ದಿವಾಳಿಯಾದ ಡೆಟ್ರಾಯಿಟ್, ಬೆಂಗಳೂರಿಗೆ ಎಚ್ಚರಿಕೆ ಗಂಟೆ
ವಿಶ್ವದ ಅಟೋ ರಾಜಧಾನಿ ಎಂದು ಖ್ಯಾತಿಗಳಿಸಿದ್ದ ಅಮೆರಿಕದ ಮಿಷಿಗನ್ ರಾಜ್ಯದ ರಾಜಧಾನಿ ಡೆಟ್ರಾಯಿಟ್ ನಗರ ದಿವಾಳಿಯಾಗಿದೆ. ಒಂದು ಕಾಲದಲ್ಲಿ 20 ಲಕ್ಷದಷ್ಟಿದ್ದ ಜನಸಂಖ್ಯೆ ಇಂದು 70 ಸಾವಿರಕ್ಕಿಳಿದಿದೆ ಎಂಬ ಸುದ್ದಿ ಓದಿದಾಕ್ಷಣ ಬೆಂಗಳೂರು ನೆನಪಾಯಿತು. ಡೆಟ್ರಾಯಿಟ್ ನಗರಾಡಳಿತ ಅಭಿವೃದ್ಧಿ ನೆಪದಲ್ಲಿ ಅಗಾಧ ಪ್ರಮಾಣದ ಸಾಲ ಮಾಡಿ, ಸಾಲವನ್ನು ತೀರಿಸುವುದಿರಲಿ, ಬಡ್ಡಿಯನ್ನು ಕೊಡಲಾಗದೆ, ಜನತೆಗೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗದೆ ಅಲ್ಲಿನ ಜನ ನಗರ ಬಿಡುವುದು ಅನಿವಾರ್ಯವಾಯಿತು. ಒಮ್ಮೆ ಗಮನಿಸಿ, ಬೆಂಗಳೂರು ಮಹಾನಗರ ಪಾಲಿಕೆಯೂ ಸಾಲ ಎತ್ತುತ್ತಿದೆ. ಕಸದ ಸಮಸ್ಯೆ ಪೆಡಂಭೂತದಂತೆ ಕಾಡುತ್ತಿದೆ. ಮಳೆ ಬಂತೆಂದರೆ ಬೆಂಗಳೂರು ಸ್ತಬ್ಧವಾಗಿ ಬಿಡುತ್ತದೆ. 'ಗಾರ್ಡನ್ ಸಿಟಿ ಗಾರ್ಬೆಜ್ ಸಿಟಿ' ಆಗಿ ಬಹಳ ಕಾಲವಾಯಿತು. ಅಡ್ಡಾದಿಡ್ಡಿ ಬೆಳೆಯುತ್ತಿರುವ ಬೆಂಗಳೂರಿಗೆ ಇಡೀ ಕಾವೇರಿ ನೀರು ಹರಿಸಿದರೂ ಸಾಲದು ಅನ್ನುವ ಕಾಲ ದೂರವಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ, ಭವಿಷ್ಯ ದುಃಸ್ವಪ್ನವಾಗುತ್ತದೆ. ಇನ್ನು ಬೆಂಗಳೂರು ಬೆಳೆಯಲು ಬಿಡಬಾರದು. ಹೊಸ ಸಮುಚ್ಚಯ ಕಟ್ಟಡಗಳಿಗೆ ನಿರ್ದಾಕ್ಷಿಣ್ಯವಾಗಿ ಪರವಾನಗಿ ನೀಡಬಾರದು. ಒಂದು ದಿನಾಂಕ ನಿಗದಿಪಡಿಸಿ ಆನಂತರ ನಿರ್ಮಾಣವಾಗುವ ಬಡಾವಣೆಗಳಿಗೆ ನಾಗರಿಕ ಸೌಲಭ್ಯ ಒದಗಿಸಬಾರದು. ಅನಧಿಕೃತ ಕಟ್ಟಡಗಳನ್ನು ಅಧಿಕೃತಗೊಳಿಸಿ (ಉದ್ದೇಶಿತ ಕಟ್ಟಡಗಳ ನಿರ್ಮಾಣಕ್ಕೆ ಮುಂದೆ ಆಸ್ಪದವಿರಬಾರದು). ಬರುವ ಶುಲ್ಕದಿಂದ ಮೂಲಭೂತ ಸೌಕರ್ಯ ಒದಗಿಸಬೇಕು. ಬೃಹತ್ ಪಾಲಿಕೆಯನ್ನು ನಾಲ್ಕು ಆಡಳಿತ ವಿಭಾಗವಾಗಿ ವಿಂಗಡಿಸಿ ಎಲ್ಲವನ್ನೂ ವಿಕೇಂದ್ರಿಕರಣಗೊಳಿಸಬೇಕು. ಪ್ರತಿ ವಿಭಾಗದಲ್ಲೂ ಆಧುನಿಕ ತಂತ್ರಜ್ಞಾನ ಬಳಸಿ ಕಸದಿಂದ ವಿದ್ಯುತ್ ತಯಾರಿಕೆ, ಗೊಬ್ಬರ ತಯಾರಿಸಿ ಅದರಿಂದ ಸಂಪತ್ತು ಸೃಷ್ಟಿಸಬೇಕು. ನೀರನ್ನು ಪುನರ್ಬಳಕೆ ಮಾಡುವ ವ್ಯವಸ್ಥೆ, ಮಳೆ ನೀರು ಕೊಯ್ಲು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ತೆರಿಗೆ ಸಂಗ್ರಹ ವಿತರಣೆ ಸಮರ್ಪಕವಾಗಿ ಆಗಬೇಕು. ನಗರವನ್ನು ಉಳಿಸುವ ದೃಷ್ಟಿಯಿಂದ ಪ್ರತಿ ಬಡಾವಣೆಯಲ್ಲೂ ನಾಗರಿಕ ಸಮಿತಿ ರಚನೆ ಆಗಬೇಕು. ಒಟ್ಟಿನಲ್ಲಿ ಬೆಂಗಳೂರನ್ನು ಸಹ್ಯವಾಗಿಸುವ, ನಿಯಂತ್ರಿಸುವ ಕೆಲಸ ಆಗದಿದ್ದರೆ, ಬೆಂಗಳೂರಿನ ಜನ ಬೇರೆಡೆಗೆ ಗುಳೆ ಹೋಗುವ ಕಾಲ ಬಂದೇ ಬರುತ್ತದೆ.
-ರಾ.ನಂ. ಚಂದ್ರಶೇಖರ, ಬೆಂಗಳೂರು
ಹಿರಿಯ ನಾಗರಿಕರ ಸಮಸ್ಯೆಗೆ ಸ್ಪಂದಿಸಿ
ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ್ದು ಸಂತೋಷದ ಸಂಗತಿ. ಆದರೆ ಅದರಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಅಷ್ಟಾಗಿ ಸ್ಪಂದಿಸದಿರುವುದು ದುರದೃಷ್ಟಕರ ಸಂಗತಿ. ಎಲ್ಲರಿಗೂ ತಿಳಿದಂತೆ ಹಲವಾರು ಹಿರಿಯ ನಾಗರಿಕರು ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಜೀವನದಲ್ಲಿ ಕಷ್ಟಕ್ಕೆ ಒಳಗಾಗಿದ್ದಾರೆ. ಸ್ವಂತ ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಜೀವನ ನಡೆಸುವುದೇ ಕಷ್ಟಕರ ಸಂಗತಿ. ಹೀಗಿರುವಾಗ ಕರ್ನಾಟಕ ಸರ್ಕಾರ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳು ಅವರ ಬಗ್ಗೆ ಹೆಚ್ಚು ಗಮನ ಹರಿಸಬಾರದೇಕೆ? 68 ವರ್ಷಗಳ ಮೇಲೆ ವಯಸ್ಸಾಗಿರುವ ಹಾಗೂ ಹಣಕಾಸಿನ ದೃಷ್ಟಿಯಲ್ಲಿ ಹಿಂದುಳಿದಿರುವ ಹಿರಿಯ ನಾಗರಿಕರಿಗೆ ನಿವೇಶನ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು. 30್ಢ 50 ಅಳತೆಯ ನಿವೇಶನವನ್ನು ಕಮ್ಮಿ ದರದಲ್ಲಿ ಹಾಗೂ ಕಂತಿನ ರೂಪದಲ್ಲಿ ನಿವೇಶನ ನೀಡಿದರೇ ಅವರ ನಿವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.
-ಸದಸ್ಯರುಗಳು, ಹಿರಿಯ ನಾಗರಿಕರ ಕಲ್ಯಾಣ ಸೇವಾ ಸಮಿತಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com