ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ದೆಹಲಿ ತಲುಪಿದ ನಿತೀಶ್

Srinivasa Murthy VN
Updated On : 18 Mar 2013, 10:37 am

ಬಿಹಾರದ ಸಂಯುಕ್ತ ಜನತಾದಳದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಿಂದೆ ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದಾಗಲೂ ದೇಶದ ವಿಚಾರವನ್ನು ಹೆಚ್ಚು ಪ್ರಸ್ತಾಪಿಸುತ್ತಿರಲಿಲ್ಲ. ಆದರೆ ಈಗ ಬಿಹಾರದ ಮುಖ್ಯಮಂತ್ರಿಯಾಗಿ ಮುಂದಿನ ವರ್ಷದ ನಿರ್ಣಾಯಕ ಲೋಕಸಭೆ ಚುನಾವಣೆಯ ರಾಜಕೀಯಕ್ಕೇ ಹೊಸ ಆಯಾಮವನ್ನು ಕೊಡುವ ಪ್ರಯತ್ನದ ಸೂಚನೆ ನೀಡಿದ್ದಾರೆ.
ನಿತೀಶ್ ದೆಹಲಿಯಲ್ಲಿ ಒಂದು ಬೃಹತ್ 'ಅಧಿಕಾರ್‌' ಸಮಾವೇಶವನ್ನು ನಡೆಸಿ, ಬಿಹಾರದ ರಾಜಕೀಯ ಶಕ್ತಿಯ ದರ್ಶನ ಮಾಡಿಸುವುದರ ಜತೆಗೇ ತಮ್ಮ ವೈಯಕ್ತಿಕ ರಾಜಕೀಯಕ್ಕೂ ರಾಷ್ಟ್ರೀಯ ಚಿತ್ರವನ್ನು ರೂಪಿಸುವಂತಹ ಭಾಷಣ ಮಾಡಿದ್ದಾರೆ.
ಭಾನುವಾರ ಎಲ್ಲ ಪ್ರಮುಖ ರಾಷ್ಟ್ರೀಯ ವಾರ್ತಾವಾಹಿನಿಗಳೂ ಆ ಸಮ್ಮೇಳನದಲ್ಲಿ ನಿತೀಶ್ ಕುಮಾರ್ ಭಾಷಣವನ್ನು ನೇರವಾಗಿಯೇ ಪ್ರಸಾರ ಮಾಡಿದವು.
ಹಾಗೆಂದರೆ ಪ್ರಚಾರ ಮಾಧ್ಯಮ ರಾಷ್ಟ್ರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಅತಿ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ಎನ್ನುವುದನ್ನು ಗುರ್ತಿಸಿದಂತೆಯೇ ಆಗಿದೆ. ನಿತೀಶ್ ಕುಮಾರ್ ಅವರ ಮೂಲ ಬೇಡಿಕೆ ಇದ್ದದ್ದು ಆರ್ಥಿಕವಾಗಿ ದುರ್ಬಲವಾಗಿರುವ ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆನ್ನುವುದು. ಈಗ ಕೇಂದ್ರ ಸರ್ಕಾರ ಆ ವಿಚಾರದಲ್ಲಿ ಹಿಂದೆ ಇದ್ದ ಗಡಸು ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸಿರಿವುದರಿಂದ ಗುಡ್ಡಗಾಡು ಪ್ರದೇಶಗಳು, ತೆಲಂಗಾಣ, ವಿದರ್ಭ, ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೂ ವಿಶೇಷ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಒಂದು ರಾಜ್ಯವಾಗಿ ಬಿಹಾರಕ್ಕೂ ಅಂತಹ ಸ್ಥಾನ ಸಿಗಲೂಬಹುದು.
ಅದನ್ನೇ ನಿತೀಶ್ ಕುಮಾರ್ ಈಗ ಬಿಹಾರಿಗಳ ಆತ್ಮಗೌರವದ, ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಾರೆ. ಸಾಲದ್ದಕ್ಕೆ ಹಿಂದುಳಿದ ಪ್ರದೇಶಗಳಲ್ಲಿ ಬದುಕುತ್ತಿರುವ ಸಮುದಾಯಗಳನ್ನೆಲ್ಲ ಸಂಘಟಿಸಬೇಕಾದ ಅವಶ್ಯಕತೆಯ ಮಾತನ್ನು ಆಡಿದ್ದಾರೆ. ತಾವೇ ಆ ಅವಶ್ಯಕತೆಯನ್ನು ಪೂರೈಸಲು ಪ್ರಯತ್ನಿಸಬಹುದೆಂದೂ ಹೇಳಿದ್ದಾರೆ.
ಸಮಾಜದ ಎಲ್ಲ ಜನನವರ್ಗಗಳನ್ನು ಒಳಗೊಳ್ಳುವಂತಹ ಅಭಿವೃದ್ಧಿ ಮಾರ್ಗವೇ ನಿತೀಶ್ ರೂಪಿಸಿರುವ ಏಕತೆಯ ಮಾರ್ಗ. ದೆಹಲಿಯ ಅಧಿಕಾರ್ ಮೇಳದಲ್ಲಿ ನಿತೀಶ್ ನೇರವಾಗಿ ಬಿಜೆಪಿಯ ಪ್ರಸ್ತಾಪವನ್ನು ಮಾಡಿಲ್ಲ. ನರೇಂದ್ರ ಮೋದಿಯ ಹೆಸರನ್ನೂ ಹೇಳಿಲ್ಲ. ಆದರೆ ಅಧಿಕಾರ್ ಮೇಳಕ್ಕೆ ತಮ್ಮ ಪಕ್ಷದ ಸಂಗಾತಿಯಾಗಿರುವ ಭಾರತೀಯ ಜನತಾ ಪಕ್ಷದ ನಾಯಕರಿಗೂ ಆಹ್ವಾನವಿರಲಿಲ್ಲ. ಇದು ನಿತೀಶ್, ಬಿಜೆಪಿಯಿಂದ ದೂರ ಸರಿಯುತ್ತಿರುವುದಕ್ಕೆ ಸೂಚನೆ ಎನ್ನುವ ಅಭಿಪ್ರಾಯ ರಾಜಕಾರಣಿಗಳಲ್ಲಿ ಮೂಡಿದೆ. ಮತ್ತೊಂದು ಸನ್ನಿವೇಶದಲ್ಲಿ ನಿತೀಶ್ ಕುಮಾರ್ ಕಾಂಗ್ರೆಸ್ಸೇತರ- ಬಿಜೆಪಿಯಿಂದ ದೂರವಾದ ಅಭಿವೃದ್ಧಿ ಆಧರಿತ ರಾಜಕೀಯ ಮಾರ್ಗದ ಪ್ರಸ್ತಾಪವನ್ನು ಮಾಡಿದ್ದೂ ಉಂಟು. ಅಂದರೆ, ಕಾಂಗ್ರೆಸ್ ವಿರೋಧಿ ಐಕ್ಯ ರಂಗದಲ್ಲಿ ಪ್ರಧಾನಿಯಾಗಬಲ್ಲ ವ್ಯಕ್ತಿ ನರೇಂದ್ರ ಮೋದಿ ಒಬ್ಬರೇ ಅಲ್ಲ, ತಾವೂ ಆ ವಲಯದಲ್ಲೇ ಇರುವುದಾಗಿ ಸೂಚನೆಯನ್ನೂ ನೀಡಿದಂತೆಯೇ ಆಯಿತು.
2014ರ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಹಾಗೂ ನಿತೀಶ್ ಕುಮಾರ್ ಅವರನ್ನು ಯಾವ ಪ್ರಮುಖ ಶಕ್ತಿಯೂ ಕಡೆಗಾಣಿಸುವುದು ಸಾಧ್ಯವೇ ಇಲ್ಲದಂತಹ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಈಗ ಆರಂಭವಾಗಿದೆ. ರಾಷ್ಟ್ರೀಯ ರಾಜಕಾರಣದಲ್ಲಿ ಇದೊಂದು ಪ್ರಮುಖ ತಿರುವು. ಆದರೆ ಇದುವರೆಗೂ ಬಿಹಾರದ ರಾಜಕೀಯಕ್ಕೇ ಸೀಮಿತವಾಗಿದ್ದ ನಿತೀಶ್ ಕುಮಾರ್, ಇದ್ದಕ್ಕಿದ್ದಂತೆ ಅಖಿಲ ಭಾರತ ರಾಜಕೀಯಕ್ಕೆ ಜಿಗಿಯುವ ಚಿಂತನೆ ನಡೆಸುವುದನ್ನು ಯಾರೂ ವಿರೋಧಿಸಲಾರರು, ಅದನ್ನು ತಪ್ಪು ಎಂದೇನೂ ಹೇಳುವಂತಿಲ್ಲ. ಹಿಂದೆ ಪ್ರಾದೇಶಿಕವಾಗಿ ಪ್ರಬಲ ಶಕ್ತಿಗಳ ನಾಯಕರಾಗಿದ್ದವರು ರಾಷ್ಟ್ರೀಯ ರಾಜಕೀಯ ಚುಕ್ಕಾಣಿ ಹಿಡಿಯಲು ಹೊರಟು ವಿಫಲರಾಗಿದ್ದೂ ಉಂಟು. ಹಾಗೆಂದ ಮಾತ್ರಕ್ಕೇ ಈಗ ನಿತೀಶ್ ಕುಮಾರ್ ಪ್ರಯತ್ನ ಯಶಸ್ವಿಯಾಗಬಾರದೆಂದೇನೂ ಅಲ್ಲ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಇನ್ನೂ ನಡೆದಿಲ್ಲ. ದೆಹಲಿಯ ಅಧಿಕಾರ್ ಮೇಳ ಒಂದು ಮೊದಲ ಹೆಜ್ಜೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement