ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಯುಪಿಎ: ದಶಕದ ಕೊನೆಯತ್ತ

Srinivasa Murthy VN
Updated On : 22 May 2013, 10:39 am

ಸೋನಿಯಾ ಗಾಂಧಿ ಪ್ರಣೀತ, ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿರುವ ಸಂಯುಕ್ತ ಪ್ರಗತಿಪರ ಕೂಟ ಸರ್ಕಾರ ಒಂಬತ್ತು ವರ್ಷಗಳನ್ನು ಮುಗಿಸಿ, ಹತ್ತನೆಯ ವರ್ಷದ ಹೊಸ್ತಿಲಲ್ಲಿ ನಿಂತು ಬೀಗುತ್ತಿರುವಾಗಲೇ, ದೇಶದ ಎರಡು ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ಸಿನ ಜನಪ್ರಿಯತೆ ಇಳಿಮುಖವಾಗಿದೆ ಎನ್ನುವ ಅಭಿಪ್ರಾಯ ಹೊರಬಿದ್ದಿದ್ದು ಒಂದು ವಿಪರ್ಯಾಸವೇ.
1977ರ ಅನಂತರ ಯಾವ ಸರ್ಕಾರವೂ ಒಂದೇ ಸಮನೆ ಹತ್ತು ವರ್ಷಗಳ ಆಡಳಿತ ನಡೆಸಿದ್ದಿಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ಜನತಾಂತ್ರಿಕ ರಾಷ್ಟ್ರ, ಎರಡು ಶಕ್ತಿ ಕೇಂದ್ರಗಳ ನಡುವೆ ಜೋಲಾಡುತ್ತ ಹಲವು ಬಾರಿ ಸರ್ಕಾರಕ್ಕೆ ಸೋಲಿನ ದವಡೆಯಿಂದಲೇ ವಿಜಯವನ್ನು ಕಸಿದುಕೊಟ್ಟಿದ್ದು ನಿಜಕ್ಕೂ ಒಂದು ಅಸಾಮಾನ್ಯ ರಾಜಕೀಯ ಇತಿಹಾಸ.
2004ರ ಮೇ ನಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದಾಗ, ಯಾವ ಪಕ್ಷಕ್ಕೂ ಬಹುಮತವಿಲ್ಲದ ತ್ರಿಶಂಕು ಲೋಕಸಭೆಯ ಅನಾವರಣವಾಗಿತ್ತು. ಆಗ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರದಿಂದ ಹೊರಗಿಡಲು ವಾಮರಂಗ, ಡಿಎಂಕೆ, ರಾಷ್ಟ್ರೀಯತಾ ಕಾಂಗ್ರೆಸ್ ಪಕ್ಷಗಳು ಸೋನಿಯಾ ನೇತೃತ್ವದ ಕಾಂಗ್ರೆಸ್ಸಿಗೆ ಬೆಂಬಲ ಪ್ರಕಟಿಸಿದಾಗ, ಇಟಲಿಯ ಸಂಜಾತೆ ಭಾರತದ ಪ್ರಧಾನಿಯಾದರೆ ದೇಶದಲ್ಲಿ ಅಲ್ಲಕಲ್ಲೋಲ ಉಂಟಾಗುವ ಭೀತಿಯೂ ಇತ್ತು.
ಆ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿಯಾಗಿ ಮನಮೋಹನ ಸಿಂಗ್ ಅವರನ್ನು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಬಳಿಗೆ ಕರೆದೊಯ್ದು ಕಾಂಗ್ರೆಸ್‌ನ ಸರ್ಕಾರ ರಚನೆಯ ಹಕ್ಕನ್ನು ಪ್ರತಿಪಾದಿಸಿ ಪ್ರಧಾನಿ ಪೀಠಕ್ಕೆ ಮನಮೋಹನ ಸಿಂಗ್ ಅವರನ್ನೇ ನೇಮಿಸುವಂತೆ ಸಲಹೆ ಮಾಡಿದ್ದರು.
ಆಗ ಒಂದು ರೀತಿಯಲ್ಲಿ ಸೋನಿಯಾ ಗಾಂಧಿ ಭಾರತ ಮತ್ತು ಅರಾಜಕತೆಯ ನಡುವೆ ನಿಂತು ಜನತಾಂತ್ರಿಕ ವ್ಯವಸ್ಥೆಯನ್ನು ಕಾಪಾಡಿದರು ಎನ್ನಬಹುದು. ಮನಮೋಹನ ಸಿಂಗ್ ಅವರನ್ನು ಅಮೆರಿಕದ ಏಜೆಂಟ್ ಎಂದು ಕರೆದಿದ್ದ ಕಮ್ಯುನಿಸ್ಟರೂ ಅವರಿಗೇ ಬೆಂಬಲ ಕೊಡಬೇಕಾಯಿತು. ಆ ವ್ಯವಸ್ಥೆಗೆ ಈಗ ಒಂಬತ್ತು ವರ್ಷಗಳು ತುಂಬಿವೆ. ಸಂಯುಕ್ತ ಪ್ರಗತಿಪರ ಕೂಟ ಹಿಂದಿದ್ದ ಸ್ವರೂಪದಲ್ಲೇ ಉಳಿದಿಲ್ಲ, ಡಿಎಂಕೆ, ತೃಣಮೂಲ ಕಾಂಗ್ರೆಸ್ ಹಾಗೂ ಇತರ ಕೆಲವು ಪಕ್ಷಗಳು ಕೂಟವನ್ನು ತೊರೆದಿವೆ. ಕಾಂಗ್ರೆಸ್ ಸಂಘಟನೆ, ಹೆಚ್ಚು ಕಡಿಮೆ ಪರದೆಯ ಹಿಂದೆ ಸರಿದು ಒಂದು ಕೂಟ ಭ್ರಷ್ಟ ಸರ್ಕಾರವನ್ನು ಜೀವಂತವಾಗಿಟ್ಟಿದೆಯೇ ಎನ್ನುವ ಅನುಮಾನ ಬರುವಂತಿದೆ.
ಈ ಹಂತದಲ್ಲಿ ಮತ್ತೆ ದೇಶದ ಬಹುಭಾಗದಲ್ಲಿ ಅಲ್ಲೋಲಕಲ್ಲೋಲದ ಸ್ಥಿತಿ ನಿರ್ಮಾಣವಾಗುವ ಭೀತಿ ಮೂಡಿದೆ. ಅದಕ್ಕೂ ಸೋನಿಯಾ ಗಾಂಧಿ ಅವರೇ ಕಾರಣ ಎನ್ನುವವರಿಗೇನೂ ಬರವಿಲ್ಲ. ಯುಪಿಎದ ಮೊದಲ ಅವತಾರದಲ್ಲಿ ಆರ್ಥಿಕ ಹಿಂಜರಿತದ ನೆರಳಿನಲ್ಲೂ ಒಳ್ಳೆಯ ಕೆಲಸ ನಡೆದಿತ್ತು. ಆದರೆ ಆ ಒಳ್ಳೆಯ ಕೆಲಸದ ಲಕ್ಷಣ ಬಡವರಿಗೆ, ಬಡವರ ಹೆಸರಿನಲ್ಲಿ ಇತರರಿಗೆ ಕೊಡುಗೆಗಳನ್ನು ಬೊಕ್ಕಸದ ಹಣದಿಂದ ಕೊಡುವುದಕ್ಕೇ ಸೀಮಿತವಾಗಿತ್ತು.
ಒಂದು ಹಂತದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅಮೆರಿಕದ ಜತೆ ನಾಗರಿಕ ಉದ್ದೇಶಗಳಿಗಾಗಿ ಅಣುಶಕ್ತಿಯ ಬಳಕೆ ಕುರಿತ ಒಪ್ಪಂದವಾಗಲೇಬೇಕೆಂದು ಹಟ ಹಿಡಿದು ಲೋಕಸಭೆಯಲ್ಲಿ ಕಮ್ಯುನಿಸ್ಟರ ವಿರೋಧವನ್ನು ಎದುರಿಸಿ, ಕಂಡು-ಕೇಳದ ರೀತಿಯಲ್ಲಿ ಸರ್ಕಾರದ ವಿಶ್ವಾಸ ಸೂಚಕ ಪ್ರಸ್ತಾವಕ್ಕೆ ಬಹುಮತ ಗಳಿಸಲು ಕೋಟ್ಯಂತರ ರುಪಾಯಿಗಳ ಲಂಚ ಕೊಡಬೇಕಾಯಿತೆನ್ನುವ ವದಂತಿ ಆಧರಿತ ವರದಿಗಳಿಗೆ ಗುರಿಯಾಗಲೂ ಬೇಕಾಯಿತು.
ಆದರೂ 2009 ರ ಲೋಕಸಭೆ ಚುನಾವಣೆಯಲ್ಲಿ ಹಿಂದಿಗಿಂತ ಅರವತ್ತು ಅಧಿಕ ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬಂದಾಗ, ವಿಜಯದ ಅಹಂಕಾರದಿಂದ ದುರಾಡಳಿತಕ್ಕೇ ಮುಂದಾಗಿದ್ದು ಸುಳ್ಳಲ್ಲ, ನಿಜ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಕೂಟ ಗೆಲ್ಲಲು ಕಾರಣ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತಹ ಹಲವು ಹತ್ತು ಸಹಸ್ರ ಕೋಟಿ ರುಪಾಯಿಗಳ ಕೊಡುಗೆಗಳ ಕಾರ್ಯಕ್ರಮ. ಸ್ವಾವಲಂಬಿ, ಬಲಿಷ್ಠ ಭಾರತದ ಕನಸೇ ಮಾಯವಾಯಿತು. ಈ ಅವಧಿಯಲ್ಲಿನ ದುರಾಡಳಿತ, ಭ್ರಷ್ಟಾಚಾರದ ಆರೋಪಗಳ ಜತೆಯಲ್ಲೇ ಸರ್ಕಾರ ಎದುರಿಸಬೇಕಾಗಿ ಬಂದಿದ್ದು ಕೆಲವು ರಾಜ್ಯಗಳಲ್ಲಿ ಪ್ರಚಂಡ ವಿರೋಧ. ಈ ಅವಧಿಯಲ್ಲೇ ಸಂವೈಧಾನಿಕ ಸಂಸ್ಥೆಗಳ ಅಸ್ತಿತ್ವವನ್ನೇ ಅಳಿಸಿಹಾಕುವ ಪ್ರಯತ್ನವೂ ನಡೆದಿದ್ದು, ಟೆಲಿಕಾಮ್ ಹಗರಣ, ಕಲ್ಲಿದ್ದಲು ಗಣಿಗಳ ಹಂಚಿಕೆಯ ಹಗರಣ, ಕೆಲವು ಮಂತ್ರಿಗಳು ಜೈಲು ಸೇರಿದ್ದು ಈ ಅವಧಿಯಲ್ಲೇ ನಡೆದ ಘಟನೆಗಳು.
ಈ ಅವಧಿಯಲ್ಲೇ ಭ್ರಷ್ಟಾಚಾರದ ವಿರೋಧಿ ಹೋರಾಟಗಾರರಾದ ಗಾಂಧಿವಾದಿ ಅಣ್ಣಾ ಹಜಾರೆ, ಮಾನವ ಹಕ್ಕುಗಳ ಪ್ರತಿಪಾದಕರಾದ ಪ್ರಶಾಂತ ಭೂಷಣ, ಅರವಿಂದ ಕೇಜ್ರಿವಾಲ ಅವರೆಲ್ಲ ಮನೆ ಮಾತಾಗಿದ್ದು. ಲೋಕಪಾಲ ವ್ಯವಸ್ಥೆಯನ್ನು ಜಾರಿಗೆ ತರಲು ಹಲವಾರು ನೆಪಗಳನ್ನು ಹುಡುಕುತ್ತಿದ್ದ ಸರ್ಕಾರ, ಯಾವ ದೇಶದಲ್ಲೂ ಕಂಡು ಕೇಳರಿಯದ ರೀತಿಯಲ್ಲಿ ಲೋಕಪಾಲ ವಿಧೇಯಕವನ್ನು ಸಿದ್ಧಪಡಿಸುವುದಕ್ಕೆ ಮಂತ್ರಿಗಳು, ಸಾರ್ವಜನಿಕ ಪ್ರತಿನಿಧಿಗಳ ಸಂಯುಕ್ತ ಸಮಿತಿಯನ್ನು ರಚಿಸಲು ಒಪ್ಪಿದ್ದು.
ಆದರೇನಂತೆ, ಭ್ರಷ್ಟಾಚಾರದ ಆರೋಪಗಳು, ರಾಜಧಾನಿಯಲ್ಲೇ ಒಬ್ಬ ಹೆಣ್ಣುಮಗಳ ಮೇಲೆ ಭೀಕರ ರೂಪದ ಅತ್ಯಾಚಾರ ನಡೆದು ಆಕೆ ನಿಧನರಾಗಿದ್ದು, ಇಡೀ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಕ್ರೌರ್ಯ ಹೆಚ್ಚಿದ್ದು, ಸಂಸತ್ತಿನ ಒಂದು ಇಡೀ ಅಧಿವೇಶನ ಯಾವ ಸಂಸದೀಯ ಕೆಲಸವನ್ನೂ ಮಾಡದೇ, ಚರ್ಚೆಯೇ ಇಲ್ಲದೆ ಕೇಂದ್ರ ಬಜೆಟ್ ಅಂಗೀಕರಿಸಿದ್ದು ಈಗಿನ ಹೆಗ್ಗಳಿಕೆ.
ಸಿಬಿಐ ನಂತಹ ಸಂಸ್ಥೆಯ ಕೆಲಸದಲ್ಲೂ ಹಸ್ತಕ್ಷೇಪ ಮಾಡಿದ ಆರೋಪದ ಮೇಲೆ ಇಬ್ಬರು ಕಾಂಗ್ರೆಸ್ ಮಂತ್ರಿಗಳು ರಾಜಿನಾಮೆ ನೀಡಿದ್ದೂ ಈಗಲೇ. ಸರ್ಕಾರ ಒಂಬತ್ತು ವರ್ಷಗಳ ತನ್ನ ಸಾಧನೆಯನ್ನು ವಿವರಿಸುವ ದಾಖಲೆಯನ್ನು ಬಿಡುಗಡೆ ಮಾಡಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯ ಪ್ರಚಾರ ಸಮರದ ಕಹಳೆ ಅದು. ಇನ್ನು ಮುಂದಿನ ರಾಜಕೀಯ ಅಂದರೆ ಅದೇ. ಸದ್ಯಕ್ಕೆ ಜನ ಮೂಕ ಅಸಹಾಯಕ ತಬ್ಬಲಿಗಳಂತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement