ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಹತ್ವಾಕಾಂಕ್ಷಿ ಮುಲಾಯಂ

Srinivasa Murthy VN
Updated On : 26 Mar 2013, 11:39 am

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ, ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ಅವರು ಸ್ವಭಾವತಃ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸುವವರೇ. ಈಗಂತೂ ಅವರ ಪುತ್ರ ಅಖಿಲೇಶ್ ಸಿಂಗ್ ಯಾದವ್ ಆ ರಾಜ್ಯದ ಮುಖ್ಯಮಂತ್ರಿಯಾದ ಅನಂತರ ಅದನ್ನೇ ಭದ್ರವಾದ ಬುನಾದಿಯನ್ನಾಗಿ ಮಾಡಿಕೊಂಡು ದೆಹಲಿಯ ಸಿಂಹಾಸನವನ್ನು ಹಿಡಿಯುವ ಉದ್ದೇಶವನ್ನು ಊರಿಗೆ ಮುಂಚೇಯೇ ಪ್ರಕಟಿಸಿ, ಮುಲಾಯಂ ಸಿಂಗ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಉತ್ತರ ಪ್ರದೇಶ ವಿಧಾನ ಸಭೆಯ ಚುನಾವಣೆಯಲ್ಲಿ ಗೆಲ್ಲುವವರೆಗೂ ಮುಲಾಯಂ ಸಿಂಗ್, ಕಾಂಗ್ರೆಸ್- ಬಿಜೆಪಿಗಳನ್ನು ಸಮಾನವಾಗಿ ವಿರೋಧಿಸುತ್ತಿದ್ದರು. ಅದು ಆ ರಾಜ್ಯದಲ್ಲಿ ಅವರಿಗೆ ಸುಲಭ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ ಕೂಟ ಸರ್ಕಾರದ ರಚನೆಯ ತಂತ್ರಕ್ಕೇ ಶರಣಾದರೂ, ಮುಲಾಯಂ ಸಿಂಗ್ ಯಾದವ್ ಅವರಿಗೆ ಆಹ್ವಾನ ನೀಡದೇ ಇದ್ದರೂ, ಸಮಾಜವಾದಿ ಪಾರ್ಟಿ, ಕಾಂಗ್ರೆಸ್ಸನ್ನು ಆಪತ್ತಿನ ಸಮಯದಲ್ಲಿ ರಕ್ಷಿಸುವ ವಚನ ನೀಡಿದಂತೆಯೇ ವರ್ತಿಸುತ್ತಾರೆ. ಅದು ಆ ಪಕ್ಷಕ್ಕೆ ಅನಿವಾರ್ಯ.
ಮುಲಾಯಂ ಸಿಂಗ್, ಸಂಸತ್ತಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಯಾವ ವಿಚಾರದಲ್ಲೂ ಕಾಂಗ್ರೆಸ್ ಕೂಟ ಸರ್ಕಾರವನ್ನು ತೀವ್ರವಾಗಿ ವಿರೋಧಿಸಿಲ್ಲ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕೂಟವನ್ನು ತ್ಯಜಿಸಿ, ಕೇಂದ್ರಕ್ಕೇ ಸವಾಲೆಸೆದು ನಿಂತಾಗ ಅದರ ಲಾಭವನ್ನು ರಾಜಕೀಯವಾಗಿ ಪಡೆದವರು ಮುಲಾಯಂ ಸಿಂಗ್. ಈಗ ದಕ್ಷಿಣದ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರು ಕಾಂಗ್ರೆಸ್ ಕೂಟ ಸರ್ಕಾರಕ್ಕೆ ವಿದಾಯ ಹೇಳಿದಾಗ, ಕಾಂಗ್ರೆಸ್ಸಿನ ರಕ್ಷಣೆಗೆ ತಾವಿದ್ದೇವೆ ಎಂದು ಮುಲಾಯಂ, ಮಾಯಾವತೀ ಪ್ರತ್ಯೇಕ ಪ್ರತ್ಯೇಕವಾಗಿ ಭರವಸೆ ನೀಡಿದರೂ, ಅಂತರಂಗದಲ್ಲಿ ಈಗ ದುರ್ಬಲವಾಗಿರುವ ಕೂಟ ಸರ್ಕಾರವನ್ನು ಬಗ್ಗಿಸಲು ಮುಲಾಯಂ ಮುಂದಾಗಿರುವುದೂ ನಿಜ.
ಕಾಂಗ್ರೆಸ್- ಬಿಜೆಪಿಗಳನ್ನು ಸಮಾನವಾಗಿ ವಿರೋಧಿಸಿ, ಕೇಂದ್ರದಲ್ಲಿ ಪರ್ಯಾಯ ಸರ್ಕಾರದ ಸ್ಥಾಪನೆಯೇ ಅವರ ನಿಜವಾದ ಉದ್ದೇಶವಾಗಿದ್ದರೆ ಈಗ ಕಾಂಗ್ರೆಸ್ ಕೂಟವನ್ನು ರಕ್ಷಿಸಲು ಮುಂದಾಗಿದ್ದೇಕೆ? ಕೋಮುವಾದಿ ಬಿಜೆಪಿಯನ್ನು ತಡೆಯುವುದಕ್ಕೆ ಎನ್ನುವ ಉತ್ತರವನ್ನು ಮುಲಾಯಂ ನೀಡಿದ್ದಾರೆ. ಅದನ್ನು ಯಾರೂ ಒಪ್ಪಲಾರರು.
ರಾಜಕೀಯದ ಚದುರಂಗದಲ್ಲಿ ಪ್ರಚಂಡವಾದ ಪಾಂಡಿತ್ಯವಿರುವ ಕರುಣಾನಿಧಿ, ಮುಲಾಯಂ ಸಿಂಗ್ ಯಾದವ್ ಅವರ ನಿಜವಾದ ಬಯಕೆಯನ್ನು ಗ್ರಹಿಸಿ, ಅದಕ್ಕೆ ಸೂಕ್ತ ರೀತಿಯ ಉತ್ತರ ಎನ್ನುವಂತೆ, ಡಿಎಂಕೆ ಆಳುವ ಕೂಟದಿಂದ ಹೊರಬಿದ್ದಿದ್ದು ಶ್ರೀಲಂಕಾ ತಮಿಳರ ವಿಚಾರದಲ್ಲಿ ಮಾತ್ರವೆಂದೂ, ಸರ್ಕಾರವನ್ನು ಉರುಳಿಸುವ ಬಯಕೆ ಡಿಎಂಕೆಗೆ ಲವಲೇಶವೂ ಇಲ್ಲವೆಂದೂ ಹೇಳಿ, ಮುಲಾಯಂ ಸಿಂಗ್ ಉತ್ಸಾಹಕ್ಕೆ ತಣ್ಣೀರು ಎರಚಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ, ತಮಿಳುನಾಡಿನಲ್ಲಿ ಡಿಎಂಕೆ- ಅಣ್ಣಾ ಡಿಎಂಕೆ, (ಎರಡರಲ್ಲಿ ಒಂದು) ಆಂಧ್ರದಲ್ಲಿ ತೆಲುಗು ದೇಶಂ ಅಥವಾ ವೈಎಸ್ಸಾರ್ ಕಾಂಗ್ರೆಸ್ ಬೆಂಬಲವಿಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಮೂರನೆಯ ರಂಗವನ್ನು ರಚಿಸುವುದೆಂದರೆ ತ್ರಿಶಂಕು ಅವಸ್ಥೆಯನ್ನು ತಲುಪುವುದೇ ಎನ್ನುವುದನ್ನು 2004ರ ಸುಮಾರಿನಲ್ಲೇ ಜಾತ್ಯತೀತ ಜನತಾ ದಳದ ದೇವೇಗೌಡರು ಚೆನ್ನಾಗಿ ತಿಳಿದುಕೊಂಡಿದ್ದರು. ಅವರ ಪ್ರಯತ್ನಕ್ಕೆ ಮುಲಾಯಂ ಆಗ ಕೈಗೂಡಿಸಲಿಲ್ಲ. ಕೇಂದ್ರದಲ್ಲಿ ಈಗ ಮನಮೋಹನ ಸಿಂಗ್ ಸರ್ಕಾರವನ್ನು ಉರುಳಿಸುವ ಉದ್ದೇಶ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೂ ಇಲ್ಲ, ಕಮ್ಯುನಿಸ್ಟರಿಗೂ ಅದು ಬೇಕಾಗಿಲ್ಲ. ಲೋಕಸಭೆ ಚುನಾವಣೆಗೆ ಇನ್ನೂ ಹದಿಮೂರು ತಿಂಗಳು ಬಾಕಿ ಇದೆ. ಈಗಾಗಲೇ ಆರಂಭವಾಗಿರುವ ರಾಜ್ಯಗಳ ವಿಧಾನಸಭೆ ಚುನಾವಣೆಯ ಸರಣಿಯಲ್ಲಿರುವ ರಾಜ್ಯಗಳಲ್ಲಿ ಮುಲಾಯಂ ಸಿಂಗ್ ಯಾದವ್‌ರ ಪಕ್ಷ ಲೆಕ್ಕಕ್ಕಿಲ್ಲ. ಆದರೂ ಮುಲಾಯಂ ಸಿಂಗ್, ಈ ಹಂತದಲ್ಲಿ ಮೂರನೆಯ ರಂಗದ ಪ್ರಸ್ತಾಪ ಮಾಡಿದ್ದೇಕೆ? ಕೇವಲ ಅಭ್ಯಾಸ ಬಲದಿಂದ ಇರಬೇಕಷ್ಟೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement