ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದ ಗವರ್ನರ್ ಜನರಲ್ ಆಗಿ 1828ರಿಂದ 1835 ರವರೆಗೆ ಅಧಿಕಾರದಲ್ಲಿದ್ದರು. ಆಗ ನಡೆದ ಒಂದು ಘಟನೆ ಅಂದಿನ ಬ್ಯಾಂಕುಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದವು ಎಂಬುದಕ್ಕೆ ಜೀವಂತ ನಿದರ್ಶನವಾಗಿದೆ. ಅದು ಬ್ರಿಟಿಷರ ಪ್ರಾಬಲ್ಯ ಹೆಚ್ಚಿದ್ದ ಕಾಲ. ಗವರ್ನರ್ ಜನರಲ್ ಎಂದರೆ ಪರಮೋಚ್ಚ ಅಧಿಕಾರ ಹೊಂದಿದ್ದ ವ್ಯಕ್ತಿ. ಒಂದು ರೀತಿಯ ನಿರಂಕುಶಾಧಿಕಾರ ಅವರಿಗಿತ್ತು. ಇಷ್ಟು ಬಲಾಢ್ಯರಾದ ಅಧಿಕಾರಿಯ ಚೆಕ್ಕನ್ನು ಬ್ಯಾಂಕ್ ಒಂದರ ಸಿಬ್ಬಂದಿ ಬೌನ್ಸ್ ಮಾಡಿದರೆ? ಅದೂ ನಾಲ್ಕಾಣೆಗಾಗಿ! ಪರಿಣಾಮ ಏನಾಗಬಹುದು ನೀವೇ ಓದಿ ನೋಡಿ....
ಲಾರ್ಡ್ ವಿಲಿಯಂ ಬೆಂಟಿಂಕ್ ಒಮ್ಮೆ ಬೆಂಗಾಲ್ ಬ್ಯಾಂಕಿಗೆ ಒಂದು ಚೆಕ್ಕನ್ನು ಕಳುಹಿಸಿದರು. ಚೆಕ್ಕಿನ ಹಣ ಅವರ ಖಾತೆಯಲ್ಲಿದ್ದ ಹಣಕ್ಕಿಂತ ನಾಲ್ಕಾಣೆ (ಇಂದಿನ ಇಪ್ಪತೈದು ಪೈಸೆ) ಜಾಸ್ತಿಯಾಗಿತ್ತು. ಸಾಮಾನ್ಯವಾಗಿ ಚೆಕ್‌ನಲ್ಲಿ ನಮೂದಿಸಿದಷ್ಟು ಹಣ ಖಾತೆಯಲ್ಲಿಲ್ಲದಿದ್ದರೆ ಅಂತಹ ಚೆಕ್ ಅನ್ನು ವಾಪಸ್ಸು ಮಾಡುವುದು ಕಾನೂನು ರೀತ್ಯಾ ಸರಿಯಾದ ಮಾರ್ಗ. ಆದರೆ ಚೆಕ್‌ನಲ್ಲಿರುವ ಮೊಬಲಗಿಗೆ ನಾಲ್ಕಾಣೆ ಕಡಿಮೆ ಅವರ ಖಾತೆಯಲ್ಲಿದೆ. ಸಾಮಾನ್ಯವಾಗಿ ನಾಲ್ಕಾಣೆ ಯಾವ ಲೆಕ್ಕಕ್ಕೂ ಇಲ್ಲ. ಸಾಮಾನ್ಯರ ಚೆಕ್ ಆಗಿದ್ದರೆ ಹಾಗೆಯೇ ಹಿಂದಿರುಗಿಸಬಹುದಿತ್ತು. ಆದರೆ ಗವರ್ನರ್ ಜನರಲ್‌ರ ಚೆಕ್ ಮರಳಿಸುವುದು ಹೇಗೆ? ಬ್ಯಾಂಕ್ ಗುಮಾಸ್ತನ ತಲೆ ಚಿಟ್ಟುಹಿಡಿಯಿತು. ತಾನೇ ನಾಲ್ಕಾಣೆ ಕೈಯಿಂದ ಹಾಕಿ ಚೆಕ್ಕನ್ನು ಪಾಸುಮಾಡಿ ಕಳುಹಿಸಲು ಮೊದಲು ನಿರ್ಧರಿಸಿದನಾದರೂ ಅದಕ್ಕೆ ಮನಸೊಪ್ಪಲಿಲ್ಲ. ಅವನ ಕರ್ತವ್ಯ ಪ್ರಜ್ಞೆ ಜಾಗೃತವಾಯಿತು. ಬ್ಯಾಂಕ್ ನಿಯಮದ ರೀತಿ ಚೆಕ್ಕನ್ನು ಮಾನ್ಯ ಮಾಡಲು ಸಾಧ್ಯವಿಲ್ಲ, ತಪ್ಪು ಯಾರು ಮಾಡಿದರೂ ತಪ್ಪೇ... ಹೀಗೆ ಯೋಚಿಸಿದ ಗುಮಾಸ್ತ ತುಂಬಾಹೊತ್ತು ಆಲೋಚಿಸಿ, ಕೊನೆಗೆ ನಿಯಮದಂತೆ ಚೆಕ್ಕನ್ನು ಹಿಂದುರಿಗಿಸಿ, ಅದಕ್ಕೆ ಕಾರಣವನ್ನೂ ನೀಡಿದ. ಮುಂದಿನ ಕ್ರಮವನ್ನು ಕುರಿತು ಬ್ಯಾಂಕಿನ ಎಲ್ಲ ಸಿಬ್ಬಂದಿ ವರ್ಗದವರಿಗೂ ಏನಾಗಬಹುದೋ ಎಂಬ ಆತಂಕ ಮನೆಮಾಡಿತ್ತು. ಈ ಘಟನೆ ನಡೆದ ಒಂದೆರಡು ದಿನಗಳಲ್ಲಿ ಗವರ್ನರ್ ಜನರಲ್‌ನ ಕಚೇರಿಯಿಂದ ಪತ್ರವೊಂದು ಬ್ಯಾಂಕಿಗೆ ಬಂತು. ಅದನ್ನು ಸ್ವತಃ ಲಾರ್ಡ್ ವಿಲಿಯಂ ಬೆಂಟಿಂಕರೇ ಖುದ್ದಾಗಿ ಬರೆಸಿ, ಸಹಿಹಾಕಿದ್ದರು. ಅದರಲ್ಲಿ ಹೀಗಿತ್ತು, ನಾಲ್ಕಾಣೆಗಾಗಿ ಗವರ್ನರ್ ಜನರಲ್‌ರ ಚೆಕ್ಕನ್ನು ಹಿಂದಿರುಗಿಸುವಷ್ಟು ಸಾಹಸ ಹಾಗೂ ಕರ್ತವ್ಯನಿಷ್ಠೆ ಹೊಂದಿರುವಂಥ ಬೆಂಗಾಲ್ ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದು ಅತ್ಯಂತ ಸುರಕ್ಷಿತವಾದುದು. ಪತ್ರವನ್ನೋದಿದ ಬ್ಯಾಂಕಿನ ಸಿಬ್ಬಂದಿಗೆ ಆತಂಕ ದೂರವಾಗಿ ಸಂತಸ ಮನೆಮಾಡಿತು. ಕರ್ತವ್ಯ ಮೆರೆದ ಗುಮಾಸ್ತನನ್ನು ಎಲ್ಲರೂ ಶ್ಲಾಘಿಸಿ ಅಭಿನಂದಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com