ಇದು ಜವಾಬ್ದಾರಿಯ ಮಾತಲ್ಲ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಐಪಿಎಲ್ ಪಂದ್ಯ ನಡೆದಾಗ, ಸ್ವಲ್ಪ ಕಾಲ ಹೊರಗೆ ಹೋಗಿದ್ದ 37 ವರ್ಷದ ಮನೋಜ್ ಪಾಟೀಲ್ ಹಾಗೂ ಅವರ ಮಿತ್ರ ಸ್ಟೇಡಿಯಂಗೆ ಹಿಂತಿರುಗುತ್ತಿದ್ದಾಗ ಅಲ್ಲಿನ ಟ್ರಾನ್ಸ್‌ಫಾರ್ಮರ್ ಬಳಿ ನೀರು ತುಂಬಿದ್ದ ಹಳ್ಳದಲ್ಲಿ ಕಾಲಿಟ್ಟಾಗ ವಿದ್ಯುತ್ ಷಾಕ್‌ನಿಂದ ಸತ್ತಿದ್ದು ಒಂದು ಅಪಘಾತ ಹಾಗೂ ದುರಂತ.
ಹೆಂಡತಿ ಹಾಗೂ ಇಬ್ಬರ ಮಕ್ಕಳ ಜತೆ ಕ್ರಿಕೆಟ್ ಮ್ಯಾಚ್‌ಗೆ ಹೋಗಿದ್ದ ಮನೋಜ್, ತಮ್ಮ ಮಿತ್ರರ ಜತೆ ಸ್ವಲ್ಪ ತಿಂಡಿ ತರಲು ಹೊರಗೆ ಹೋದಾಗ ನಡೆದ ಆಕಸ್ಮಿಕ ಘಟನೆ ಇದು. ಇದರಲ್ಲಿ ವಿದ್ಯುಚ್ಛಕ್ತಿ ಪೂರೈಕೆ ಸಂಸ್ಥೆಯಾದ ಬೆಸ್ಕಾಮ್ ನಿರ್ಲಕ್ಷ್ಯದ ಪಾತ್ರ ದೊಡ್ಡದು. ಆದರೆ ಆ ಸಂಸ್ಥೆಯ ಹಿರಿಯ ಅಧಿಕಾರಿಗಳು ಅದನ್ನು ಸುಲಭವಾಗಿ ಒಪ್ಪುತ್ತಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಅನಂತರವೇ ಮುಂದಿನ ಕ್ರಮ ಎಂದೇ ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ (ಪ್ರಾಯಶಃ ಇತರ ಊರುಗಳಲ್ಲೂ) ಟ್ರಾನ್ಸ್‌ಫಾರ್ಮರ್‌ಗಳಿರುವ ಕಡೆಗಳಲ್ಲಿ ತಂತಿಗಳು ಜೋತಾಡುತ್ತಿರುವುದು ಒಂದು ಸಾಮಾನ್ಯ ದೃಶ್ಯ. ಆ ಟ್ರಾನ್ಸ್‌ಫಾರ್ಮರ್ ಇದ್ದ ಜಾಗದಲ್ಲಿ ನಡೆಯುವವರು ಅನೇಕರು "ಷಾಕ್" ಅನುಭವಿಸಿದ್ದಾರೆ. ಬೆಸ್ಕಾಮ್‌ಗೆ ದೂರು ನೀಡಿದ ಎರಡು ಗಂಟೆಗಳ ಅನಂತರ ಅದರ ದುರಸ್ತಿಯಾಯಿತು. ಈಗ ಬೆಸ್ಕಾಮ್ ಅಧಿಕಾರಿಗಳು ಹೇಳುತ್ತಿರುವುದು ಮನೋಜ್ ಸಾವಿಗೆ ಹೃದಯಾಘಾತವೂ ಕಾರಣವಿರಬಹುದು ಎಂದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಕೇಂದ್ರ ಸರ್ಕಾರದ ಸಿಪಿಆರ್‌ಐ ಸಂಸ್ಥೆ ಬೇಕಾದರೆ ತನಿಖೆ ನಡೆಸಲಿ ಎನ್ನುತ್ತಿದ್ದಾರೆ. ಇಂತಹ ವರ್ತನೆ ಅಸಹನೀಯ. ವಿದ್ಯುತ್ ಪೂರೈಕೆಯಂತಹ ಸೂಕ್ಷ್ಮ ಇಲಾಖೆ ಹೆಚ್ಚು ವಿಚಕ್ಷಣೆ ಹಾಗೂ ಜವಾಬ್ದಾರಿಯಿಂದ ಜನರ ನೋವಿಗೆ ಪ್ರತಿಸ್ಪಂದಿಸಬೇಕು.