ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅತ್ಯಾಚಾರ ತಡೆ ಶಾಸನ

Srinivasa Murthy VN
Updated On : 20 Mar 2013, 11:06 am

ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ಮಹಿಳೆಯರ ಮೇಲಿನ ಲೈಂಗಿಕ ಅತ್ಯಾಚಾರ ತಡೆ ಶಾಸನವನ್ನು ಹಲವು ಬದಲಾವಣೆಗಳೊಂದಿಗೆ ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿದ್ದು, ಆ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ. ಆದರೆ ಲೋಕಸಭೆಯಲ್ಲಿ ಈ ವಿಚಾರ ಕುರಿತಂತೆ ಪ್ರಕಟವಾದ ಕೆಲವರ ಅಭಿಪ್ರಾಯವನ್ನು ಗಮನಿಸಿದರೆ, ಇಂತಹ ಕ್ರಮದ ಉದ್ದೇಶದ ಈಡೇರಿಕೆಯಲ್ಲಿ ಕಾಯಿದೆ ಹಾಗೂ ಪೊಲೀಸ್ ಶಕ್ತಿಯ ಪ್ರಯೋಗಕ್ಕಿಂತ ಸಮಾಜದ ಮಾನಸಿಕ ಸುಧಾರಣೆಯೇ ಹೆಚ್ಚು ಪರಿಣಾಮಕಾರಿ ಎನ್ನುವ ಅಂಶ ಯಾರಿಗಾದರೂ ಗೋಚರವಾಗಬಹುದು.
ಈ ಕಾಯಿದೆಯ ಉದ್ದೇಶ ಮಾಲತಃ ಮಹಿಳೆಯರಿಗೆ ಲೈಂಗಿಕ ಆಕ್ರಮಣದ ವಿರುದ್ಧ ರಕ್ಷಣೆ ಕೊಡುವುದಾದರೂ ಅಲ್ಲಿ ಅಳವಡಿಸಲಾಗಿರುವ ಕೆಲವು ವಿಧಿ- ನಿಯಮಗಳು ಹಾಗೂ "ಸಮ್ಮತಿ ಸೆಕ್ಸ್‌ಗೆ" ಒಪ್ಪಿಗೆ ನೀಡಲಿಕ್ಕೆ ಹೆಣ್ಣಿಗೆ ಕನಿಷ್ಠ ವಯೋವುತಿಯನ್ನು ಹದಿನಾರು ವರ್ಷಗಳಿಂದ ಹದಿನೆಂಟು ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪ ಕುರಿತು ಅನೇಕ ಹಿರಿಯ ಸಂಸದರ ದೃಷ್ಟಿಕೋನ ಅರ್ಥವಾಗುವಂತಹದ್ದಲ್ಲ. ಅಲ್ಲಿ ಸ್ತ್ರೀಯರ ಹಿಯಾಳಿಕೆಯ ಛಾಯೆ ಇದೆ. ಹದಿನಾರು- ಹದಿನೆಂಟು ವರ್ಷಗಳ ನಡುವೆ ಇರುವ ಅಂತರ ಎರಡೇ ವರ್ಷಗಳು. ಅಷ್ಟರಲ್ಲೇ ಭಾರತೀಯ ಮಹಿಳೆಯರಲ್ಲಿ ಎಷ್ಟರ ಮಟ್ಟಿಗೆ ಪ್ರಬುದ್ಧತೆಯಲ್ಲಿ ಬದಲಾವಣೆಯಾಗುವುದು ಸಾಧ್ಯ?
ಚರ್ಚೆಯ ಕಾಲದಲ್ಲಿ ಹೆಚ್ಚಾಗಿ ಪ್ರಸ್ತಾಪವಾಗಿದ್ದು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನಕ್ಕೆ ಸಂಬಂಧಿಸಿದ ವಿಚಾರಗಳಲ್ಲ. ಆ ಅಪರಾಧಕ್ಕೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ವಿಚಾರದಲ್ಲಿ ಒಮ್ಮತವಿತ್ತು. ಆದರೆ ಹೆಣ್ಣು ಮಕ್ಕಳಿಗೆ ಹದಿನಾರನೆಯ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡುವಷ್ಟು ಪ್ರಬುದ್ಧತೆ ಇರಲಾರದೆನ್ನುವ ವಾದವನ್ನು ಅನೇಕರು ಬಲವಾಗಿ ಪ್ರತಿಪಾದಿಸಿದರು.
ಆ ವಿಧಿಯ ಪರಿಣಾಮವಾಗಿ ಹದಿನಾರು ವರ್ಷದ ಹುಡುಗಿ ಸಮ್ಮತಿ ನೀಡಿದರೂ ಲೈಂಗಿಕ ಸಂಪರ್ಕವನ್ನು ಅತ್ಯಾಚಾರವೆಂದೇ ಪರಿಗಣಿಸಬೇಕಾಗುತ್ತದೆ. ಈ ವಿಧಿ ಒಂದು ರೀತಿಯಲ್ಲಿ ಯುವಕ- ಯುವತಿಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ದಮನ ಮಾಡಿದಂತಾದೀತು ಎನ್ನುವ ಎಚ್ಚರಿಕೆ ಕೇಳಿ ಬಂದಿತ್ತು. ನಿಜ. ಆದರೆ ಆ ಧ್ವನಿ ಕ್ಷೀಣವಾಗಿತ್ತು. ಹೆಣ್ಣು ಮಕ್ಕಳನ್ನು ಅಶ್ಲೀಲ ರೀತಿಯಲ್ಲಿ ಚುಡಾಯಿಸುವುದು, ಅವರ ಹಿಂದೆ- ಮುಂದೆ ಅಸಹ್ಯ ರೀತಿಯಲ್ಲಿ ವರ್ತಿಸಿ ಅಥವಾ ಹಿಂಬಾಲಿಸಿ ಕಿರುಕುಳ ಕೊಡುವುದು. ಇದೆಲ್ಲವೂ ಕ್ರಿಮಿನಲ್ ಆರೋಪಗಳಾಗಿ ಪರಿವರ್ತನೆಯಾಗಲಿವೆ.
ಇದರಿಂದ "ನೈತಿಕ ಪೊಲೀಸರಿಗೆ" ಕಾಯಿದೆಯೇ ಒಂದು ದೊಡ್ಡ ಅಸ್ತ್ರವನ್ನೇ ಕೊಟ್ಟಂತೆ ಆಗಬಹುದು. ಗಂಡಸರ ಮೇಲೆ ಸುಳ್ಳು ದೂರುಗಳನ್ನು ಹೊರಿಸುವುದು ಹೆಚ್ಚಾಗಿ ಪೊಲೀಸರ ಹಸ್ತಕ್ಷೇಪಕ್ಕೆ ಆಹ್ವಾನ ಕೊಟ್ಟಂತೆ ಆದರೂ ಆಗಬುಹುದು. ನಿಜ. ಅದು ಕಾಯಿದೆಯ ಉದ್ದೇಶವಲ್ಲ. ಆದರೆ ಅತ್ಯುತ್ಸಾಹದಿಂದ ಹೆಣ್ಣಿನ ಮಾನ- ಮರ್ಯಾದೆಯ ರಕ್ಷಣೆಗೆಂದು ಕಾಯಿದೆಯಲ್ಲಿ ಇಂತಹ ಅಂಶಗಳನ್ನು ಸೇರಿಸಲಾಗಿದೆ.
ಈ ಕಾಯಿದೆಯನ್ನು ಹಾದಿ ಬೀದಿಗಳಲ್ಲಿ ಜಾರಿಗೆ ತರಬೇಕಾದವರು ಪೊಲೀಸರು. ನಮ್ಮಲ್ಲಿ ಇಂತಹ ಸಾಮಾಜಿಕ ಹಿತರಕ್ಷಣೆಯ ಕಾಯಿದೆಗಳನ್ನು ಜಾರಿಗೆ ತರುವುದಕ್ಕೆ ಬೇಕಾದ ಶಿಕ್ಷಣ ನೀಡುವುದಿಲ್ಲ. ಹೀಗಾಗಿ ಬಹುತೇಕ ಪೊಲೀಸರು ಹರೆಯದ ಮಕ್ಕಳು- ಹುಡುಗರನ್ನು ಪೀಡಿಸುವುದು ಹೆಚ್ಚಾಗಬಹುದು. ಈ ವಿಚಾರದಲ್ಲಿ ಪೊಲೀಸರಿಗೆ ಸೂಕ್ತ ರೀತಿಯ ಶಿಕ್ಷಣ ಅಗತ್ಯವೆನ್ನುವುದನ್ನು ಸರ್ಕಾರವೂ ಮನಗಾಣಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಹೆಣ್ಣಿಗೆ ಸೂಕ್ತವಾದ ಸ್ಥಾನ-ಮಾನ ಸಿಗಬೇಕಾದರೆ, ಎಲ್ಲ ವರ್ಗಗಳ ಜನರಲ್ಲೂ ಅಂತಹ ಪ್ರಜ್ಞೆ ಮೂಡಬೇಕು. ಅದು ಕೇವಲ ಲೈಂಗಿಕ ಚಟುವಟಿಕೆಗೇ ಸೀಮಿತವಾಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement