ದೋಷ-ಅಪರಾಧ ಬೇರೆ ಬೇರೆ
ಹಲವು ಪ್ರಕರಣಗಳಲ್ಲಿ, ಈಚೆಗೆ ಸರ್ಕಾರದ ಹಿರಿಯ ಅಧಿಕಾರಿಗಳು, ಹಿಂದೆ ತೆಗೆದುಕೊಂಡ ನಿರ್ಧಾರದ ಪರಿಣಾಮವನ್ನು ಈಗ ಪ್ರಶ್ನಿಸುವ ಪ್ರವೃತ್ತಿಯಿಂದ, ಆ ಮಟ್ಟದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆ ಕುಸಿದು ಬಿದ್ದಿದೆ ಎನ್ನುವ ಆರೋಪ ಈಗ ವ್ಯಾಪಕವಾಗಿ ಕೇಳಿ ಬಂದಿದೆ.
ಈ ದೂರಿಗೆ ಮೂಲ ಹಲವು ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ದಳವಾದ ಸಿಬಿಐ ಗಂಭೀರವಾದ ಕ್ರಮವನ್ನು ಕೈಗೊಂಡಿರುವುದು. ಈ ಹಿನ್ನೆಲೆಯಲ್ಲಿ ಸಿಬಿಐ ದೇಶದಲ್ಲಿ ದೊಡ್ಡ ವಿವಾದದ ಕೇಂದ್ರವಾಗಿದೆ.
ಈ ವಿವಾದದಲ್ಲಿ ಮೊದಲ ಅಂಶ ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಂತಾಗಿದೆ ಎನ್ನುವುದು. ಈ ವಿಷಯಗಳೆಲ್ಲವೂ ವ್ಯಾಪಕ ಚರ್ಚೆಗೆ ಗುರಿಯಾಗಿರುವ ಸನ್ನಿವೇಶದಲ್ಲೇ ಸಿಬಿಐನ ರಚನೆಯ ಬಂಗಾರದ ಹಬ್ಬವನ್ನೂ ಆಚರಿಸಲಾಗುತ್ತಿದೆ.
ಪ್ರಧಾನಿ ಮನಮೋಹನ ಸಿಂಗ್ ಅವರು ಈ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಒಂದು ವಿಚಾರ ಸಂಕಿರಣದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು, ಸಿಬಿಐ ಇದುವರೆಗೆ ಮಾಡಿರುವ ಒಳ್ಳೆಯ ಕೆಲಸವನ್ನು ಮನಃಪೂರ್ವಕವಾಗಿ ಹೊಗಳುವುದರ ಜತೆಯಲ್ಲೇ ಎಚ್ಚರಿಕೆಯನ್ನೂ ನೀಡಿರುವುದು ಗಮನಾರ್ಹ.
ಅನೇಕ ಸಂದರ್ಭಗಳಲ್ಲಿ ತಪ್ಪು ಗ್ರಹಿಕೆ ಅಥವಾ ಮಾಹಿತಿಯ ಕೊರತೆಯಿಂದ ಅಧಿಕಾರಿಗಳ ನಿರ್ಧಾರಗಳಲ್ಲಿ ದೋಷ ಕಂಡುಬಂದಿದ್ದರೆ, ಅಗತ್ಯವಾದ ಪೂರಕ ಸಾಕ್ಷ್ಯವಿಲ್ಲದೇ, ಅದನ್ನು ಅಪರಾಧ ಎಂದು ಪರಿಗಣಿಸಿ ಆರೋಪ ಪಟ್ಟಿ ಸಲ್ಲಿಸುವುದು ತಪ್ಪು. ದೋಷ... ಅಪರಾಧ ಬೇರೆ ಬೇರೆ ಎನ್ನುವುದನ್ನು ನಮ್ಮ ತನಿಖಾ ದಳಗಳು ತಿಳಿದುಕೊಳ್ಳಬೇಕಾದ ಅಗತ್ಯ ಈಗ ಎದ್ದು ಕಾಣುತ್ತಿದೆ ಎಂದು ಅವರು ಹೇಳಿರುವುದು ಗಮನಾರ್ಹ.
ಸಂವಿಧಾನದಂತೆ, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಈಗಿನ ವ್ಯವಸ್ಥೆಯಲ್ಲಿ ಸಿಬಿಐ ಕಾರ್ಯಾಂಗದ ಒಂದು ಭಾಗ. ಕಾರ್ಯಾಂಗದ ಶಿಸ್ತಿನ ಚೌಕಟ್ಟಿನಲ್ಲೇ ಸಿಬಿಐ ಕೆಲಸ ಮಾಡಬೇಕು. ಈಗಿರುವ ಕಾಯಿದೆಯಂತೆ ಅಪರಾಧಗಳ ತನಿಖೆಯ ಸಂಬಂಧದಲ್ಲಿ ಸಿಬಿಐಗೆ ಸಂಪೂರ್ಣ ಸ್ವಾಯತ್ತ ಅಧಿಕಾರವಿದೆ. ತನಿಖೆಯಲ್ಲಿ ಸಿಬಿಐ ಅಧಿಕಾರಿಗಳ ಕೆಲಸದ ಪರಿಶೀಲನೆಯ ಅಧಿಕಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಇದೆ. ಬೇರೆ ಯಾರಿಗೂ ಇಲ್ಲ. ಇದೆಲ್ಲವೂ ಗೊತ್ತಿರುವ ವಿಚಾರವೇ. ಆದರೆ ಸಿಬಿಐ ಜನರ ವಿಶ್ವಾಸದ ಅರ್ಹತೆಯನ್ನು ಗಳಿಸಿ, ಉಳಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದೆಯೇ? ಎನ್ನುವ ಪ್ರಶ್ನೆಗೆ ಸಾರ್ವತ್ರಿಕವಾಗಿ ಒಂದೇ ರೀತಿಯ ಉತ್ತರ ಸಿಗುವುದಿಲ್ಲ.
ಸಾರ್ವಜನಿಕರ ಆಸಕ್ತಿಯನ್ನು ವಿಪರೀತವಾಗಿ ಕೆರಳಿಸಿರುವ ಪ್ರಕರಣಗಳಲ್ಲಿ ತನಿಖಾ ದಳದ ಕಾರ್ಯವೈಖರಿ, ಆ ದಳಗಳಿಗೆ ಮೂಡಿರುವ ಸಂದೇಹಗಳು ಹಾಗೂ ಇತರ ವಿವರಗಳು ಪ್ರತಿನಿತ್ಯದ ಮಾಧ್ಯಮದ ಚರ್ಚೆಗೆ ಗ್ರಾಸವಾಗಿ ಹಲವಾರು ಊಹಾಪೋಹಗಳು ಲಂಗು ಲಗಾಮಿಲ್ಲದ ರೀತಿಯಲ್ಲಿ ಪ್ರಚಾರ ಪಡೆಯುತ್ತಿರುವುದೂ ನಿಜ. ಈ ಪ್ರವೃತ್ತಿ, ಖಂಡಿತವಾಗಿಯೂ ಆರೋಗ್ಯಕರವಾದುದಲ್ಲ.
ಸರ್ಕಾರದ ನೀತಿಯನ್ನು ರೂಪಿಸುವ ಹಕ್ಕು ಕಾರ್ಯಾಂಗದ್ದು. ವಿಶೇಷವಾದ ಹಾಗೂ ಬಲವತ್ತರವಾದ ಸಾಕ್ಷ್ಯ- ಆಧಾರವಿಲ್ಲದೇ, ಆ ವಿಚಾರದಲ್ಲಿ ತನಿಖಾ ದಳಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಬಹುತೇಕ ಸಂದರ್ಭಗಳಲ್ಲಿ ರಹಸ್ಯದ ಪಾಲನೆ ಪ್ರಾಮಾಣಿಕತೆಯ ರಕ್ಷಣೆಗೆ ಅನಿವಾರ್ಯ. ಆ ಕಾರಣಕ್ಕಾಗಿಯೇ, ಸಾರ್ವಜನಿಕ ಹಿತದೃಷ್ಯಿಯಿಂದಲೇ ಸಿಬಿಐಗೆ ಮಾಹಿತಿ ಹಕ್ಕಿನ ಕಾಯಿದೆಯ ನಿಯಮಗಳಿಂದ ವಿನಾಯಿತಿ ನೀಡಿರುವುದು.
ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಪಷ್ಟ ಭರವಸೆ: ಈಗಾಗಲೇ ಸಿಬಿಐಗೆ ಸಾಕಷ್ಟು ಸ್ವಾಯತ್ತ ಅಧಿಕಾರ ಇದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅದಕ್ಕೆ ಇನ್ನಷ್ಟು ಶಕ್ತಿ ತುಂಬುವ ಸ್ವರೂಪದ ಅಧಿಕಾರ ಬೇಕೆನಿಸಿದರೆ, ಸರ್ಕಾರ ಅದನ್ನು ಪರಿಶೀಲಿಸಲಿದೆ.
ಮನಮೋಹನ ಸಿಂಗ್ ಅವರ ಅನಿಸಿಕೆಗಳನ್ನು ಪ್ರಶ್ನಿಸುವುದು ಸುಲಭ. ಆದರೆ ಸಾರಾಸಗಟು ಅಲ್ಲಗಳೆಯುವಂತಿಲ್ಲ. ಉದಾರ ಆರ್ಥಿಕ ನೀತಿ ಹಾಗೂ ಆರ್ಥಿಕ ಪ್ರಗತಿಯ ವಾತಾವರಣದಲ್ಲಿ ಕೆಲವು ಜನವರ್ಗಗಳಿಗೆ ಭ್ರಷ್ಟಾಚಾರಕ್ಕೆ ಈಗ ಹೆಚ್ಚಿನ ಅವಕಾಶವಿದೆ. ಆ ವಿಚಾರದಲ್ಲಿ ಸಮಾಜದ ಎಲ್ಲ ಶಕ್ತಿಗಳ ನಿರಂತರ ಎಚ್ಚರಿಕೆ ಅಗತ್ಯ.