ಕಾನೂನು ಪರಿಹಾರವಲ್ಲ
ನಮ್ಮಲ್ಲಿ 'ಮೂಢನಂಬಿಕೆ' ಎಂಬ ಪದದ ಅರ್ಥದ ಬಗ್ಗೆಯೇ ಗೊಂದಲವಿದೆ. ಜನ್ಮದಿನಾಚರಣೆಯಾಗಿ ದೇವರಿಗೆ ಕೈ ಮುಗಿದು ಆರತಿ ಎತ್ತಿಸಿಕೊಂಡರೆ, ಗೊಡ್ಡು ಸಂಪ್ರದಾಯ ಎಂದು ಮುಖ ಮುರಿಯುವ ಇದೇ ಜನ ಕೇಕ್ ಮೇಲೆ ಹಚ್ಚಿದ ದೀಪ ನಂದಿಸಿ 'ಹ್ಯಾಪಿಬರ್ತ್ಡೇ' ಎಂದು ಅರಚಿಕೊಂಡರೆ ಮುಂದುವರಿದವರು ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಪಶ್ಚಿಮದಿಂದ ಬಂದದ್ದು ಅದು ಏನೇ ಇದ್ದರೂ ಪ್ರಸಾದ! ನಮ್ಮ 'ಯೋಗ' ಸಹ ಪಶ್ಚಿಮದವರು ಒಪ್ಪಿಕೊಂಡ ನಂತರವೇ ನಮ್ಮ ಆಧುನಿಕರು ಶುರು ಹಚ್ಚಿಕೊಂಡದ್ದು. ಮೂಢತನ ಅಂದರೆ ಇದೇ! ಯಾವುದೇ ಸಮಾಜವಾದರೂ ಅಲ್ಲಿಯ ಪರಿಸರ ಮತ್ತು ಹಿನ್ನೆಲೆಯಿಂದಾಗಿ ಹಲವು ಆಚರಣೆಗಳು ಬೆಳೆದು ಬಂದಿರುತ್ತವೆ. ಅವರಿಗೊಂದು ಮಾನಸಿಕ ನೆಮ್ಮದಿಯನ್ನು, ಒಂದಷ್ಟು ಸಂಭ್ರಮದ ಕ್ಷಣಗಳನ್ನು, ಭದ್ರತೆಯ ಭಾವವನ್ನು ಇದು ಕೊಡುತ್ತಿದ್ದರೆ ಅದನ್ನು ಸುಮ್ಮನೆ ಅರ್ಥಹೀನ ಅನ್ನಲಾದೀತೇ! ಇಷ್ಟೇ, ಅದು ಇನ್ನೊಬ್ಬರ ಮೇಲೆ ಹೇರಿಕೆಯಾಗಕೂಡದು. ಇನ್ನೊಬ್ಬರ ಶೋಷಣೆಯಾಗಕೂಡದು. ಸಂಕಟ ಸಮಯದಲ್ಲಿ ಆರ್ತನೊಬ್ಬ ದೇವಸ್ಥಾನದಲ್ಲಿ ನಿಂತು 'ನೀನೇ ಸಂಕಟದಿಂದ ಪಾರು ಮಾಡು' ಎಂದು ಬೇಡಿಕೊಳ್ಳುತ್ತ ನಾಣ್ಯವೊಂದನ್ನು ಹುಂಡಿಯಲ್ಲಿ ಹಾಕುವಾಗ ಆತನಲ್ಲಿ ಒಂದು ಆತ್ಮಸ್ಥೈರ್ಯವೂ, ತನ್ನ ಬೆಂಬಲಕ್ಕೆ ಯಾರೋ ಇದ್ದಾರೆ ಎಂಬ ಧೈರ್ಯವೂ ಬೆಳೆದರೆ ಅದನ್ನವನು ಮಾಡಲಿ ಬಿಡಿ. ಕರಡು ವಿಧೇಯಕದ ಅಂಶಗಳನ್ನು ನೋಡಿದರೆ ಅದೇ ಒಂದು ಮೂಢನಂಬಿಕೆಯಿಂದ ತಯಾರಿಸಿದ ಯಾದಿಯಂತಿದೆ. ಒಂದು ಸಂಸ್ಕೃತಿಯ ಅನೇಕಾನೇಕ ವರ್ಷಗಳಿಂದ ಬೆಳೆದು ಬಂದ ಸಂಪ್ರದಾಯಗಳನ್ನೆಲ್ಲ ಸಾರಾಸಗಟಾಗಿ ಅಪರಾಧವನ್ನಾಗಿ ಪರಿಗಣಿಸಿ ಬಿಡುವ ಹುನ್ನಾರದಂತಿದೆ ಇದು! ಜ್ಯೋತಿಷ್ಯ ಶಾಸ್ತ್ರದಂತಹ ವೈಜ್ಞಾನಿಕ ಹಿನ್ನೆಲೆಯುಳ್ಳ, ಸಹಸ್ರಾರು ವರ್ಷಗಳ ಇತಿಹಾಸವುಳ್ಳದ್ದನ್ನು ಸಹ ಅಪರಾಧ ಅಂದು ಬಿಟ್ಟರೆ? ನಮ್ಮಲ್ಲಿ ಮಾತ್ರವಲ್ಲ; ನಮ್ಮಂತೇ ಪುರಾತನವಾದ ಚೀನ, ಪೆರು ಮುಂತಾಗಿ ಹಲವಾರು ದೇಶಗಳ ಸಂಸ್ಕೃತಿಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಬೇರೆ ಬೇರೆ ರೂಪಗಳಲ್ಲಿ ಇತ್ತು, ಇದೆ! ಹಾಂ! ಸರಿಯಾದ ಜ್ಞಾನವಿಲ್ಲದೇ ಇದರ ಹೆಸರು ಕೆಡಿಸಿ ದುರುಪಯೋಗ ಪಡಿಸಿಕೊಳ್ಳುವವರನ್ನು ನಿಯಂತ್ರಿಸಿ, ಅರ್ಹತೆಗೆ ಒಂದು ಮಾನದಂಡವನ್ನು ನಿಗದಿಪಡಿಸಿ. ಅಪರಾಧಪಟ್ಟಿಯಲ್ಲಿರುವ ಲೈಂಗಿಕ ಶೋಷಣೆ, ಅಸ್ಪೃಶ್ಯತಾ ಆಚರಣೆ, ಬಾಲ್ಯ ವಿವಾಹ, ಮರ್ಯಾದಾ ಹತ್ಯೆ, ನರಬಲಿ ಮುಂತಾದ ಸಂಗತಿಗಳ ಬಗ್ಗೆ ಆಗಲೇ ಕಾನೂನಿದೆ. ಬೆತ್ತಲೆಸೇವೆ, ಮುಟ್ಟಾದವರನ್ನು ದೂರವಿರಿಸುವುದು ಮುಂತಾದವನ್ನು ಅಪರಾಧವೆಂದು ಪರಿಗಣಿಸುವುದು ಸ್ವಾಗತಾರ್ಹ. ಇನ್ನು ಜಪಮಾಲೆ, ಹರಳು, ರುದ್ರಾಕ್ಷಗಳ ಮಾರಾಟ ನಿಷೇಧಿಸುವುದು ಅರ್ಥಹೀನ. ಇವನ್ನು ಯಾರೂ ಒತ್ತಾಯಿಸಿ ಹೆದರಿಸಿ ಮಾರುವುದಿಲ್ಲ. ಇದನ್ನು ಧರಿಸುವುದು ಅವರವರ ಇಷ್ಟಕ್ಕೆ ಬಿಟ್ಟಿದ್ದು. ಇನ್ನು ಧಾರ್ಮಿಕ ಕಾರ್ಯಕ್ಕಾಗಿ ಪ್ರಾಣಿಬಲಿ ಅಪರಾಧ ಅನ್ನುತ್ತೀರ. ತಿನ್ನಲಿಕ್ಕಾದರೆ ಬಲಿ ಶಿಷ್ಟ! ಹಾಸ್ಯಾಸ್ಪದವಾಗುವುದಿಲ್ಲವೇ? ಇನ್ನು ವಿಶೇಷ ಪ್ರಾಧಿಕಾರ ರಚಿಸುವ ವಿಷಯ. ಇದು ಸ್ವಾಗತಾರ್ಹವೇ. ಆದರೆ ಇದರಲ್ಲಿ ಸದಸ್ಯರಾಗಿ ಯಾರ್ಯಾರು ಇರುತ್ತಾರೆ ಎನ್ನುವುದೂ ಮುಖ್ಯ. ಸ್ವಯಂಘೋಷಿತ ಬುದ್ಧಿಜೀವಿ ವಿಚಾರವಾದಿಗಳಾದ ಕೆಲವೇ ಸಾಹಿತಿ ಪ್ರೊಫೆಸರ್ಗಳ ಹಿಡಿತಕ್ಕಷ್ಟೇ ಇದು ಸಿಕ್ಕರೆ ಮುಗಿಯಿತು! ಇವರು ಸಾಹಿತ್ಯ ರಚನೆ ಬಿಟ್ಟು ದಶಕಗಳಾದವು. ಕಾದಂಬರಿ, ಕಥೆ ರಚನೆ ಕಷ್ಟ. ಪ್ರಚಾರ ಕಡಿಮೆ. ದಿನಕ್ಕೊಂದು ವಿರೋಧಾಭಾಸ ಹೇಳಿಕೆ ನೀಡುವುದು ಅದೂ ಧರ್ಮದ ವಿರುದ್ಧ ಹೇಳಿದರೆ ಸುಲಭ ಮತ್ತು ಪ್ರಚಾರ ಅಪಾರ. ಒಂದು ಪಂಥಕ್ಕೆ ಕಟ್ಟು ಬಿದ್ದ ಇವರಿಂದ ಸಾಮರಸ್ಯ ಅಸಾಧ್ಯ! ಬುದ್ಧಿಯಿರುವವರು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ರಾಜಕೀಯ, ವಿಜ್ಞಾನ, ಶಿಕ್ಷಣ, ವಿವಿಧ ಧರ್ಮಗಳ ಪ್ರಾಜ್ಞರು ಹೀಗೆ ಎಲ್ಲ ಕ್ಷೇತ್ರಗಳಿಂದ ಆಯ್ದು ಕಾಯಿದೆಗೆ ಒಂದು ರೂಪು ಕೊಡಿ. ಸಮಿತಿ ಸುಧಾರಾಣಾತ್ಮಕ ಉದ್ದೇಶ ಹೊಂದಿರಲಿ. ಶಿಕ್ಷಣ ಮತ್ತು ತಿಳಿವಳಿಕೆಯಿಂದ ಅನುಪಯುಕ್ತ ಸಂಪ್ರದಾಯಗಳು ತಾವಾಗಿಯೇ ಕೈ ಬಿಟ್ಟು ಹೋಗುತ್ತವೆ. ಗ್ರಾಹಕರಿಲ್ಲದಿದ್ದಲ್ಲಿ ಮಾರಾಟಗಾರನಿಗೆ ಕೆಲಸವಿರುವುದಿಲ್ಲ. ಪಕ್ಷದ ಪರ ಎಂದು ತೋರಿಸಿಕೊಂಡ ಸ್ವಯಂ ಘೋಷಿತ ವಿಚಾರವಾದಿಗಳು ಹಳ್ಳ ಹಿಡಿಸುತ್ತಾರಲ್ಲದೇ ಹಾದಿ ತೋರಿಸುವುದಿಲ್ಲ. ಕಾಯಿದೆ ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ, ಮಂಗನ ಕೈಯಲ್ಲಿ ಖಡ್ಗ ಕೊಟ್ಟು ಮಲಗಿದ ರಾಜ ಮೂಗು ಕತ್ತರಿಸಿಕೊಂಡಂತೆ, ಅದರ ದುರ್ಬಳಕೆ ಶುರುವಾದರೆ ಅಮಾಯಕರೇ ಅದಕ್ಕೆ ಬಲಿಯಾಗುವುದು.
-ವಿ.ಎಸ್. ದೀಕ್ಷಿತ್, ಬೆಂಗಳೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com