ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಬಿ.ಎಸ್. ರಮೇಶ್ ಅವರು ಬರೆಯುತ್ತಾರೆ- 'ನಿಮ್ಮ ಕ್ರೀಡಾಪುಟದಲ್ಲಿನ ಎರಡು ತಪ್ಪುಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಮಾ.13ರ (ಪುಟ 16) ಕ್ರೀಡಾಪುಟದಲ್ಲಿ 'ಪಾಕ್ ಅಟ್ಟಾಡಿಸಿದ ಭಾರತ' ಅಂತ ತಲೆಬರಹ ಇದೆ. ಅಂದರೆ ಭಾರತವನ್ನು ಪಾಕ್ ಅಟ್ಟಾಡಿಸಿತು ಅಂತ ಅರ್ಥ ಬರುವುದಿಲ್ಲವೇ....? ಇದು 'ಪಾಕ್ ಅನ್ನು ಅಟ್ಟಾಡಿಸಿದ ಭಾರತ' ಅಂತಿದ್ದರೆ ಸರಿಯಾಗಿರುತ್ತಿತ್ತು ಅಲ್ಲವೇ...?'
'ಇದೇ ರೀತಿ ಪುಟ 15ರ 'ಆಡಳಿತ ಮಂಡಳಿ ನಿರ್ಧಾರಕ್ಕೆ ಸಿ.ಎಂ. ಬೆಂಬಲ' ತಲೆಬರಹದಲ್ಲಿ ವಾಟ್ಸನ್ ತಪ್ಪೊಪ್ಪಿಗೆ: ಈ ಪ್ಯಾರಾ ಗಮನಿಸಿ- 'ನಮ್ಮ ವರ್ತನೆ ಕೋಚ್ ಸೇರಿದಂತೆ, ನಾಯಕ ಹಾಗೂ ಈಡೀ ತಂಡದ ಮೇಲೆ' ಅಂತಿದೆ. ಇದು 'ಇಡೀ' ತಂಡದ ಮೇಲೆ ಅಂತಾಗಬೇಕು ಅಲ್ಲವೇ...? ನಿಮ್ಮ ವರದಿಗಾರರು ಈ ರೀತಿಯ ಸಣ್ಣ ತಪ್ಪನ್ನು ಗಮನಿಸುತ್ತಿಲ್ಲವೇಕೆ..?'
'ಮಾ.15ರ ಕ.ಪ್ರ.ದ 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಪ್ರಕಟವಾದ ಮೈಸೂರಿನ ಅನುಷಾರ ಪತ್ರ, ಅದಕ್ಕೆ ಸಂಪಾದಕರ ಉತ್ತರಕ್ಕೆ ಹೈಕೋರ್ಟ್ನ (ಸಹಕಾರ ಸಂಘ) ಉದ್ಯೋಗಿಯಾಗಿದ್ದ ನನ್ನ ಅನಿಸಿಕೆ ಹೀಗಿದೆ. ಹೈಕೋರ್ಟ್ನ ನ್ಯಾಯಮೂರ್ತಿಗಳು ನಿವೃತ್ತರಾದಾಗ ಹೈಕೋರ್ಟಿನ ನ್ಯಾಯಮೂರ್ತಿಗಳು ಅಂತ ಮೊದಲು ಹೇಳುವುದೇ ಸರಿ! ಏಕೆಂದರೆ ಹೈಕೋರ್ಟು ಮಾತ್ರವಲ್ಲದೇ ಇತರೇ ನ್ಯಾಯಾಲಯಗಳು ಇರುವುದರಿಂದ ಅಲ್ಲೂ ನ್ಯಾಯಮೂರ್ತಿಗಳು ಇರುತ್ತಾರೆ. ಆಗ ಆ ನ್ಯಾಯಮೂರ್ತಿಗಳು ನಿವೃತ್ತರಾದಾಗ ಅವರು ಇದ್ದ ನ್ಯಾಯಾಲಯದ ಹೆಸರು ಹೇಳುವುದು ವಾಡಿಕೆ ಅಲ್ಲವೇ...?' ಎಂದು ಪ್ರಶ್ನಿಸಿದ್ದಾರೆ.
ಬಿ.ಎಸ್. ರಮೇಶ್ ಅವರು ನಾನು ಬರೆದಿದ್ದನ್ನು ಸರಿಯಾಗಿ ಓದಿಲ್ಲ. ಓದಿದ್ದರೆ ಸೂಕ್ತವಾಗಿ ಅರ್ಥ ಮಾಡಿಕೊಂಡಿಲ್ಲ. ನಾನು ಹಲವು ಉದಾಹರಣೆಗಳ ಸಹಿತವಾಗಿ ಇದನ್ನು ವಿವರಿಸಿದ್ದೇನೆ. ಆದ್ದರಿಂದ ಮತ್ತೆ ವಿವರಿಸಲು ಹೋಗುವುದಿಲ್ಲ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಂಬುದಕ್ಕೂ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂಬುದಕ್ಕೂ ವ್ಯತ್ಯಾಸವಿದೆ.
'ಪಾಕ್ ಅಟ್ಟಾಡಿಸಿದ ಭಾರತ' ಶೀರ್ಷಿಕೆಗೆ ಸಂಬಂಧಿಸಿದಂತೆ ಅವರ ಮಾತನ್ನು ಒಪ್ಪಲು ತುಸು ಕಷ್ಟ. ಶೀರ್ಷಿಕೆಯಲ್ಲಿ ಅನ್ನು, ವನ್ನು ಮುಂತಾದ ಬಳಕೆಯನ್ನು ಮಾಡುವುದಿಲ್ಲ. ಸುದ್ದಿಯಲ್ಲಿ ಕೂಡ ತೀರಾ ಅಗತ್ಯವಿದ್ದಲ್ಲಿ ಮಾತ್ರ ಇಂತಹ ಬಳಕೆ ಮಾಡಬೇಕು ಎಂಬುದು ಪತ್ರಿಕಾ ಭಾಷೆಯ ಅಲಿಖಿತ ನಿಯಮ.
ಪತ್ರಿಕೆಗಳ ಭಾಷಾ ಬಳಕೆಯನ್ನು ಎಲ್ಲ ಸಂದರ್ಭದಲ್ಲಿಯೂ ಭಾಷೆಯ ಶುದ್ಧ ಬಳಕೆಯೊಂದಿಗೆ ಹೋಲಿಸಿ ನೋಡುವುದು ಸರಿಯಲ್ಲ. ಪತ್ರಿಕೆಗಳಲ್ಲಿ ಭಾಷೆ ಬಳಸುವಾಗ ಕೆಲವು ಇತಿ-ಮಿತಿಗಳಿರುತ್ತವೆ. ಅದಕ್ಕನುಗುಣವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಬರೆಯುವಾಗ 'ಗೌರವಾನ್ವಿತ ಮುಖ್ಯಮಂತ್ರಿಗಳು', 'ಘನ ಸರ್ಕಾರ' ಎಂಬೆಲ್ಲ ಬಳಕೆಗಳಿವೆ. ಆದರೆ ಪತ್ರಿಕೆಯಲ್ಲಿ 'ಮುಖ್ಯಮಂತ್ರಿ', 'ಸರ್ಕಾರ' ಎಂದಷ್ಟೇ ಬಳಸಲಾಗುತ್ತದೆ. ಇನ್ನು ಮೂರು-ನೂರು 'ಶ್ರೀ' ಇರಿಸಿಕೊಂಡಿರುವವರಿಗೆಲ್ಲ ನಾವು ಒಂದೇ 'ಶ್ರೀ' ಬಳಸುತ್ತೇವೆ.
-ವಿಶ್ವೇಶ್ವರಭಟ್