ನ್ಯಾಯ ದೇಗುಲದಲ್ಲಿ ಕಾಮಣ್ಣ?
ನ್ಯಾಯಾಲಯಗಳನ್ನು, ಅದರಲ್ಲೂ ಸುಪ್ರೀಮ್ ಕೋರ್ಟನ್ನು ನಮ್ಮ ಜನ ಪವಿತ್ರ ಸ್ಥಳಗಳೆಂದೇ ಭಾವಿಸಿದ್ದಾರೆ. ನ್ಯಾಯಾಧೀಶರ ವಿಚಾರದಲ್ಲಿ ಸಾಮಾನ್ಯರಲ್ಲಿ ತುಂಬಾ ಗೌರವವಿದೆ. ಹೀಗಾಗಿ ಅಲ್ಲಿ ಸ್ವಲ್ಪ ಕಳಂಕವಿರುವ ವರದಿಗಳೂ ಜನರನ್ನು ಬೆಚ್ಚಿ ಬೀಳಿಸುತ್ತವೆ. ಅಲ್ಲಿ ಸಣ್ಣ ತಪ್ಪಾದರೂ ಅದನ್ನು ಒಪ್ಪಲು ಜನ ಸಿದ್ಧರಿಲ್ಲ.
ಸುಪ್ರೀಮ್ ಕೋರ್ಟಿನ ಒಬ್ಬ ನ್ಯಾಯಮೂರ್ತಿ, ಕೆಲವು ವರ್ಷಗಳ ಹಿಂದೆ ಕೋಲ್ಕತಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ತಮ್ಮಲ್ಲಿ ತರಬೇತಿಗೆಂದು ಬಂದಿದ್ದಾಗ (ಅದು ಶಿಕ್ಷಣ ವ್ಯವಸ್ಥೆಯ ಒಂದು ಭಾಗ) ತಮ್ಮ ಕೊಠಡಿಯಲ್ಲೇ ಅಸಭ್ಯವಾಗಿ ವರ್ತಿಸಿದ್ದರೆನ್ನುವ ದೂರನ್ನು ಈಗ ಬಹಿರಂಗಗೊಳಿಸಲಾಗಿದೆ.
ಈಚೆಗೆ ಆ ನ್ಯಾಯಮೂರ್ತಿ ನಿವೃತ್ತರಾಗಿದ್ದಾರೆ. ಆ ವಿದ್ಯಾರ್ಥಿನಿಯ ದೂರಿನಲ್ಲಿ ಯಾವುದೇ ರೀತಿಯ ದೈಹಿಕ ಅನಾಚಾರದ ಪ್ರಸ್ತಾಪವನ್ನೂ ಮಾಡಿಲ್ಲ. ಆದರೂ ಈ ಸುದ್ದಿ ನ್ಯಾಯಾಂಗದ ವಲಯಗಳಲ್ಲಿ ದೊಡ್ಡ ರೀತಿಯ ಕೋಲಾಹಲವನ್ನೇ ನಿರ್ಮಿಸಿದೆ. ಈ ದೂರಿನ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರು ಪ್ರಕರಣದ ತನಿಖೆಗೆ ಮೂವರು ನ್ಯಾಯಾಧೀಶರ ಸಮಿತಿಯನ್ನು ರಚಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ನಡೆದಿದ್ದು ಎನ್ನಲಾದ ಈ ಪ್ರಕರಣವನ್ನು, ಆ ವಿದ್ಯಾರ್ಥಿನಿ (ಈಗ ವೃತ್ತಿನಿರತರು) ತನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೇಕೆ ಎನ್ನುವುದು ನಿಜಕ್ಕೂ ನಿಗೂಢ ಪ್ರಶ್ನೆಯೇ. ಅದಕ್ಕೆ ಆಕೆಯ ಉತ್ತರವೂ ಸಮಂಜಸವಾದದ್ದೇ. ಘಟನೆ ನಡೆದ ಕೂಡಲೇ ದೂರು ಕೊಡಲಿಕ್ಕೆ ಆಗ ಧೈರ್ಯವಿರಲಿಲ್ಲ. ಅಪಮಾನದ ಬೇಗೆಯನ್ನು ಬಹುಕಾಲ ಸಹಿಸಿಕೊಂಡಿದ್ದು, ಇಂತಹ ಘಟನೆಯನ್ನು ಮುಚ್ಚಿಟ್ಟರೆ ಅಪಚಾರವಾದೀತೆಂದು ಈಗ ಹೇಳಿರುವುದಾಗಿ ಆಕೆ ಹೇಳಿದ್ದಾರೆ.
ಮುಂದೆ ಇಂತಹ ಪ್ರಕರಣಗಳನ್ನು ಎದುರಿಸುವ ಸ್ಥಿತಿ ಯಾವ ಹೆಣ್ಣುಮಗಳಿಗೂ ಬರಬಾರದು ಎನ್ನುವುದೇ ಅವರ ಸದಾಶಯ. ಈ ಪ್ರಕರಣದಲ್ಲಿ ಯಾರ ಹೆಸರೂ ಬಹಿರಂಗವಾಗಿ ಪ್ರಸ್ತಾಪವಾಗದಿರುವಾಗ, ಮೂವರು ನ್ಯಾಯಾಧೀಶರ ತನಿಖಾ ಸಮಿತಿಯ ಕಾರ್ಯ ನಿರ್ವಹಣೆಯ ಸ್ವರೂಪ ನಿಜಕ್ಕೂ ಕುತೂಹಲಕಾರಿ. ವಾಸ್ತವದಲ್ಲಿ ಇಂತಹ ಘಟನೆ ನಡೆಯಬಾರದಿತ್ತು.