ಬಿಹಾರದ ಅಭಿವೃದ್ಧಿ ರಾಜಕೀಯ
ಕೇವಲ ಒಂದೂವರೆ ಗಂಟೆಗಳ ವಿಚಾರ ವಿನಿಮಯದ ಅನಂತರ ಯೋಜನಾ ಆಯೋಗ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆ ರಾಜ್ಯದ 34000 ಕೋಟಿ ರುಪಾಯಿಗಳ ವಾರ್ಷಿಕ ಯೋಜನೆಗೆ ಅಂತಿಮ ಅಂಗೀಕಾರ ಮುದ್ರೆಯನ್ನು ಒತ್ತುವ ಪ್ರಕ್ರಿಯೆಯನ್ನು ಮುಗಿಸಿದ್ದಾರೆ.
ಇಷ್ಟೇ ಅಲ್ಲ, ಇದರ ಜತೆಗೆ ಪ್ರತ್ಯೇಕವಾಗಿ ಗ್ರಾಮೀಣ ಸಂಪರ್ಕ ಯೋಜನೆಗೆ ಎಷ್ಟು ಹಣ ಬೇಕಾದರೂ ಕೇಂದ್ರ ಸರ್ಕಾರ ಕೊಡುವ ಭರವಸೆಯನ್ನೂ ನೀಡಿದೆ. ಇದಕ್ಕೆ ಮುಂಚೆಯೇ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಯೋಜನೆಯ ಅಂಗವಾಗಿ, 12,000 ಕೋಟಿ ರುಪಾಯಿಗಳೂ ಆ ರಾಜ್ಯಕ್ಕೆ ಸಿಕ್ಕಿದೆ.
ಬಿಹಾರದ ಪ್ರತಿನಿಧಿಗಳು ಕೇಳುತ್ತಿರುವ ವಿಶೇಷ ಸ್ಥಾನ-ಮಾನದ ಭರವಸೆ ಇನ್ನೂ ಸಿಕ್ಕಿಲ್ಲ ಎನ್ನುವುದು ನಿಜ. ಆ ಸಾಂಕೇತಿಕ ಪ್ರಕಟಣೆಯನ್ನು ಹಿಡಿದಿಟ್ಟುಕೊಂಡಿರುವುದನ್ನು ಬಿಟ್ಟರೆ ಬಿಹಾರಕ್ಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೇಕಾದಷ್ಟು ನೆರವು ಸಿಕ್ಕಿದೆ ಎನ್ನಬಹುದು. ನಿಜ. ಬಿಹಾರ ಬಡರಾಜ್ಯ. ಜಾರ್ಖಂಡ ರಾಜ್ಯ ನಿರ್ಮಾಣವಾದ ಅನಂತರ ಅಪಾರವಾದ ಖನಿಜ ಸಂಪತ್ತು, ಅರಣ್ಯ ಪ್ರದೇಶಗಳು ಆ ರಾಜ್ಯಕ್ಕೆ ಸೇರಿದ್ದರಿಂದ ಬಿಹಾರಕ್ಕೆ ಬಡ ರಾಜ್ಯದ ಹಣೆ ಪಟ್ಟಿಯನ್ನು ಅಂಟಿಸುವುದರಲ್ಲಿ ಯಾವ ತಪ್ಪೂ ಇಲ್ಲ.
ಈಗ ಪ್ರಕಟವಾಗಿರುವ ಎಲ್ಲ ನೆರವೂ ಸದುಪಯೋಗವಾಗಿ, ಬಿಹಾರದ ಬಡತನದ ಬೇಗೆ ಸ್ವಲ್ಪವಾದರೂ ಕಡಿಮೆಯಾದರೆ, ಈಗಿನ ಕೊಡುಗೆ ಸ್ವಾಗತಾರ್ಹ. ಆದರೆ ಇಲ್ಲಿ ರಾಜಕೀಯದ ಕರಿನೆರಳು ಬಿದ್ದಿರುವುದರಿಂದ ಇಂತಹ ವಿಶೇಷ ನೆರವು ಅಸಹನೀಯವೆನಿಸಬಹುದು.
ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಕಳೆದ ಎರಡು ವರ್ಷಗಳಿಂದಲೂ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದಿಂದ ನಿರ್ಗಮಿಸುವ ಸೂಚನೆಯನ್ನು ನೀಡುತ್ತಲೇ ಇದ್ದಾರೆ. ಅಂತಹ ಸೂಚನೆ ನೇರವಾಗಿ ದೆಹಲಿಯನ್ನೇ ತಲುಪಲೆಂದು ರಾಷ್ಟ್ರದ ರಾಜಧಾನಿಯಲ್ಲೇ ಒಂದು ದೊಡ್ಡ ಬಿಹಾರಿ ಮೇಳವನ್ನು ನಡೆಸಿದರು. ಆ ಮೇಳದಲ್ಲಿ ಪ್ರಕಟವಾದ ಬೇಡಿಕೆ ಎಂದರೆ ಬಿಹಾರಕ್ಕೆ ವಿಶೇಷ ಸ್ಥಾನ-ಮಾನ.
ಕೇಂದ್ರ ಸರ್ಕಾರ ಹಾಗೂ ಯೋಜನಾ ಆಯೋಗ, ಅಭಿವೃದ್ಧಿಗೆ ನೆರವು ನೀಡುವ ವಿಚಾರದಲ್ಲಿ ರಾಜಕೀಯ ಪರಿಗಣನೆಗೆ ಅವಕಾಶವಿರಬಾರದು. ಅಂತಹ ಸಂಶಯಕ್ಕೂ ಅವಕಾಶವಿಲ್ಲದಂತೆ ವರ್ತಿಸಬೇಕು.