ಇರುವ ಶಾಲೆಗಳಿಗೆ ಮಾರಕ
ಗ್ರಾಮ ಪಂಚಾಯ್ತಿಯ ಕೇಂದ್ರಗಳಲ್ಲಿ ಬೆಸ್ಟ್ ಸ್ಕೂಲ್‌ಗಳನ್ನು ಆರಂಭಿಸುವ "ಚಿಂತನೆ" ಶಿಕ್ಷಣ ಸಚಿವರದ್ದು. (ಕ.ಪ್ರ. 20.6.2013). ಇದೊಂದು ಹೊಸ ಆವಿಷ್ಕಾರ. ದೇಶದಲ್ಲಿ ಈಗ ಎಂಟು ತೆರನ ಶಾಲೆಗಳಿವೆ: ಅಂತಾರಾಷ್ಟ್ರೀಯ ಶಾಲೆ; ಸಿಬಿಎಸ್‌ಇ; ಐಸಿಎಸ್‌ಐ; ಪ್ರತಿಷ್ಠಿತ ಇಂಗ್ಲೀಷ್ ಶಾಲೆ; ಇಂಗ್ಲಿಷ್ ಮಾಧ್ಯಮ ಶಾಲೆ; ಸರ್ಕಾರೀ ಶಾಲೆ; ಅನುದಾನಿತ ಶಾಲೆ ಮತ್ತು ಸ್ಥಳೀಯ ಸಂಸ್ಥೆಗಳು ನಡೆಸುವ ಶಾಲೆ. ಇವುಗಳ ಸಾಲಿಗೆ ಒಂಭತ್ತನೆಯದಾಗಿ ಸಚಿವರ ಚಿಂತನೆಗೆ ಗ್ರಾಸವಾಗಿರುವ ಬೆಸ್ಟ್ ಸ್ಕೂಲ್ ಸೇರುತ್ತದೆ. ಏನು ಈ ಶಾಲೆಗಳ ಹೊಸತನ? ಇವು ಗುಣಮಟ್ಟದ ಶಾಲೆಗಳಾಗುವುವಂತೆ; ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರದಿಂದಲೇ ವಾಹನ ವ್ಯವಸ್ಥೆಯಂತೆ; ಆಟದ ಮೈದಾನ, ಗ್ರಂಥಾಲಯ, ಕಂಪ್ಯೂಟರ್ ಮುಂತಾಗಿ ಮೂಲಸೌಕರ್ಯಗಳಿಂದ ಕೂಡಿದ ಮಾದರಿ ಶಾಲೆಗಳಾಗುವವಂತೆ ಇವು. ಖಾಸಗಿ ಶಾಲೆಗಳಲ್ಲಿ ದೊರಕುವ ಗುಣಮಟ್ಟದ ಶಿಕ್ಷಣ ಈ ಶಾಲೆಗಳಲ್ಲಿ ಲಭ್ಯವಂತೆ. ಗಮನಿಸಬಹುದಾದ ಒಂದು ಹೆಚ್ಚುಗಾರಿಕೆ ಎಂದರೆ, 1ರಿಂದ 8ನೆಯ ತರಗತಿಯವರೆಗಿನ ಶಿಕ್ಷಣ ಇಂಗ್ಲೀಷ್ ಮಾಧ್ಯಮದಲ್ಲಿಲ್ಲ ಎನ್ನುವುದು!
ಸಚಿವರು ಬೆಸ್ಟ್ ಸ್ಕೂಲುಗಳ ಗುಂಗಿನಿಂದ ಹೊರಬಂದು ಈಗಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಉತ್ತಮಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಸುಮಾರು 45 ಸಾವಿರ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುವುದು ಅಸಾಧ್ಯವೆಂಬ ಅಭಿಮತವೆ ಸಚಿವರದ್ದು? ಶಿಕ್ಷಕರ ಸಂಖ್ಯೆ ಸಾಕಷ್ಟಿಲ್ಲದ ಶಾಲೆಗಳಿವೆ; ಮೂಲಸೌಕರ್ಯಗಳು ಇಲ್ಲದ ಶಾಲೆಗಳಿವೆ; ದೂರದಿಂದ ಬರುವ ಮಕ್ಕಳಿಗೆ ವಾಹನ ಸೌಕರ್ಯ ದೊರಕದ ಶಾಲೆಗಳಿವೆ. ಹೀಗೆ ಅನೇಕ ಕೊರತೆಗಳಿರುವ ಸರ್ಕಾರಿ ಶಾಲೆಗಳಲ್ಲಿ ಈ ಎಲ್ಲ ತರದ ಕೊರತೆಗಳನ್ನು ನೀಗಿಸುವ ದಿಟ್ಟತನದ ವಿಚಾರ ಸಚಿವರಿಗೆ ಏಕೆ ಇಲ್ಲ? ಈಗಿರುವ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸಚಿವರು ಆಶ್ವಾಸನೆ ಕೊಡುತ್ತಾರೆ; ಅಂದರೆ ಅವು ಈಗಿರುವ ಸ್ಥಿತಿಯಲ್ಲೇ ಸಾಗುತ್ತಿರಲಿ ಎಂಬುದು ಸಚಿವರ ವಿಚಾರವೇ? ಬೆಸ್ಟ್ ಸ್ಕೂಲ್‌ಗಳು ಅಸ್ತಿತ್ವಕ್ಕೆ ಬರುವುದರಿಂದ ಇರುವ ಶಾಲೆಗಳು ಸೊರಗಿ ಉದುರುವುವು. ಇಂತಹ ಪರಿಸ್ಥಿತಿ ಸ್ವೀಕಾರರ್ಹವೇ? ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇರಬೇಕು. 2009ರಲ್ಲಿ ಈ ಕಾಯ್ದೆ ಬಂತು. ಆದರೆ ಸರ್ಕಾರವೇ ಇದನ್ನು ಕಡೆಗಣಿಸಿದರೆ ಹೇಗೆ? ಖಾಸಗಿ ಶಾಲೆಗಳದು ಗುಣಾತ್ಮಕ ಶಿಕ್ಷಣವೆನ್ನುವುದು ಪ್ರಶ್ನಾರ್ಹ; ಇದೊಂದು ಬರೀ ಭ್ರಮೆ. (ಅಪವಾದಗಳಿಲ್ಲದಿಲ್ಲ). ಹಾಗೆಯೇ ಸರ್ಕಾರಿ ಶಾಲೆಗಳಲ್ಲೂ ಮೇಲ್ಮಟ್ಟದವು ಇವೆ. ಗುಣಮಟ್ಟದ ಶಿಕ್ಷಣದ ಪೂರ್ವಾಗತ್ಯ ಉತ್ತಮ ಶೈಕ್ಷಣಿಕ ವಾತಾವರಣ. ಖಾಸಗಿ ಶಾಲೆಗಳಲ್ಲಿ ಶೇ. 40ಕ್ಕೂ ಹೆಚ್ಚು ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ; ಸ್ವಂತ ಕಟ್ಟಡವಿಲ್ಲದ ಶಾಲೆಗಳ ಸಂಖ್ಯೆ 4668; 2148 ಶಾಲೆಗಳಿಗೆ ಆಟದ ಮೈದಾನವೆಂಬುದಿಲ್ಲ; 395 ಶಾಲೆಗಳಲ್ಲಿ ಶೌಚಾಲಯವಿಲ್ಲ; ಗ್ರಂಥಾಲವಿಲ್ಲದವೂ ಇವೆ. ಇಲ್ಲಿ ಶಿಕ್ಷಕರೆಲ್ಲರೂ ಸೂಕ್ತ ತರಬೇತಿ ಪಡೆದವರೇನಲ್ಲ. (ಕ.ಪ್ರ. 1.5.2013). ಇಂಥಲ್ಲಿ ಗುಣಾತ್ಮಕ ಶಿಕ್ಷಣವೆನ್ನುವುದು ಅರ್ಥಹೀನ! ಈ ಶಾಲೆಗಳ ಮಾನ್ಯತೆ ವರ್ಷ ವರ್ಷವೂ ನವೀಕರಣವಾಗುವುದೇ ಒಂದು ಚೋದ್ಯ! ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುತ್ತೇವೆಂದು ಪ್ರಮಾಣಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲೆಗಳಿಗೂ ಬರವಿಲ್ಲ.
ಮಾನ್ಯ ಸಚಿವರು ಚಿಂತಿಸಬೇಕಾದುದು ಸರ್ಕಾರಿ ಶಾಲೆಗಳನ್ನು ಹೇಗೆ ಸುಧಾರಿಸಬೇಕೆನ್ನುವುದನ್ನು. ಶಿಕ್ಷಕ-ವಿದ್ಯಾರ್ಥಿಗಳ ನಿಗದಿತ ಅನುಪಾತ, ಶಿಕ್ಷಕರ ಪಾಠ ಪ್ರವಚನ ಮತ್ತು ದಿನದಿನದ ಪಾಠದ ವಿಷಯವಾಗಿ ಅವರು ಸಿದ್ಧಪಡಿಸಿಟ್ಟುಕೊಳ್ಳಬೇಕಾದ ಪಾಠ ಟಿಪ್ಪಣಿ ಪುಸ್ತಕ, ಶಿಕ್ಷಕರಿಗೆ ಒದಗಿಸಬೇಕಾದ ಸೌಲಭ್ಯಗಳು, ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ಒದಗಿಸುವುದು, ಮೂಲಸೌಕರ್ಯಗಳತ್ತ ವಿಶೇಷ ಗಮನ, ಶಿಕ್ಷಕರಿಗೆ ಕಾಲಕಾಲಕ್ಕೆ ಪುನರ್ಮನನ ತರಬೇತಿ ವ್ಯವಸ್ಥೆ, ಶಿಕ್ಷಣ ಕ್ಷೇತ್ರಕ್ಕೆ ಹಣದ ಕೊರತೆ ಬಾರದಂತೆ ನೋಡಿಕೊಳ್ಳುವುದು, ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವುದು ಮುಂತಾದ ಅತ್ಯಗತ್ಯವಾದ ವಿಷಯಗಳು ಸರ್ಕಾರಿ ಶಾಲೆಗಳನ್ನು ಆಕರ್ಷಣೀಯವನ್ನಾಗಿಸುವ ನಿಟ್ಟಿನಲ್ಲಿ ಪ್ರಮುಖವಾದವು. ಇದು ಬಿಟ್ಟು ಬೆಸ್ಟ್ ಸ್ಕೂಲ್‌ಗಳನ್ನು ಆರಂಭಿಸಬೇಕೆನ್ನುವ 'ಚಿಂತನೆ' ಸರ್ಕಾರಿ ಶಾಲೆಗಳಿಗೆ ಮಾರಕವಾಗುವ ಸಂಭವವೇ ಹೆಚ್ಚು ಖಚಿತವೆನ್ನುವುದನ್ನು ಸಚಿವರು ಕಡೆಗಣಿಸಬಾರದು.
-ಸಾಮಗ ದತ್ತಾತ್ರಿ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com