1964ರಲ್ಲಿ ಸೆಂಟ್ರಲ್ ಕಾಲೇಜು ಸ್ಥಾಪನೆಯಾಯಿತೇ?
ಸಾಹಿತಿ ಎಲ್.ಎಸ್. ಶೇಷಗಿರಿ ರಾವ್ ಅವರು ಬರೆಯುತ್ತಾರೆ- 'ಜೂ.25ರ 'ಕನ್ನಡಪ್ರಭ' ಪತ್ರಿಕೆಯಲ್ಲಿ (ಪುಟ 2) ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಸುದ್ದಿ ಪ್ರಕಟವಾಗಿದೆ. ಇದರಲ್ಲಿ '1964ರಲ್ಲಿ ಸೆಂಟ್ರಲ್ ಕಾಲೇಜು ಸ್ಥಾಪನೆಯಾಯಿತು' ಎಂದು ಓದಿ ಆಶ್ಚರ್ಯವಾಯಿತು. ಸರ್. ಎಂ.ವಿ., ರಾಜಾಜಿ, ಮಾಸ್ತಿ ಮೊದಲಾದವರು ಓದಿದ ಕಾಲೇಜು 1964ರಲ್ಲಿ ಸ್ಥಾಪನೆಯಾಯಿತೇ? ನಾನು ಈ ಕಾಲೇಜಿನಲ್ಲಿ 1941ರಿಂದ 1944ರವರೆಗೆ ವಿದ್ಯಾರ್ಥಿಯಾಗಿದ್ದೆ. 1952ರವರೆಗೆ ಅಧ್ಯಾಪಕನಾಗಿದ್ದೆ. ಈ ಕಾಲೇಜು ಎಷ್ಟೋ ವರ್ಷಗಳ ಹಿಂದೆ ಶತಮಾನೋತ್ಸವ ಆಚರಿಸಿಕೊಂಡಿದೆ.'
'ಇದೇ ಸುದ್ದಿಯಲ್ಲಿ ಸೆಂಟ್ರಲ್ ಕಾಲೇಜು ಭವಿಷ್ಯದ ಕುರಿತು ಪ್ರಸ್ತಾಪವಿದೆ. ಕರ್ನಾಟಕ ಏಕೀಕರಣವಾದಾಗಿನಿಂದ ಗಮನಿಸುತ್ತಿದ್ದೇನೆ, ಈ ಕಾಲೇಜು ಔದಾಸೀನ್ಯಕ್ಕೆ ಗುರಿಯಾಗಿದೆ. ಇದು ರಾಜ್ಯದ ಒಂದು ಆಸ್ತಿ. ಬೆಂಗಳೂರಿನ ಒಂದು ಹೆಮ್ಮೆ. ಸಿ.ವಿ. ರಾಮನ್ ಅವರು ನೋಬಲ್ ಬಹುಮಾನ ಪಡೆಯುವ ಮೊದಲು ಈ ಕಾಲೇಜಿನಲ್ಲೇ ಭೌತವಿಜ್ಞಾನ ವಿಭಾಗದಲ್ಲಿ ತಮ್ಮ ಸಂಶೋಧನೆಯನ್ನು ಕುರಿತು ಭಾಷಣ ಮಾಡಿದ್ದರು. ಆ ಮಂದಿರಕ್ಕೆ ಈಗ ರಾಮನ್ ಅವರ ಹೆಸರನ್ನು ಇಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಅಧ್ಯಾಪಕರನ್ನು ಹೊಂದಿದ್ದ ಕಾಲೇಜು ಇದು. ಟಿ.ಎಸ್. ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿ, ಬಿ.ಎಂ.ಶ್ರೀ, ಎಸ್.ವಿ. ರಂಗಣ್ಣ, ಕುವೆಂಪು, ವಿಸೀ., ರಾಜರತ್ನಂ, ಬಿ.ಎಸ್. ಮಾಧವರಾವ್, ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ ಮುಂತಾದವರು ಪಾಠ ಹೇಳಿದ ಕಾಲೇಜು ಇದು.'
'ಈ ಕಾಲೇಜಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ. ಮಹಾರಾಜ ಕಾಲೇಜನ್ನು ಮೈಸೂರು ವಿಶ್ವವಿದ್ಯಾಲಯ ಉಳಿಸಿಕೊಂಡು ಬೆಳೆಸಿದಂತೆ, ಈ ಕಾಲೇಜನ್ನು ಉಳಿಸಿಕೊಂಡು ಬೆಳೆಸುವುದು ಕನ್ನಡಿಗರ ಕರ್ತವ್ಯ.'
'ಇದೇ ಸಂಚಿಕೆಯ ಇನ್ನೊಂದು ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಕೊಡಗಿನ ಮಳೆಯ ಅಬ್ಬರದ ಸುದ್ದಿ 7ನೇ ಪುಟದಲ್ಲಿ ಮತ್ತು 1ನೇ ಪುಟಗಳಲ್ಲಿ, ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್ ಪೀಠವಿಲ್ಲ ಎನ್ನುವ ಸುದ್ದಿ ಪುಟ 4ರಲ್ಲಿ ಎರಡು ಬಾರಿ, ಕಡೆಯ ಪುಟದಲ್ಲಿ 'ಬಲಿಷ್ಠ ಆರಂಭ' ಎನ್ನುವ ಉಪಶೀರ್ಷಿಕೆಯ ಭಾಗ ಒಂದರ ಕೆಳಗೊಂದು ಎರಡು ಬಾರಿ ಅಚ್ಚಾಗಿದೆ' ಎಂದಿದ್ದಾರೆ.
ಸೆಂಟ್ರಲ್ ಕಾಲೇಜಿನ ಇತಿಹಾಸ ಅಗಾಧವಾದದ್ದು. 1858ರಲ್ಲಿ ಆರಂಭವಾದ ಈ ಕಾಲೇಜು ದೇಶದ ಅತ್ಯಂತ ಹಳೆಯ ವಿಜ್ಞಾನ ಕಾಲೇಜುಗಳಲ್ಲಿ ಒಂದು. 1964ರಲ್ಲಿ ಸೆಂಟ್ರಲ್ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿತು. ಇದನ್ನು ಸರಿಯಾಗಿ ಬರೆಯುವ ಬದಲು, 1964ರಲ್ಲಿ ಆರಂಭವಾಯಿತು ಎಂದು ತಪ್ಪಾಗಿ ಬರೆಯಲಾಗಿದೆ.
ಕ್ರೀಡಾಪುಟದಲ್ಲಿ 'ಬಲಿಷ್ಠ ಆರಂಭ' ಎಂಬ ಪ್ಯಾರಾ ಎರಡು ಬಾರಿ ಪ್ರಕಟವಾಗಿರುವುದರ ಕುರಿತು ಸುವರ್ಣ ಚಾನಲ್ನ ಸುಧೀಂದ್ರ ಕಂಚಿತೋಟ ಅವರು ಕೂಡ ಗಮನಸೆಳೆದಿದ್ದರು.
-ವಿಶ್ವೇಶ್ವರಭಟ್