ಮುಖ್ಯಮಂತ್ರಿಯವರ ಹುಮ್ಮಸ್ಸಿನ ಹೇಳಿಕೆ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮುಜರಾಯಿ ಇಲಾಖೆಯವರು ಉಡುಪಿ ಶ್ರೀ ಕೃಷ್ಣಮಠ ಹಾಗೂ ಗೋಕರ್ಣ ದೇವಾಲಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಮಾಡಿರುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ಹಿರಿಯ ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿಯವರು ದೇವಾಲಯಗಳು ಹಾಗೂ ಧರ್ಮಪೀಠಗಳ ಬಗ್ಗೆ ಸರ್ಕಾರ ಅನಾವಶ್ಯವಾಗಿ ತಲೆ ಹಾಕಬಾರದು ಎಂದು ಸೂಚಿಸಿದ್ದಾರೆ. ಪೂಜಾರಿ ಅಭಿನಂದನಾರ್ಹರರು. ಹೊಸ ಮುಖ್ಯಮಂತ್ರಿಗಳ ನಿರಂತರವಾದ ಇಚ್ಛಾನುಸಾರ, ಕ್ರಾಂತಿಕಾರಿ ಮತ್ತು ಹುಮ್ಮಸ್ಸಿನ ಹೇಳಿಕೆಗಳು ದುರುದ್ದೇಶಪೂರಿತ ಮತ್ತು ಸೇಡಿನ ಸ್ವಭಾವದ್ದಾಗಿದೆ ಎಂದು ನಮಗನಿಸುತ್ತದೆ. ಬೇರೆ ಸಮಾಜದ ಮೇಲಿನ ವೈಷಮ್ಯ, ಹಟ ಸಾಧನೆಯ ಹೇಳಿಕೆಗಳು ಮತ್ತು ಈ ಹಿಂದಿನ ವಿಧಾನಸಭೆಯಲ್ಲಿ ತೋರಿರುವ ಬಲಪ್ರದರ್ಶನದ ಜ್ಞಾಪಕ ಇದೆ. ಸರಕಾರದ ಒಬ್ಬ ಪ್ರಮುಖ ವ್ಯಕ್ತಿಯಾಗಿ ಅನಗತ್ಯ ವಿವಾದಗಳು ಮತ್ತು ಚಿಲ್ಲರೆ ರಾಜಕೀಯಗಳನ್ನು ಮಾಡುವ ಬದಲಾಗಿ, ದಿನಬಳಕೆ ವಸ್ತುಗಳ ಮತ್ತು ತರಕಾರಿಗಳ ಭಾರಿ ದರ ಏರಿಕೆ, ಕುಡಿಯುವ ನೀರಿನ ಅಭಾವ, ಕಸದ ವಿಲೇವಾರಿ ಮತ್ತಿತರ ಸಮಸ್ಯೆಗಳ ಬಗ್ಗೆ ಪ್ರಬುದ್ಧವಾದ ಮತ್ತು ಪಕ್ಷಪಾತವಿಲ್ಲದ ನಿರ್ಣಯಗಳನ್ನು ತೆಗೆದುಕೊಂಡು ಮುಖ್ಯಮಂತ್ರಿ ಪದವಿಯ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಕಳಕಳಿ.
-ಕೆ.ವಿ. ಆಚಾರ್ಯ, ಬೆಂಗಳೂರು
ಅಗ್ಗಕ್ಕೆ ಕೊಟ್ಟರೆ ಕುಡಿತ ಹೆಚ್ಚಾಗದು
ಕಡಿಮೆ ದರದಲ್ಲಿ ಮದ್ಯ ಕೊಡುವುದು ಸರಿಯೇ? ಈ ಕುರಿತು ಓದುಗರ ಅಭಿಪ್ರಾಯ ಕೇಳಿರುತ್ತೀರಿ. ಬಡ ಜನರು ಕುಡಿದು, ತಮ್ಮ ಆರೋಗ್ಯ ಮತ್ತು ಹಣ ಕಳೆದುಕೊಳ್ಳಬಾರದೆಂಬ ಸದುದ್ದೇಶದಿಂದ ಸರಕಾರ ಸಾರಾಯಿ ನಿಷೇಧ ಮಾಡಿರುವುದಾದರೂ, ಬಡಜನರ ಕುಡಿತ ನಿಂತಿಲ್ಲ. ಕೆಲವು ಕಡೆ ಮಹಿಳೆಯರು ಸಹ ಕುಡಿದು ರಸ್ತೆ ಬದಿಯಲ್ಲಿ ಬಿದ್ದುಕೊಂಡಿರುವುದು ಅತ್ಯಂತ ಖೇದಕರ ಸಂಗತಿ. ಇದರ ದುರುಪಯೋಗ ಮಾಡಿಕೊಂಡು, ಕೆಲವರು (ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ) ಯಾವುದೇ ಪರವಾನಗಿಯಿಲ್ಲದೆ, ಅಗ್ಗದ ದರದ ಬಣ್ಣದ ಮದ್ಯವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಬಡಜನರ ಆರೋಗ್ಯ-ಹಣ ಕಳೆದುಕೊಳ್ಳುವುದು ನಿಂತಿರುವುದಿಲ್ಲ. ಅಗ್ಗದ ಮದ್ಯ ಶುರು ಮಾಡಿದರೆ ನೈಂಟಿ, ಕ್ವಾರ್ಟರ್, ಹಾಫ್ ಬಾಟಲ್ ಎತ್ತಿ ಬಿಡುತ್ತಾರೆ ಎನ್ನುವುದು ಒಂದು ವಿತಂಡವಾದ. ಕುಡಿತದ ಮೇಲೆ ಹಿಡಿತವನ್ನಿಟ್ಟುಕೊಂಡರೆ, ಅಗ್ಗದ ಮದ್ಯದಿಂದ ಹಣ, ಆರೋಗ್ಯ ಎರಡೂ ಸರಿಯಾಗಿಯೇ ಇರುತ್ತದೆಯಲ್ಲದೇ, ಅಬಕಾರಿಯಿಂದ ಸರಕಾರದ ಬೊಕ್ಕಸಕ್ಕೂ ಆದಾಯ. ಅಗ್ಗದ ಮದ್ಯವನ್ನು ನಿಷೇಧಿಸಿದ್ದರಿಂದ ಮೂರನೆಯವರಿಗೆ ಲಾಭವೇ ಹೊರತು, ಸರಕ್ಕಾರಕ್ಕಾಗಲೀ, ಬಡವರಿಗಾಗ ಲೀ ಯಾವುದೇ ಉಪಯೋಗ ಇಲ್ಲ. ಕುಡಿತದ ಚಟವಿದ್ದವರು ಹಿಂದೆ ಅಗ್ಗದ ಮದ್ಯಕ್ಕೆ ವಿನಿಯೋಗಿಸುತ್ತಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಹಣವನ್ನು ಈಗ ಸುರಿಯಬೇಕಾಗಿದೆ. ಅಗ್ಗ ಅಥವಾ ದುಬಾರಿ ಎಂಬ ತಾರತಮ್ಯವಿಲ್ಲದೇ, ಮದ್ಯವನ್ನೇ ಸಂಪೂರ್ಣವಾಗಿ ನಿಷೇಧಿಸಿದರೆ ಮಾತ್ರ ಬಡ ಜನರನ್ನೂ, ದೇಶವನ್ನು ಉದ್ಧಾರ ಮಾಡಿದ ಹಾಗಾಗುತ್ತದೆ. ಅಗ್ಗದ ಮದ್ಯ ಬೇಡವೆಂದು ವಿರೋಧಿಸುವವರೂ, ಮಹಿಳಾ ಸಂಘಟನೆಗಳು ಈ ಬಗ್ಗೆ ಗಂಭೀರ ಚಿಂತನೆ ಮಾಡುವುದು ಅತ್ಯಗತ್ಯ. ಆದರೆ ಅಗ್ಗದ ಮದ್ಯ ಶುರು ಮಾಡಿದರೆ ನಕಲಿ ಮದ್ಯದ ಹಾವಳಿ ಶುರುವಾಗುವುದು ಖಚಿತ. ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾದರೆ ಅಗ್ಗದ ಮದ್ಯದಿಂದ ತೊಂದರೆಯಿಲ್ಲ. ಈ ವಿಷಯದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಯೋಚನೆ ಸರಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
-ಜಾನ್ ಲೋಬೋ, ಮಡಿಕೇರಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com