ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 20 May 2013, 10:00 am

ಬೆಂಗಳೂರಿನ ಮಲ್ಲೇಶ್ವರದಿಂದ ಮಾಧವ ರಾವ್ ಅವರು ಪತ್ರ ಬರೆದಿದ್ದಾರೆ. "ಕನ್ನಡಪ್ರಭ'ದ ಮೇ 20ರ ಸಂಚಿಕೆಯ ಪುಟ 15ರಲ್ಲಿ 'ಮಜ್ಜಿಗೆಬೈಲು ಖನಂದ ಶೆಟ್ಟರಿಗೆ ಹಾರಾಡಿ ರಾಮ ಗಾಣಿಗ ಪ್ರಶಸ್ತಿ' ಎಂಬ ಸುದ್ದಿಯಲ್ಲಿ ತಪ್ಪಾಗಿದೆ. ತಲೆ ಬರಹ ಹಾಗೂ ಸುದ್ದಿಯ ಪ್ರಾರಂಭದಲ್ಲಿ 'ಖನಂದ ಶೆಟ್ಟಿ' ಎಂದು ಪ್ರಕಟಿಸಿದ್ದೀರಿ, ಸುದ್ದಿಯಲ್ಲೇ ಮತ್ತೊಂದೆಡೆ 'ಆನಂದ ಶೆಟ್ಟಿ' ಎಂದೂ ಬರೆದಿದ್ದೀರಿ. ಒಬ್ಬ ಶ್ರೇಷ್ಟ ಯಕ್ಷಗಾನ ಕಲಾವಿದರ ಹೆಸರನ್ನು ಹೀಗೆ ತಪ್ಪಾಗಿ ಪ್ರಕಟಿಸುವುದು ಯಾವ ನ್ಯಾಯ? 'ಖನಂದ' ಎಂಬ ಹೆಸರುಕರ್ನಾಟಕದಲ್ಲಿ ಎಲ್ಲೂ ಪ್ರಚಲಿತದಲ್ಲಿಲ್ಲ. ಸುದ್ದಿ ಬರೆಯುವವರಿಗೆ ಈ ಬಗ್ಗೆ ಸ್ವಲ್ಪವಾದರೂ ಜ್ಞಾನವಿರುವುದು ಉತ್ತಮ. ಬಹುಶಃ ಸಂಬಂಧಪಟ್ಟ ಪತ್ರಕರ್ತ ಮೊದಲಿನ ಇಡೀ ರಾತ್ರಿ ಯಕ್ಷಗಾನ ನೋಡಿ ಕೆಲಸಕ್ಕೆ ಬಂದಿರಬೇಕು. ನಿದ್ರೆ ಮಂಪರಿನಲ್ಲಿ ಹೀಗಾಗಿರಬೇಕು ಎಂದು ನನ್ನ ಅನಿಸಿಕೆ' ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಸುದ್ದಿ ಬರೆದ ವರದಿಗಾರರ ತಪ್ಪಿನಿಂದ ಹೆಸರು ಬದಲಾಗಿದೆ. ಅವರ ಹೆಸರು ಮಜ್ಜಿಗೆಬೈಲು ಆನಂದ ಶೆಟ್ಟಿ ಎಂದಿರಬೇಕಿತ್ತು. ಪ್ರಶಸ್ತಿ ಗಳಿಸಿದ ಹಾಗೂ ಮರಣಹೊಂದಿದ ವ್ಯಕ್ತಿಗಳ ಹೆಸರು ಪ್ರಕಟಿಸುವಾಗ ತುಸು ಎಚ್ಚರದಲ್ಲಿರಬೇಕು.
ಬೆಂಗಳೂರಿನ ವಿಜಯನಗರದಿಂದ ಸುಧೀಂದ್ರ ಎಂಬುವವರು ಮಿಂಚಂಚೆ ಕಳುಹಿಸಿದ್ದಾರೆ. 'ಮೇ 9ರ ಸಂಚಿಕೆಯ 12ನೇ ಪುಟದಲ್ಲಿ 'ಐವರು ಮಹಿಳೆಯರಿಗೆ ಒಲಿದ ವಿಜಯಲಕ್ಷ್ಮಿ' ಎಂದು ಸುದ್ದಿ ಬರೆಯಲಾಗಿದೆ. ಸುದ್ದಿಯಲ್ಲಿಯೂ ವಿಧಾನಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದ ಐವರು ಮಹಿಳೆಯರ ಹೆಸರು ಪ್ರಕಟಿಸಲಾಗಿದೆ. ಆದರೆ ಪ್ರಸಕ್ತ ಚುನಾವಣೆಯಲ್ಲಿ 6 ಮಹಿಳಾ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಶಾರದಾ ಪೂರ್ಯ ನಾಯ್ಕ ಅವರ ಹೆಸರು ನಿಮ್ಮ ಸುದ್ದಿಯಲ್ಲಿಲ್ಲ. ಆದರೆ ಶಾಸಕರಾಗಿ ಆಯ್ಕೆಯಾದ 223 ಹೆಸರುಗಳಲ್ಲಿ ಶಾರದಾ ನಾಯ್ಕ ಅವರ ಹೆಸರಿದೆ. ಗೆದ್ದಿರುವ 6 ಮಹಿಳೆಯರಲ್ಲಿ ಹೀಗೆ ನಿರ್ಲಕ್ಷಿಸಬಹುದೇ' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ವಿ.ಹೇಮಂತ ಕುಮಾರ್ ಅವರು ಪತ್ರ ಕಳುಹಿಸಿದ್ದಾರೆ. 'ಏ.13ರ 3ನೇ ಪುಟದಲ್ಲಿ 'ಅಕ್ರಮ ದಾಸ್ತಾನಿದ್ದ ಮದ್ಯ ವಶಕ್ಕೆ' ಶೀಷಿಕೆಯಲ್ಲಿ 'ಅಕ್ರಮವಾಗಿ ಮನೆಯೊಂದರಲ್ಲಿ ದಾಸ್ತಾನು ಮಾಡಿದ' ಎಂಬುದರ ಬದಲು 'ಮಾಡಿದ್ದ' ಎಂದಿದ್ದರೇ ಉತ್ತಮವಾಗಿತ್ತು. ಅದೇ ಲೇಖನದಲ್ಲಿ ಮುಂದುವರೆದು 'ಅಕ್ರಮ ಮದ್ಯದ ಬಾಟಲುಗಳನ್ನು ಹಾಗೂ ಆರೋಪಿ ಚೌಡರೆಡ್ಡಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ' ಎಂದಿದೆ. ಆದರೆ ಅದು 'ಅಕ್ರಮ ಮದ್ಯದ ಬಾಟಲುಗಳ ಬಗ್ಗೆ ಚೌಡಾರೆಡ್ಡಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ' ಎಂದಿದ್ದರೇ ಸೂಕ್ತವಲ್ಲವೇ?' ಎಂದಿದ್ದಾರೆ.
ಈ ವಾಕ್ಯವನ್ನು ಇನ್ನಷ್ಟು ಸರಳವಾಗಿ ಬರೆಯಬಹುದಿತ್ತು. 'ಚೌಡರೆಡ್ಡಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅಕ್ರಮಮದ್ಯವು ಸಮಾಜಸೇವಕರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.' ವರದಿಗಾರರು ಸುದ್ದಿಯಲ್ಲಿ ಕ್ಲಿಷ್ಟಕರ ವಾಕ್ಯ ಪ್ರಯೋಗ ಮಾಡುವುದರಿಂದ ಇಂತಹ ತಪ್ಪುಗಳಾಗುತ್ತವೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement