ಲೆಕ್ಕಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು
ಮಾ.19 ರಂದು ನಡೆದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ 14 ಅಂಕಗಳ ಎರಡು ಪ್ರಶ್ನೆಗಳಲ್ಲಿ ತಪ್ಪುಗಳಿದ್ದು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಅದರಲ್ಲೂ ತಪ್ಪುಗಳಿದ್ದುದು ಆಂಗ್ಲ ಭಾಷೆಯಲ್ಲಿ ಮುದ್ರಿತವಾದ ಪ್ರತಿಯಲ್ಲಿ. ಮೊದಲ ತಪ್ಪು ಸಿ ವಿಭಾಗದಲ್ಲಿ ಪ್ರಶ್ನೆ ಸಂಖ್ಯೆ 16 ಏಕ ನಮೂದು ಪದ್ದತಿಯಲ್ಲಿ. ಇದರಲ್ಲಿ ಹೊಂದಾಣಿಕೆಗಳು ಎಂಬಲ್ಲಿ ಅಂತಿಮ ಬಂಡವಾಳದ ಮೇಲೆ ವಾರ್ಷಿಕ ಶೇ.5 ಬಡ್ಡಿ ಲೆಕ್ಕ ಹಾಕಲು ತಿಳಿಸಲಾಗಿದೆ. ಆದರೆ ಕನ್ನಡ ಬಾಷಾಂತರದಲ್ಲಿ ಹೆಚ್ಚುವರಿ ಬಂಡವಾಳದ ಮೇಲೆ ಎಂದು ತಿಳಿಸಲಾಗಿದೆ. ಆದುದರಿಂದ ವಿದ್ಯಾರ್ಥಿಗಳು ನಾವು ಯಾವುದರ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಬೇಕು. ಒಂದು ವೇಳೆ ಅಂತಿಮ ಬಂಡವಾಳ ಎಂದು ತೆಗೆದುಕೊಂಡರೆ ಅದರ ಮೇಲೆ ಬಡ್ಡಿ ಬರುವುದಿಲ್ಲ ಅಂದರೆ ಸೊನ್ನೆ ಬಡ್ಡಿ. ಹಾಗಾದರೆ ಇದನ್ನು ಕೊಡುವ ಅಗತ್ಯವೇನಿತ್ತು. ಆದರೆ ಕನ್ನಡ ಭಾಷಾಂತರದ ಪ್ರಕಾರ ಸರಿ ಇದೆ ಹಾಗೂ ಸಾಮಾನ್ಯವಾಗಿ ಅದೇ ರೀತಿಯಲ್ಲಿ ಪ್ರಶ್ನೆ ಇರುತ್ತದೆ. ಸಾಮಾನ್ಯವಾಗಿ ಕನ್ನಡ ಭಾಷಾಂತರದ ಪ್ರತಿಯಲ್ಲಿ ತಪ್ಪುಗಳಿದ್ದರೆ ಆಂಗ್ಲ ಭಾಷೆಯಲ್ಲಿರುವುದನ್ನು ಅಂತಿಮ ಎಂದು ಪರಿಗಣಿಸುವುದು ಪ್ರಸ್ತುತ.
ಏರಡನೇಯದಾಗಿ ಸಿ ವಿಭಾಗದ 20ನೇ ಕ್ರಮ ಸಂಖ್ಯೆಯ ಪ್ರಶ್ನೆಯಲ್ಲಿ ಆಂಗ್ಲ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ತಪ್ಪಾಗಿ ಮುದ್ರಿತವಾಗಿದೆ. ತಾಳೆ ಪಟ್ಟಿಯ ಕ್ರಮ ಸಂಖ್ಯೆ ಒಂದರಲ್ಲಿ ಶೇರು ಬಂಡವಾಳ ಜಮಾ 1,00,000 ಎಂದು ತೋರಿಸಲಾಗಿದೆ ಹಾಗೂ ಆವರಣದಲ್ಲಿ ಹತ್ತು ರೂಪಾಯಿಯ 1000 ಶೇರುಗಳು ಎಂದು ಮುದ್ರಿತವಾಗಿದೆ. ಯಾವುದು ಸರಿ ಒಂದು ಲಕ್ಷವೊ ಅಥವಾ 10,000ವೊ ಏಕೆಂದರೆ ಹತ್ತು ರೂಪಾಯಿಗಳ 1000 ಶೇರುಗಳು ಎಂದರೆ 10000 ಆಗುತ್ತದೆ.
ಪ್ರಶ್ನೆ ಪತ್ರಿಕೆಗಳಲ್ಲಿರುವ ತಪ್ಪುಗಳಿಂದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚುತ್ತದೆ ಹಾಗೂ ಸರಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೂ ತಪ್ಪು ಉತ್ತರ ಬರೆದು ಅನುತ್ತೀರ್ಣರಾಗುವ ಸಾಧ್ಯತೆಗಳಿವೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೌಲ್ಯಮಾಪನದ ಸಮಯದಲ್ಲಿ ಸರಿಯಾದ ಕೃಪಾಂಕವನ್ನು ಕೊಡಲು ಸೂಚಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ವಿನಂತಿಸುತ್ತೇನೆ.
- ನೊಂದ ವಿದ್ಯಾರ್ಥಿಗಳು, ಕಾರ್ಕಳ
ಕೀಳು ಅಭಿರುಚಿ
ದಿನಾಂಕ 17.03.2013ರಂದು ಚಿತ್ರದುರ್ಗ ನಗರದ ಮುರುಘಾಮಠದ ಎದುರಿಗೆ ಇರುವ ಒಣಗಿದ ಕೆರೆಯ ಭಾಗದಲ್ಲಿ ಜನಸಂದಣಿಯಿತ್ತು. ನೋಡಿದಾಗ, ಸಿನಿಮಾ ಶೂಟಿಂಗ್ ಎಂದು ಅಲ್ಲಿದ್ದವರು ಹೇಳಿದರು. ಅಲ್ಲಿನ ಕಾನೂನುಬಾಹಿರ ದೃಶ್ಯವನ್ನು ಕಂಡು ಮನಸ್ಸು ಆಕ್ರೋಶಗೊಂಡಿತು. ಹುಡುಗಿಯೊಬ್ಬಳು ಅತ್ಯಂತ ಕನಿಷ್ಠ ಬಟ್ಟೆಯಲ್ಲಿ, ಕೆರೆಯ ಕೆಸರು ಗುಂಡಿಯಲ್ಲಿ ಅತ್ಯಾಚಾರದ ದೃಶ್ಯ! ಶೂಟಿಂಗ್ ಮುಗಿದ ನಂತರ ನಾಲ್ಕು ಗಂಡಸರು ಬಟ್ಟೆ ಅಡ್ಡ ಹಿಡಿದು ಕೆಸರಾಗಿದ್ದ ಆಕೆಯನ್ನು ತೊಳೆಯಲು ಸಹಾಯ ಮಾಡುತ್ತಿದ್ದರು. ಮನಸ್ಸು ಕಲಕಿ ಮೂಡಿದ ಪ್ರಶ್ನೆಗಳೆಂದರೆ,
1. ಸೇರಿದ ನೂರಾರು ಜನರೆದುರು (ಮಕ್ಕಳೂ ಸಹ) ಇಂತಹ ದೃಶ್ಯಗಳನ್ನು ಚಿತ್ರೀಕರಣ ಮಾಡಬಹುದೇ? 2. ಚಿತ್ರೀಕರಣ ಮುಗಿದ ಮೇಲೆ ಆಕೆಗೆ ಸಹಾಯಕ್ಕಾಗಿ ಮಹಿಳೆಯರೇ ಇರಬೇಕಲ್ಲವೇ? 3. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಇಂತಹ ಕಾಲದಲ್ಲಿ ಸ್ತ್ರೀಯನ್ನು ಈ ರೀತಿ ನಡೆಸಿಕೊಳ್ಳಲು ಪೊಲೀಸ್ ಹಾಗೂ ವಿವಿಧ ಅಧಿಕಾರಿಗಳು ಅವಕಾಶಕ್ಕಾಗಿ ಒಪ್ಪಿಗೆ ನೀಡುವುದು ಸರಿಯೇ? 4. ಈ ದೃಶ್ಯವನ್ನು ಸಾರ್ವಜನಿಕ ಮಹಾಶಯರು ಎಗ್ಗಿಲ್ಲದೇ ನೋಡುವಷ್ಟು ನೈತಿಕ ಮಟ್ಟ ಕೆಳಗಿಳಿದಿದೆಯೇ?
ಎಲ್ಲಿಯೇ ಆಗಲಿ, ಸ್ತ್ರೀ ಶೋಷಣೆಯನ್ನು ತಕ್ಷಣದಲ್ಲಿಯೇ ವಿರೋಧಿಸುವ ಜಾಗೃತ ಮನೋಭಾವ ಎಲ್ಲರಲ್ಲಿಯೂ ಮೂಡುವುದಾದರೂ ಎಂದು?
- ನಿರ್ಮಲ ಮರಡಿಹಳ್ಳಿ, ಚಿತ್ರದುರ್ಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com