ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾಂಗ್ರೆಸ್‌ನ ಓಟು ಬೇಟೆ ಆರಂಭ

Srinivasa Murthy VN
Updated On : 17 May 2013, 9:42 am

ಮುಂದಿನ ವರ್ಷದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಕೇಂದ್ರದಲ್ಲಿ ಆಳುವ ಕೂಟದ ನೇತಾರ ಕಾಂಗ್ರೆಸ್ ತನ್ನ ಓಟಿನ ಬೇಟೆಯನ್ನು ಆರಂಭಿಸಿದೆ. ಆದರೆ ಆ ಪ್ರಯತ್ನಕ್ಕೆ ಅದು ಹಿಂದುಳಿದವರ ಕಲ್ಯಾಣದ ಲೇಪವನ್ನು ಹಚ್ಚಿದೆ.
ಸರ್ಕಾರಿ ನೌಕರಿ ಹಾಗೂ ವೈದ್ಯ - ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶದ ಮೀಸಲು ನಿಯಮಗಳಲ್ಲಿ ಇತರೆ ಹಿಂದುಳಿದ ಜಾತಿ - ಪಂಗಡಗಳಿಗೆ ಶೇಕಡಾ 27 ರಷ್ಟು ಸ್ಥಾನಗಳು ಮೀಸಲಾಗಿದೆ. ಆದರೆ ಈ ನಿಯಮದ ಜತೆಯಲ್ಲೇ ಕೆನೆಪದರದ (ಅಂದರೆ ಹಿಂದುಳಿದವರಲ್ಲೇ ಮುಂದುವರಿದವರು) ಕಲ್ಪನೆಯನ್ನೂ ಜೋಡಿಸಲಾಗಿದೆ. ಇದುವರೆಗೆ ವಾರ್ಷಿಕ ವರಮಾನ ನಾಲ್ಕೂವರೆ ಲಕ್ಷ ರುಪಾಯಿಗಳ ಗೆರೆಯನ್ನು ದಾಟಿದ್ದರೆ, ಅಂತಹವರು ಮೀಸಲು ಸ್ಥಾನದ ಸೌಲಭ್ಯವನ್ನು ಬಳಸುವಂತಿರಲಿಲ್ಲ.
ಇಂತಹ ಕೆನೆಪದರವನ್ನು ಮೀಸಲು ನೀತಿಯಿಂದ ಹೊರಗಿಡುವುದನ್ನು ಆ ವರ್ಗದ ಜನರ ಪ್ರತಿನಿಧಿಗಳು ವಿರೋಧಿಸಿದ್ದರು. ಹಿಂದುಳಿದಿರುವಿಕೆಗೆ ವರಮಾನದ ಮಿತಿ ಇರಬಾರದೆನ್ನುವುದು ಅವರ ವಾದ. ಕೊನೆಗೆ ಸುಪ್ರೀಮ್ ಕೋರ್ಟಿನ ಆದೇಶಕ್ಕೆ ತಲೆ ಬಾಗಿದ ಸರ್ಕಾರ ವಾರ್ಷಿಕ ನಾಲ್ಕೂವರೆ ಲಕ್ಷದ ಮಿತಿಯನ್ನು ಒಪ್ಪಿತ್ತು.
ಕಳೆದ ಐದು ವರ್ಷಗಳಿಂದಲೂ ಈ ನೀತಿ ಜಾರಿಯಲ್ಲಿತ್ತು. ಇಂದಿನ ರುಪಾಯಿಯ ಮೌಲ್ಯದ ಲೆಕ್ಕದಲ್ಲಿ ವಾರ್ಷಿಕ ನಾಲ್ಕೂವರೆ ಲಕ್ಷ ರುಪಾಯಿಗಳ ಆದಾಯ ದೊಡ್ಡದೇನೂ ಅಲ್ಲ ಎನ್ನುವ ವಾದವನ್ನು ಸರ್ಕಾರ ಈಗ ಒಪ್ಪಿ, ಆದಾಯ ಮಿತಿಯನ್ನು ವಾರ್ಷಿಕ ಲೆಕ್ಕದಲ್ಲಿ ಆರು ಲಕ್ಷ ರುಪಾಯಿಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ಬದಲಾವಣೆಯಿಂದ ಹಿಂದೆ ಮೀಸಲು ಸ್ಥಾನಗಳಿಗೆ ಅರ್ಹರಲ್ಲದ ಆರ್ಥಿಕ ವಲಯದಲ್ಲಿರುವ ಹಿಂದುಳಿದ ಜನ ವರ್ಗಗಳ ವ್ಯಕ್ತಿಗಳಲ್ಲಿ ಅನೇಕರಿಗೆ ಈಗ ಅಂತಹ ಅರ್ಹತೆ ಲಭ್ಯವಾಗುತ್ತದೆ. ಮೂಲಭೂತವಾಗಿ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ವಿರೋಧವೇನೂ ಇರಬೇಕಾಗಿಲ್ಲ. ಆದರೆ, ಚುನಾವಣೆಯ ವರ್ಷದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಮೀಸಲು ಸ್ಥಾನದಂತಹ ಸೂಕ್ಷ್ಮ ವಿಚಾರದಲ್ಲಿ ನಿರ್ಧಾರವನ್ನು ಪ್ರಕಟಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಉಳಿದೇ ಬಿಡುತ್ತದೆ.
ಇತರೆ ಹಿಂದುಳಿದ ಜಾತಿಗಳ ಸಮುದಾಯವೇ ದೇಶದಲ್ಲಿ ಮತದಾನದ ದೃಷ್ಟಿಯಿಂದ ಅತ್ಯಂತ ದೊಡ್ಡ ಸಮುದಾಯ. ಆ ಸಮುದಾಯದ ರಾಜಕೀಯ ಒಲವು ಹಾಗೂ ಇತರ ವಿಷಯಗಳಲ್ಲಿ ನಾಯಕತ್ವವನ್ನು ಒದಗಿಸುವುದು ಜನಾಂಗದ ಸುಶಿಕ್ಷಿತ - ಕಲಿತ - ಮಧ್ಯಮ ವರ್ಗ. ಕೇಂದ್ರ ಸರ್ಕಾರದ ಈಗಿನ ನಿರ್ಧಾರದಿಂದ ಈ ಮಧ್ಯಮ ವರ್ಗಕ್ಕೇ ಅತಿ ಹೆಚ್ಚು ಉಪಯೋಗವಾಗುವುದು. ಸಮುದಾಯದ ನಾಯಕತ್ವ ವಹಿಸಿರುವ ವರ್ಗದ ಬೆಂಬಲ ಪಡೆಯಲು ಕೇಂದ್ರ ಸರ್ಕಾರ ಅನುಸರಿಸಿದ ಈ ಕ್ರಮ ಆ ಜನವರ್ಗಗಳಲ್ಲೇ ಬಡವರಾಗಿರುವವರ ದೃಷ್ಟಿಯಿಂದ ಒಳ್ಳೆಯದೇನೂ ಅಲ್ಲ.
ಇತರೆ ಹಿಂದುಳಿದ ಸಮುದಾಯಗಳ ಬಡವರ ಜತೆಯಲ್ಲೇ, ಶ್ರೀಮಂತರು ಹಾಗೂ ಮಧ್ಯಮ ವರ್ಗದವರ ಅಧಿಕ ಪ್ರಮಾಣದ ಸ್ಪರ್ಧೆ ಏರ್ಪಾಟಾದರೆ ಬಡವರಿಗೇ ಪ್ರತಿಕೂಲವಾದ ಸ್ಥಿತಿ ನಿರ್ಮಾಣವಾಗುವುದು ಖಚಿತ. ಇಂತಹ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳುವಷ್ಟು ಸಾಮಾಜಿಕ ನ್ಯಾಯದ ಪ್ರಜ್ಞೆ ಇನ್ನೂ ಇತರೆ ಹಿಂದುಳಿದ ಜಾತಿಗಳ ಸಮುದಾಯದಲ್ಲಿ ಮೂಡಿಲ್ಲ.
ಕೇಂದ್ರದ ಇನ್ನೊಂದು ಪ್ರಮುಖ ನಿರ್ಧಾರದಂತೆ, ಕೆಲವು ರಾಜ್ಯಗಳಲ್ಲಿ ಕಡು ಬಡವರ ವರ್ಗಕ್ಕೆ ಸೇರದ ಅನೇಕ ಜಾತಿಗಳ ಜನವರ್ಗಗಳಿಗೆ ಅಗ್ಗದ ದರದಲ್ಲಿ (ಕೇಜಿಗೆ 15 ರುಪಾಯಿ. ಕುಟುಂಬಕ್ಕೆ ತಿಂಗಳಿಗೆ 35 ಕೇಜಿ) ಧಾನ್ಯ ಒದಗಿಸುವ ಕಾರ್ಯಕ್ರಮವೂ ಜಾರಿಗೆ ಬರಲಿದೆ. ಈ ನೀತಿ ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಚತ್ತೀಸಘಡ ರಾಜ್ಯಗಳಲ್ಲಿ ಜಾರಿಗೆ ಬರುವುದು ಖಚಿತ. ಆ ರಾಜ್ಯಗಳಲ್ಲಿ ಈಗ ವಿಧಾನ ಸಭೆ ಚುನಾವಣೆ ಸನ್ನಿಹಿತವಾಗಿದೆ. ಇಂತಹ ಅಗ್ಗದ ಜನಪ್ರಿಯತೆ ಗಳಿಸುವ ಪ್ರಯತ್ನದ ಯೋಜನೆಗಳಿಗೆ ಸಾವಿರಾರು ಕೋಟಿ ರುಪಾಯಿಗಳ ಹಣ ಒದಗಿಸಿದರೆ, ಅದರ ಪರಿಣಾಮವಾಗಿ ಅಭಿವೃದ್ಧಿ ಕೆಲಸ ಕುಂಠಿತವಾಗುವುದನ್ನು ಯಾರೂ ಗಮನಿಸುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement