ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾಂಗ್ರೆಸ್: ಒಳ್ಳೆಯ ನಿರ್ಧಾರ

Srinivasa Murthy VN
Updated On : 26 Mar 2013, 11:39 am

ಕ್ರಿಮಿನಲ್ ಜಾತಕವಿರುವವರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆ ಪಕ್ಷದ ಟಿಕೆಟ್ ಸಿಗುವುದಿಲ್ಲವೆಂದು ಕಾಂಗ್ರೆಸ್ ನಿರ್ಧರಿಸಿರುವುದು ನಿಜಕ್ಕೂ ಒಂದು ಮಹತ್ವದ ವಿಚಾರ. ನಿಜ. ಹಿಂದೆಯೂ ಕಾಂಗ್ರೆಸ್ ನಾಯಕರು ಇಂತಹ ನಿರ್ಧಾರವನ್ನು ಪ್ರಕಟಿಸಿದ್ದೂ ಉಂಟು. ಆದರೆ ಆಗ ಕ್ರಿಮಿನಲ್ ಜಾತಕ ಎಂದರೇನು ಎನ್ನುವುದನ್ನು ವಿವರಿಸಿರಲಿಲ್ಲ. ಈಗ ಕಾಂಗ್ರೆಸ್ ಈ ವಿಚಾರದಲ್ಲಿ ಸ್ಪಷ್ಟತೆ ನೀಡಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ, ಪೊಲೀಸರು ಚಾರ್ಜ್‌ಷೀಟ್ ಹಾಕಿದ್ದರೆ (ಅಂದರೆ ನ್ಯಾಯಾಲಯಕ್ಕೆ ಪೊಲೀಸ್ ವರದಿ ನೀಡಿದ್ದರೆ), ಅದು ವಿಚಾರಣೆಗೆ ಸ್ವೀಕಾರವಾಗಿದ್ದರೆ, ಅಂತಹ ವ್ಯಕ್ತಿಗಳನ್ನು ಕ್ರಿಮಿನಲ್ ಜಾತಕದವರು ಎಂದು ಹೇಳಬಹುದು.
ಚಾರ್ಜ್‌ಷೀಟ್ ಬಿದ್ದ ನಂತರ ಕೇಸುಗಳನ್ನು ತಿಂಗಳುಗಟ್ಟಲೆ ಮುಂದಕ್ಕೆ ಹಾಕಿಸಿಕೊಳ್ಳುವುದು ಅನೇಕರು ಅನುಸರಿಸುವ ತಂತ್ರಗಾರಿಕೆ, ಅದನ್ನು ಕಾನೂನು ಒಪ್ಪಬಹುದು. ಆದರೆ ರಾಜಕೀಯ ಸಿದ್ಧಾಂತ ಒಪ್ಪಬಾರದೆಂದು ಅನೇಕರು ಮೊದಲಿನಿಂದಲೂ ವಾದಿಸುತ್ತಿದ್ದಾರೆ. ಅದನ್ನು ಸ್ಥೂಲವಾಗಿ ಕಾಂಗ್ರೆಸ್ಸೂ ಒಪ್ಪಿರುವುದು ಒಳ್ಳೆಯದೇ. ಒಂದು ನ್ಯಾಯಾಲಯದಲ್ಲಿ ಶಿಕ್ಷೆಯಾಗಿ, ಮೇಲ್ಮನವಿ ವಿಚಾರಣೆಯಾಗಬೇಕಾದ ಸ್ಥಿತಿಯಲ್ಲಿ ಇರುವವರೂ ಕ್ರಿಮಿನಲ್ ಜಾತಕದವರೇ. ಕಾಂಗ್ರೆಸ್ಸಿನ ಈ ನೀತಿಯನ್ನು ಇತರ ಪ್ರಮುಖ ಪಕ್ಷಗಳಾದರೂ ಒಪ್ಪಬೇಕು. ನಿಜ. ರಾಜಕೀಯ ಹೋರಾಟಗಳ ಸಂಬಂಧದಲ್ಲಿ ಬಂಧಿತರ ಮೇಲೂ ಪೊಲೀಸರು ಕ್ರಿಮಿನಲ್ ಆರೋಪಗಳನ್ನೇ ಹೊರಿಸುವುದು. ಆ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಾಯಕರು ತಮ್ಮ ವಿವೇಚನೆಯನ್ನು ಬಳಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದು ಸೂಕ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement