್ನಾಟಕದಲ್ಲಿ ಬಡವರಿಗೆ ಕೇಜಿಗೊಂದು ರುಪಾಯಿ ದರದಲ್ಲಿ ತಿಂಗಳಿಗೆ 30 ಕೆಜಿ ಅಕ್ಕಿ ಒದಗಿಸುವ ವ್ಯವಸ್ಥೆ ಜಾರಿಗೆ ಬಂದಿದೆ.
 ಈಗಾಗಲೇ ಇಂತಹ ವ್ಯವಸ್ಥೆ ಬೇರೆ ಬೇರೆ ರೂಪದಲ್ಲಿ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಬಡವರಿಗೆ ಅನ್ನ ದಾಸೋಹವನ್ನು ಒಂದು ನೀತಿ ಎಂದು ಪರಿಗಣಿಸಿದರೆ, ಅದನ್ನು ವಿರೋಧಿಸುವವರೇ ಇರುವುದಿಲ್ಲ. ಆದರೂ ಈಗ ಈ ಯೋಜನೆಗೆ ವಾಣಿಜ್ಯೋದ್ಯಮಿಗಳ ಪ್ರಾತಿನಿಧಿಕ ಸಂಘಟನೆಗಳಿಂದ ಹಿಡಿದು ಹಲವು ರಾಜಕೀಯ ಪಕ್ಷಗಳಿಂದಲೂ ವಿರೋಧ ಕಂಡುಬಂದಿರುವುದು ಆ ನೀತಿಯನ್ನು ಜಾರಿಗೆ ತರುವುದರಲ್ಲಿ ಕಂಡು ಬರಬಹುದಾದ ಅಡ್ಡಿ ಆತಂಕಗಳ ವಿಚಾರದಲ್ಲಿ.
 ಉದಾಹರಣೆಗೆ ಬಡವರ ಸಂಖ್ಯೆಯ ವಿಚಾರದಲ್ಲೇ ಗೊಂದಲವಿದೆ. ಕರ್ನಾಟಕ ಸರ್ಕಾರದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಸುಮಾರು 98 ಲಕ್ಷ ಕುಟುಂಬಗಳಾದರೆ, (ಬಿಪಿಎಲ್) ಯೋಜನಾ ಆಯೋಗದ ಲೆಕ್ಕದಲ್ಲಿ ಆ ಸಂಖ್ಯೆ 31.29 ಲಕ್ಷ ಮಾತ್ರ. ನಿಜ. ಬಡತನವನ್ನು ಅಳೆಯುವುದರಲ್ಲಿ, ಬಡವರನ್ನು ಗುರ್ತಿಸುವುದರಲ್ಲಿ ಸರ್ಕಾರ ಹಾಗೂ ಯೋಜನಾ ಆಯೋಗ ಅನುಸರಿಸುವ ವಿಧಾನಗಳು ಭಿನ್ನ ಭಿನ್ನವಾಗಿರಬಹುದು. ಆದರೂ ಎರಡೂ ಸಂಸ್ಥೆಗಳ ವೈಜ್ಞಾನಿಕ ಆಧರಿತ ಸಮೀಕ್ಷೆಯ ಸಂಖ್ಯೆಗಳಲ್ಲಿ ಇಷ್ಟೊಂದು ಅಂತರವಿರುವುದು ಅಸಾಧ್ಯ. ಇಂತಹ ಗೊಂದಲದಿಂದ ಬಡವರಿಗೆ ಅನ್ನದಾಸೋಹದಂತಹ ಒಂದು ಮಹಾನ್ ಪ್ರಯೋಗವೇ ಮುಳುಗಿ ಹೋಗುವಂತೆ ಆಗಬಾರದು.
 ಈ ಗೊಂದಲವನ್ನು ನಿವಾರಿಸುವ ಜವಾಬ್ದಾರಿ ಸರ್ಕಾರಗಳದ್ದು. ಆದಷ್ಟು ಬೇಗ ಈ ಕೆಲಸ ಆಗದಿದ್ದರೆ, ಆ ಗೊಂದಲ ಯೋಜನೆಯ ಜಾರಿಯಲ್ಲೂ ನುಸುಳಿ ಸಂಬಂಧಪಟ್ಟವರಿಗೆಲ್ಲ ಕೆಟ್ಟ ಹೆಸರು ಬರುವುದು ಖಚಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement