ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಶ್ರೀನಿವಾಸ್ ಮಿಂಚಂಚೆ ಕಳುಹಿಸಿದ್ದಾರೆ. 'ಪತ್ರಿಕೆಯ ಕ್ರೀಡಾ ಪುಟದಲ್ಲಿ ತಪ್ಪುಗಳು ಕಡಿಮೆಯಾಗುತ್ತಿವೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಇದು ಉದ್ದೇಶಪೂರ್ವಕವೋ ಅಥವಾ ಕಣ್ತಪ್ಪಿನ ಪ್ರಮಾದವೋ ಎಂದು ಅರ್ಥವಾಗುತ್ತಿಲ್ಲ. ಮೇ 25ರ ಕ್ರೀಡಾಪುಟದ 'ಫೈನಲ್‌ಗೆ ಪ್ರವೇಶಿಸಿದ ಮುಂಬೈ ಇಂಡಿಯನ್ಸ್' ಸುದ್ದಿಯ 3 ಮತ್ತು 4ನೇ ಪ್ಯಾರಾದ ಅರ್ಥ ಮತ್ತು ಉದ್ದೇಶ ತಿಳಿಯಲಿಲ್ಲ. 'ಮುಂಬೈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡ್ವೇನ್ ಸ್ಮಿತ್ 62 ಹಾಗೂ ಆದಿತ್ಯ ತಾರೆ 35 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ 35 ರನ್‌ಗಳಿಸಿದ್ದ ತಾರೆ ಕೂಪರ್ ಎಸೆತದಲ್ಲಿ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ತಮ್ಮ ಉತ್ತಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್ 22 ರನ್‌ಗಳಿಸಿದರು' ಎಂದಿದೆ. ನಂತರದ ಪ್ಯಾರಾದಲ್ಲಿಯೇ ಇದೇ ಸುದ್ದಿಯ ಮತ್ತೊಂದು ರೂಪವಿದೆ. ಆದರೆ ಅಲ್ಲಿ ಸ್ಮಿತ್ 35 ರನ್‌ಗಳಿಸಿದರೆ, ಕಾರ್ತಿಕ್ ಅಜೇಯ 1 ರನ್ ಗಳಿಸಿದ್ದಾರೆ. ಇದ್ಯಾವ ಲೆಕ್ಕ ಸ್ವಾಮಿ?' ಎಂದು ಹೇಳಿದ್ದಾರೆ.
ಬೆಂಗಳೂರಿನ ವಿಜಯನಗರದಿಂದ ವಿಜಯ್ ಪಾಟೀಲ್ ಎಂಬುವವರು ಕಚೇರಿಗೆ ದೂರವಾಣಿ ಮಾಡಿ ಮೇ 26ರ ಕ್ರೀಡಾಪುಟದಲ್ಲಿನ ಪ್ರಮಾದಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. '15ನೇ ಪುಟದಲ್ಲಿ 'ಗ್ಯಾರೋಸ್‌ನಲ್ಲಿ ದಿಗ್ಗಜರ ಗರ್ಜನೆ' ಹಾಗೂ 'ದಾಖಲೆಯ ಸನಿಹದಲ್ಲಿ ರಾಫೆಲ್ ನಡಾಲ್' ಎಂಬ ಎರಡು ಪ್ರತ್ಯೇಕ ವರದಿ ಪ್ರಕಟವಾಗಿದೆ. ಮೊದಲ ವರದಿಯ ಬಗ್ಗೆ ಯಾವುದೇ ಗೊಂದಲವಿಲ್ಲ. ಪ್ರಸಕ್ತ ಫ್ರೆಂಚ್ ಓಪನ್ ಪಂದ್ಯಾವಳಿ ಬಗ್ಗೆ ಚಿತ್ರಣ ಕೊಟ್ಟಿದ್ದೀರಿ. ಆದರೆ ಎರಡನೇಯ ವರದಿ ಓದಿದರೆ ಮೊದಲನೆಯ ವರದಿ ಸುಳ್ಳೇ ಎಂಬ ಸಂಶಯ ಕಾಡುತ್ತದೆ. ಭಾನುವಾರದಿಂದ ಫ್ರೆಂಚ್ ಓಪನ್ ಪ್ರಾರಂಭವಾಗುತ್ತಿದೆ ಎಂದು ನೀವೇ ಬರೆದಿದ್ದೀರಿ. ಆದರೆ ಎರಡನೇಯ ವರದಿಯಲ್ಲಿ ನಡಾಲ್ ಅವರು ಸೆಮಿಫೈನಲ್ ಪ್ರವೇಶಿಸಿದ್ದು ಎಂಟನೇ ಗ್ರಾನ್‌ಸ್ಲಾಂ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ಸನಿಹದಲ್ಲಿದ್ದಾರೆ ಎಂದು ಬರೆಯುತ್ತೀರಿ. ನಂತರದ ಪ್ಯಾರಾಗಳನ್ನು ಓದಿದಾಗ ನಿಮ್ಮ ಸುದ್ದಿಯು ಟೆನಿಸ್ ತಜ್ಞರು ಹೇಳುವ ಸಾಧ್ಯತೆಗಳಿರಬಹುದು ಎನಿಸುತ್ತದೆ. ಆದರೆ ಪಂದ್ಯಾವಳಿ ಪ್ರಾರಂಭವಾಗುವ ಮುಂಚೆಯೇ ನಡಾಲ್ ಹಾಗೂ ಇತರ ಮೂವರು ಆಟಗಾರರು ಸೆಮಿಫೈನಲ್ ಪ್ರವೇಶಿಸಿದ್ದಾರೆ ಎಂದು ಖಚಿತವಾಗಿ ಹೇಳುವುದು ಎಷ್ಟು ಸೂಕ್ತ? ಸಾಧ್ಯತೆಗಳು ಅಥವಾ ಡ್ರಾಗಳನ್ನು ಆಧರಿಸಿ ಉಹೆ ಮಾಡಿರುವ ವರದಿಯೂ ಸಮರ್ಪಕವಾಗಿಲ್ಲ. ಮೊದಲ ಸೆಮಿಫೈನಲ್ ನಡಾಲ್ ಹಾಗೂ ಜೊಕೋವಿಚ್, ಎರಡನೇ ಸೆಮಿಫೈನಲ್ ಫೆಡರರ್ ಹಾಗೂ ಫೆರರ್ ಎದುರಾಳಿಗಳಾಗಲಿದ್ದಾರೆ ಎಂದು ಖಡಾಖಂಡಿತವಾಗಿ ಹೇಳಲಾಗಿದೆ. ಆದರೆ ವರದಿಯ ಕೊನೆಯಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಫೆಡರರ್ ವಿರುದ್ಧ ನಡಾಲ್ ಗೆಲುವು ಸಾಧಿಸಿದರಷ್ಟೇ ಕನಸು ನನಸಾಗುತ್ತದೆ ಎಂದಿದೆ. ಸಂಪೂರ್ಣ ವರದಿ ಗೊಂದಲಮಯವಾಗಿದೆ. ನಿಮ್ಮ ವರದಿಗಾರರು ಟೆನಿಸ್‌ನಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆಸಿದಂತಿದೆ' ಎಂದಿದ್ದಾರೆ.
-ವಿಶ್ವೇಶ್ವರಭಟ್