ಹೊಲಸು ಮಾಡುವವರಿಗೆ ಶಿಕ್ಷೆ
ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯದ ವಿಲೇವಾರಿಯ ಅವ್ಯವಸ್ಥೆ ನಗರದ ನಾಗರಿಕರ ಉಸಿರುಗಟ್ಟಿಸಿದಂತೆಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಂತದ ಪ್ರಚಾರವನ್ನೂ ಗಳಿಸಿತ್ತು. ಹಲವು ನಾಗರಿಕರು ಈ ಸಂಕಷ್ಟವನ್ನು ನ್ಯಾಯಾಲಯಕ್ಕೂ ಕೊಂಡೊಯ್ದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ಆರು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವ ವಚನ ನೀಡಿದ್ದಾರೆ.
ಇವೆಲ್ಲದರ ಹಿನ್ನೆಲೆಯಲ್ಲಿ ಗುರುವಾರ ವಿಧಾನ ಸಭೆಯಲ್ಲಿ ಮಂಡಿಸಲಾದ ಕರ್ನಾಟಕ ಪೌರ ನಿಗಮಗಳ ಕಾಯಿದೆಯ ತಿದ್ದುಪಡಿ ವಿಧೇಯಕ, ಸ್ಪಷ್ಟವಾಗಿ ಸಿದ್ದರಾಮಯ್ಯ ಸರ್ಕಾರ ನಗರಗಳನ್ನು ಹೊಲಸು ತುಂಬುವಂತೆ ಮಾಡಿರುವವರ ವಿರುದ್ಧ ಸಮರವನ್ನೇ ಸಾರಿರುವುದಕ್ಕೆ ಸಾಕ್ಷಿ. ಇಲ್ಲಿ ನಾಗರಿಕರ ಕರ್ತವ್ಯ ಹಾಗೂ ಹೊಣೆಗಾರಿಕೆಯ ಪ್ರಸ್ತಾಪವಿದೆ. ನಾಗರಿಕರು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸದೇ ಹೋದರೆ, ಉದಾಹರಣೆಗೆ ತ್ಯಾಜ್ಯವನ್ನು ಒಣ-ಹಸಿಯ ರೂಪದಲ್ಲಿ ವಿಂಗಡಿಸದೇ ಹೋದರೆ, ಮೊದಲು ದಂಡವನ್ನು ತೆರಲು ಸಿದ್ಧರಾಗಬೇಕು, ಅನಂತರ ಜೈಲಿಗೂ ಹೋಗಬೇಕಾಗಿ ಬರಬಹುದು.
ಬೀದಿಯಲ್ಲಿ ಕಸ ಹಾಕುವುದು, ಕಂಡ - ಕಂಡ ಕಡೆಗಳಲ್ಲಿ ಮಲ-ಮೂತ್ರ ವಿಸರ್ಜನೆ, ರಸ್ತೆಗಳಲ್ಲಿ ಹೊಲಸಿನ ಚೀಲಗಳನ್ನು ಬಿಸಾಡುವುದು ಇಂತಹ ಎಲ್ಲ ಅನಾಗರಿಕ ವರ್ತನೆಯೂ ಇನ್ನು ಮುಂದೆ ಶಿಕ್ಷಾರ್ಹ ಅಪರಾಧವಾಗುತ್ತದೆ.
ನಿಜ. ಇಂತಹ ಒಂದು ಕಠಿಣ ಕ್ರಮದ ಬೆದರಿಕೆ ಅಗತ್ಯವಾಗಿತ್ತು. ಮಹಾನಗರ ಪಾಲಿಕೆ ಆಗಿಂದ್ದಾಗ್ಗೆ ನೀಡುವ ಪ್ರಕಟಣೆಗಳಿಗೆ ಕ್ಯಾರೇ ಎನ್ನುವವರ ಸಂಖ್ಯೆ ತೀರ ಕಡಿಮೆಯಾಗಿತ್ತು. ಬೆಳಗಿನ ಝಾವ ವಾಯು ಸೇವನೆಗೆಂದು ಹೊರಡುವ ಪ್ರತಿಷ್ಠಿತ ಸಮಾಜದ ದಂಪತಿಗಳೂ ಕೈಯಲ್ಲೊಂದು ಪ್ಲಾಸ್ಟಿಕ್ ಚೀಲದಲ್ಲಿ ಹೊಲಸನ್ನು ತುಂಬಿ ರಸ್ತೆಯಲ್ಲಿ ಬಿಸಾಡಿ ಹಿಂದೆ ನೋಡದೇ ನಡೆಯುತ್ತಿರುವುದು ಒಂದು ಸಾಮಾನ್ಯ ದೃಶ್ಯ. ಇನ್ನು ಶುಚಿತ್ವದ ಕಲ್ಪನೆಯೇ ಇಲ್ಲದ ಅನಾಗರಿಕ ವ್ಯಕ್ತಿಗಳ ಮಾತು ಹೆಚ್ಚು ಹೇಳಬೇಕಾಗಿಲ್ಲ.
ಇದೆಲ್ಲವೂ ಸರಿ. ಆದರೆ ಈ ನಿಯಮಗಳನ್ನು ಜಾರಿಗೊಳಿಸುವ ಸಿಬ್ಬಂದಿ ಎಲ್ಲಿದೆ? ನಗರದ ರಸ್ತೆಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಅನೇಕರ ಪಾಲಿಗೆ ಒಂದು ಶೋಕಿಯಾಗಿದೆ. ಪೊಲೀಸರಿದ್ದರೂ ಅದನ್ನು ತಪ್ಪಿಸಲಿಕ್ಕೆ ಆಗಿಲ್ಲ. ಬಡಾವಣೆಗಳಲ್ಲಿ ಪುಟ್‌ಪಾತ್‌ಗಳಲ್ಲೇ ಇಡೀ ದಿನ (ರಾತ್ರಿ) ಕಾರು ನಿಲ್ಲಿಸಿ ಅದನ್ನು ಬೆಳಿಗ್ಗೆ ಅಲ್ಲೇ ತೊಳೆಯುವವರು, ತೊಳೆಸುವವರೂ ಇದ್ದಾರೆ - ಅವರನ್ನು ಮಾತಾಡಿಸುವವರು ಯಾರು?
ಇದೇ ಗತಿ ಈ 'ಕಸ ಎಸೆದರೆ ಶಿಕ್ಷೆ' ಕಾಯಿದೆಗೂ (ವಿಧೇಯಕ ಕಾಯಿದೆಯಾದಾಗ) ಬರಬಾರದು. ಇಂತಹ ಕಾಯಿದೆಗಳು ಒಂದು ರೀತಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ರಕ್ಷಣಾ ಕಾಯಿದೆಗಳೇ. ಇಲ್ಲಿ ಶಿಕ್ಷೆಯ ಬೆದರಿಕೆಗಿಂತ ಹೆಚ್ಚಿಗೆ ಮನಸ್ಸಿನ ಪರಿವರ್ತನೆ ಮುಖ್ಯ. ಅದಕ್ಕಾಗಿ ಒಂದು ಸಹೃದಯತೆಯ ಪ್ರಚಾರ ಆಂದೋಲನವೇ ನಡೆಯಬೇಕು. ಶುಚಿತ್ವದ ಸಂದೇಶ, ಅದು ಅಗತ್ಯವಾಗಿರುವ ಜನ ಸಮುದಾಯಗಳಿಗೆ ನೇರವಾಗಿ ತಲುಪುವಂತಾಗಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆಯಂತೆ ಬೆಂಗಳೂರಿನಲ್ಲಿ ಯಾರಿಗೂ ಶಿಕ್ಷೆಯೇ ಆಗಿಲ್ಲದೇ ಇರಬಹುದು. ಆದರೆ ವ್ಯಾಪಕ ಪ್ರಚಾರದ ಪರಿಣಾಮವಾಗಿ ಧೂಮಪಾನದ ಪಿಡುಗು ಈಗ ಕಡಿಮೆಯಾಗಿದೆ. ಹಿಂದೆ ಸಹಜ ಪೀಡೆಯಂತಿದ್ದ ಈ 'ಅಪರಾಧ" ಈಗ ಅಪರೂಪವಾಗಿದೆ. ಶುಚಿತ್ವದ ಕಾಯಿದೆಯೂ 'ಅದೇ ಪರಿಣಾಮವನ್ನು ಬೀರಬಹುದು. ಕಾಯಿದೆಯ ಉದ್ದೇಶ ಜನರನ್ನು ಶಿಕ್ಷಿಸುವುದಲ್ಲ. ನಗರಗಳಲ್ಲಿನ ನೈರ್ಮಲ್ಯದ ರಕ್ಷಣೆ. ಆ ದೃಷ್ಟಿಯಿಂದ ಸರ್ಕಾರ ಮಂಡಿಸಿರುವ ವಿಧೇಯಕ ತಾತ್ವಿಕವಾಗಿ ಸ್ವಾಗತಕ್ಕೆ ಅರ್ಹ. ಮುಂದಿನದನ್ನು ಅನುಭವವೇ ನಿರ್ಧರಿಸಬೇಕು.