ಮೋದಿ ಸವಾಲು ನಿಜ
ಕಳೆದ ಹಲವಾರು ವಾರಗಳಿಂದಲೂ, ವಸ್ತುಶಃ ಬಿಜೆಪಿಯ ಸಾರಥಿಯಾಗಿರುವ ನರೇಂದ್ರ ಮೋದಿ ಅವರು ಒಡ್ಡಿರುವ ಸವಾಲನ್ನು ಇದುವರೆಗೂ ಕಾಂಗ್ರೆಸ್ಸಿನ ಪ್ರಥಮ ಶ್ರೇಣಿಯ ನಾಯಕರು ಯಾರೂ ಬಹಿರಂಗವಾಗಿ ಗಂಭೀರವಾಗಿ ಪರಿಗಣಿಸಿದ್ದನ್ನು ಪ್ರಕಟಿಸಿರಲಿಲ್ಲ. ಆದರೆ ಅಂತರಂಗದಲ್ಲಿ ಅವರಲ್ಲಿ ಅಳುಕು ಇದ್ದೇ ಇತ್ತು.
ಈಗ ಕಾಂಗ್ರೆಸ್ ಹಾಗೂ ಸರ್ಕಾರದ ನಾಯಕರ ಶ್ರೇಣಿಯಲ್ಲಿ ಪ್ರಮುಖವಾದ ಸ್ಥಾನ ಪಡೆದಿರುವ ವಿತ್ತಮಂತ್ರಿ ಪಿ.ಚಿದಂಬರಮ್ ಭಾನುವಾರ ಪಣಜಿಯಲ್ಲಿ ಮೊಟ್ಟ ಮೊದಲ ಬಾರಿಗೆ ನರೇಂದ್ರ ಮೋದಿ ಅವರ ಸವಾಲು ನಿಜ, ಅದನ್ನು ಕಾಂಗ್ರೆಸ್ ಕಡೆಗಣಿಸುವಂತಿಲ್ಲ ಎನ್ನುವುದನ್ನು ಬಹಿರಂಗವಾಗಿ ಒಂದು ಕೂಟದಲ್ಲಿ ಒಪ್ಪಿಕೊಂಡಿದ್ದಾರೆ.
ಇದು ಕಾಂಗ್ರೆಸ್ಸಿನ ನೀತಿ ನಿರೂಪಣೆಯಲ್ಲಿ ಕಂಡುಬಂದಿರುವ ಒಂದು ಸ್ವಷ್ಟವಾದ ಬದಲಾವಣೆ ಹಾಗೂ ತಿರುವು. ಈಗಾಗಲೇ ನರೇಂದ್ರ ಮೋದಿ ಅವರ ಟೀಕಾಸ್ತ್ರಗಳಿಗೆ ಕಾಂಗ್ರೆಸ್ಸಿನ ಎರಡನೇ, ಮೂರನೆಯ ಶ್ರೇಣಿಯ ನಾಯಕರು ಖಾರವಾಗಿಯೇ ಪ್ರತಿಕ್ರಿಯಿಸುತ್ತಿದ್ದರೂ, ಅದನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಕಾಂಗ್ರೆಸ್ ಭಾವಿಸಿದಂತಿದೆ.
ಪಣಜಿಯಲ್ಲಿ ಚಿದಂಬರಮ್ ಹೇಳಿರುವ ಇನ್ನೊಂದು ಮಾತು ಗಮನಾರ್ಹ. ರಾಹುಲ ಗಾಂಧಿ ಅವರಿಗೆ ತಾವು ಸಲಹೆ ಕೊಡುವವರಾಗಿದ್ದರೆ, ದೇಶದ, ಜನರ ಮುಂದಿರುವ ಗಂಭೀರ ಸಮಸ್ಯೆಗಳನ್ನು ಅವರ ರ್ಯಾಲಿಗಳಲ್ಲಿ ಪ್ರಸ್ತಾಪಿಸಬೇಕೆಂದು ಹೇಳುತ್ತಿದ್ದೆ ಎಂದೂ ಅವರು ಹೇಳಿ, ಅವರ ಪಾಲಿಗೆ ಪಕ್ಷದ ಭವಿಷ್ಯದ ನಾಯಕತ್ವದ ಸ್ವರೂಪ ನಿರ್ಧಾರವಾದಂತೆಯೇ ಆಗಿದೆ ಎನ್ನುವುದರ ಇಂಗಿತ ನೀಡಿದ್ದಾರೆ.
ಚಿದಂಬರಮ್ ಅವರ ಪಣಜಿಯ ಪ್ರಕಟನೆಯ ಪರಿಣಾಮ ನಿಜಕ್ಕೂ ಕುತೂಹಲವನ್ನು ಕೆರಳಿಸುವಂತಹದ್ದೇ. ಕಾದು ನೋಡಬೇಕು.