ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಇಂಥ ವಕಾಲತ್ತಿಗೆ ನಾಚಿಕೆಯಾಗದೇ?

Srinivasa Murthy VN
Updated On : 31 Mar 2013, 9:45 am

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಡಿ ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯದತ್, ಕೃಷ್ಣಮೃಗ ಬೇಟೆ ಪ್ರಕರಣದಡಿ ಸಲ್ಮಾನ್ ಖಾನ್, ಸೈಫ್ ಅಲಿಖಾನ್‌ರಿಗೂ ಕ್ಷಮೆ ನೀಡಬೇಕೆಂಬ ಕೋರಿಕೆ ಸಲ್ಲಿಸಲು ತಯಾರಿ ನಡೆಸುತ್ತಿರುವುದಾಗಿ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಹೇಳಿದ್ದಾರೆ. ಅಷ್ಟೇ ಅಲ್ಲ, 'ಭಾರತೀಯರೆಲ್ಲರೂ ಕುರಿಮಂದೆಯಂತೆ ಸರದಿಯಲ್ಲಿ ನಿಂತು ಮತದಾನ ಮಾಡುತ್ತಾರೆ. ಭ್ರಷ್ಟಾಚಾರವನ್ನು ಮುಂದಿನ 20 ವರ್ಷಗಳಲ್ಲಿ ನಿರ್ಮೂಲನೆ ಮಾಡಲು ಹೋರಾಡುವುದು ಮೂರ್ಖತನ' ಎಂಬ ನುಡಿಮುತ್ತು ಉದುರಿಸಿದ್ದಾರೆ. ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷತೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಂಡವರು ಇಂತಹ ಮಾತುಗಳನ್ನಾಡಬಹುದೇ? ಅಷ್ಟೇ ಅಲ್ಲ ಉಗ್ರರಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಪಡೆದುಕೊಂಡು ತನ್ನ ಮನೆಯಲ್ಲಿರಿಸಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಸುಮಾರು 20 ವರ್ಷಗಳ ಕಾಲ ವಿಚಾರಣೆ ನಡೆದು ಸಂಜಯದತ್‌ಗೆ ಶಿಕ್ಷೆಯಾಗಿದೆ. ಈ ಹಂತದಲ್ಲಿ ನಟನಿಗೆ ದಯಾಭಿಕ್ಷೆ ನೀಡಬೇಕೆಂದು ಮುಗಿಬಿದ್ದಿರುವ ಘಟಾನುಘಟಿಗಳಿಗೆ ಏನೆನ್ನಬೇಕು? ಅಲ್ಲದೇ ಸುಪ್ರಿಂ ಕೋರ್ಟಿನ ತೀರ್ಪಿಗೆ ತಲೆಬಾಗಿ ಶರಣಾಗುವುದಾಗಿ ಸಂಜಯದತ್ ಹೇಳಿಕೆ ನೀಡಿದಾಗ್ಯೂ ಇವರೇಕೆ ಅದೇ ವಿಚಾರವನ್ನು ಚರ್ಚೆಗೆ ಎಳೆದು ತರುತ್ತಾರೆ? ಸಂಜಯದತ್ ಶಿಕ್ಷೆಯನ್ನು ಅನುಭವಿಸಿ ಸಮಾಜದಲ್ಲಿ ಮುಂದಾದರೂ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಇವರೇಕೆ ದಾರಿಮಾಡಿಕೊಡುವುದಿಲ್ಲ?
ಅಳಿವಿನಂಚಿನಲ್ಲಿರುವ, ಸಂರಕ್ಷಿತ ಕೃಷ್ಣಮೃಗಗಳನ್ನು ಬೇಟೆಯಾಡಿದವರು ತೆರೆಯ ಮೇಲಷ್ಟೇ ಸಂದೇಶ ನೀಡಿದರೆ ಸಾಲದು. ನಿಜಜೀವನದಲ್ಲೂ ಅದನ್ನು ಪಾಲಿಸಬೇಕು. ಇಂಥವರಿಗೆ ಶಿಕ್ಷೆಯಿಂದ ವಿನಾಯ್ತಿ ನೀಡುವುದು, ತೆರೆಮರೆಯ ಹಿಂದೆ ಕಾಪಾಡುವುದು ಕಾನೂನಿಗೆ ಮಾಡುವ ಅಪಚಾರವೇ ಸರಿ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕಲ್ಲವೇ?
- ಹಲವಾಗಲ ಶಂಭು, ರಾಣೇಬೆನ್ನೂರು

ಬೆಂವಿವಿ ದೂರ ಶಿಕ್ಷಣ ವಿದ್ಯಾರ್ಥಿಗಳ ಗೋಳು

ಬೆಂಗಳೂರು ದೂರ ಶಿಕ್ಷಣ ವಿಶ್ವ ವಿದ್ಯಾಲಯದ ತುಮಕೂರಿನ ಇಂದಿರಾ ಕಾಲೇಜ್ ಅಧ್ಯಯನ ಕೇಂದ್ರ ದಿಂದ ಪ್ರಥಮ ,ದ್ವೀತಿಯ ವರ್ಷದ ಬಿ.ಎ. ಅಧ್ಯಯನ ಮಾಡಿರುತ್ತೇವೆ. ತೃತೀಯ ವರ್ಷಕ್ಕೆ ಪ್ರವೇಶ ಕಲ್ಪಿಸಲು ಬೆಂಗಳೂರು ದೂರ ಶಿಕ್ಷಣ ವಿಶ್ವವಿದ್ಯಾಲಯ ಯಾವುದೇ ಸೂಚನೆಯನ್ನು ಅಧ್ಯಯನ ಕೇಂದ್ರಗಳಿಗೆ ಕಳಿಸಿರುವುದಿಲ್ಲವಾದ್ದರಿಂದ ದೂರ ಶಿಕ್ಷಣ ವನ್ನು ಅಧ್ಯಯನ ಕೇಂದ್ರಗಳಿಂದ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ನಾವು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದಾಗ ಅಧ್ಯಯನ ಕೇಂದ್ರಗಳಿಗೆ ಅನುಮತಿ ಕೊಡುವ ಬಗ್ಗೆ ಇನ್ನೂ ತಿರ್ಮಾನಿಸಿಲ್ಲ ಎಂದು ಹೇಳುತ್ತಾರೆ. ಪ್ರವೇಶವನ್ನು ಬೆಂಗಳೂರಿಗೆ ಬಂದು ಖುದ್ದಾಗಿ ಆಗಬಹುದು, ಆದರೆ ನಿಮ್ಮ ಅಂಕ ಪಟ್ಟಿಯನ್ನು ತೆಗೆದುಕೊಂಡು  ಬರಬೇಕು ಎಂದು ಹೇಳುತ್ತಿದ್ದಾರೆ. ನಾವು ಅಧ್ಯಯನ ಕೇಂದ್ರಗಳಿಗೆ ಹೋಗಿ ಅಂಕ ಪಟ್ಟಿ ಕೇಳಿದರೆ ನಾವು ನಿಮಗೆ ಮಾರ್ಕ್ಸ್‌ಕಾರ್ಡ್ ಕೊಟ್ಟರೆ ನಿಮ್ಮ ಪದವಿ ಪ್ರಮಾಣ ಪತ್ರ ಪಡೆಯಲು ತೊಂದರೆಯಾಗುತ್ತದೆ ಎಂದು ಹೇಳುತಾರೆ. ನಾವು ಬೆಂಗಳೂರು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ಪಡೆಯುತ್ತಿದ್ದೆವೆಯೋ, ನರಕ ಅನುಭವಿಸುತ್ತಿದ್ದೇವೆಯೋ ಕುಲಪತಿಗಳೇ ತಿಳಿಸಬೇಕು. ಅಂತು ಇಂತೂ ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ದೂರವಾಗುತ್ತಿದೆ. ಕುಲಪತಿಗಳು ಬೇಗ ಅಧ್ಯಯನ ಕೇಂದ್ರಗಳಿಗೆ ಅನುಮತಿ ಕೊಟ್ಟು ನಮ್ಮ ಶಿಕ್ಷಣ ಮುಂದುವರೆಯಲು ಅನುವು ಮಾಡಿಕೊಡಬೇಕು.
- ಬಿ.ಸೌಮ್ಯ ಪರಮೇಶ್, ಮದ್ದಿಹಳ್ಳಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement