ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೀಗೊಂದು ಮಹತ್ವದ ಆದೇಶ ಗಂಭೀರ ದೂರು ದಾಖಲೆ ಬೇಕು

Srinivasa Murthy VN
Updated On : 13 Nov 2013, 11:45 am

ಪೊಲೀಸ್ ಠಾಣೆಗಳಲ್ಲಿ ವಿಚಾರಣಾರ್ಹ ಹಾಗೂ ಗಂಭೀರ ಸ್ವರೂಪದ ದೂರನ್ನು ಕೊಟ್ಟಾಗ ಮೊದಲ ಮಾಹಿತಿ ವರದಿಯ ದಾಖಲೆ ಕಡ್ಡಾಯ ಎನ್ನುವ ಸುಪ್ರೀಮ್ ಕೋರ್ಟಿನ ಆದೇಶ ನೀಜಕ್ಕೂ ಅಪರಾಧಗಳ ತನಿಖೆ, ನ್ಯಾಯ ವಿತರಣೆಯಲ್ಲಿ ನ್ಯಾಯಾಂಗ ಇಟ್ಟಿರುವ ಒಂದು ದಿಟ್ಟ ಹೆಜ್ಜೆ.
ಅಪರಾಧಗಳ ತನಿಖೆ, ವಿಚಾರಣೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಸಂವಿಧಾನದಂತೆ ಸರ್ಕಾರದ ಕರ್ತವ್ಯ. ಪೊಲೀಸರ ಗಮನಕ್ಕೆ ಗಂಭೀರ ಪ್ರಕರಣಗಳು ಬಂದರೆ, ಮೊದಲು, ಮೊದಲ ಮಾಹಿತಿಯ ವರದಿಯ ದಾಖಲೆಯಾಗಲೇಬೇಕು, ಅದೇ ಮುಂದಿನ ಎಲ್ಲ ಕ್ರಮಗಳಿಗೂ ಬುನಾದಿ.
ಯಾರೂ ದೂರು ಕೊಡದೇ ಇದ್ದರೂ ಗಂಭೀರ ಪ್ರಕರಣಗಳಲ್ಲಿ ತನಿಖೆ ನಡೆಯಲೇಬೇಕು. ಇನ್ನು ದೂರುಗಳನ್ನು ಪೊಲೀಸ್ ಠಾಣೆಗೆ ತಲುಪಿಸಿದ ಅನಂತರ ಪೂರ್ವಭಾವಿ ತನಿಖೆಗೆ ಅವಕಾಶವೇ ಇಲ್ಲ. ಮೊದಲು ಮಾಹಿತಿ ವರದಿಯನ್ನು ದಾಖಲಿಸಿ, ಅನಂತರ ಮುಂದಿನ ತನಿಖೆ ಎನ್ನುವುದೇ ಮಂಗಳವಾರದ ಸುಪ್ರೀಮ್ ಕೋರ್ಟಿನ ಆದೇಶದ ತಿರುಳು. ಮೇಲ್ನೋಟಕ್ಕೇ, ಇದು ಪೊಲೀಸರ ಕರ್ತವ್ಯ. ಕರ್ತವ್ಯ ಪಾಲನೆಗೂ ಸುಪ್ರೀಮ್ ಕೋರ್ಟಿನ ಆದೇಶ ಪಾಲನೆಗೂ ಸುಪ್ರೀಮ್ ಕೋರ್ಟಿನ ಆದೇಶ ಬೇಕೆ ಎನ್ನುವ ಪ್ರಶ್ನೆ ತೀರ ಸಹಜವೆಂದೇ ಕಂಡುಬರುತ್ತಿದೆ. ಆದರೆ ಅನೇಕ ಪ್ರಕರಣಗಳು, ದೂರುಗಳ ಆಧಾರದ ಮೊದಲ ಮಾಹಿತಿ ವರದಿ ಇಲ್ಲದೆಯೇ ಇತ್ಯರ್ಥವಾಗಿಬಿಡುವ ವಿಚಾರ ರಹಸ್ಯವೇನೂ ಅಲ್ಲ. ಪೊಲೀಸ್ ಠಾಣೆಗಳಲ್ಲಿನ ಕೆಲಸದ ವೈಖರಿಯನ್ನು ಬಲ್ಲವರಿಗೆ ಇದು ಚೆನ್ನಾಗಿಯೇ ಗೊತ್ತು.
ಒಂದು ಪ್ರಕಟಿತ ಅಂದಾಜಿನ ಪ್ರಕಾರ ದೇಶದಲ್ಲಿ ಸರಾಸರಿ ಲೆಕ್ಕದಲ್ಲಿ ಪ್ರತಿ ವರ್ಷ ಅರವತ್ತು ಲಕ್ಷ ದೂರುಗಳ ವಿಚಾರದಲ್ಲಿ ಮೊದಲ ಮಾಹಿತಿ ವರದಿಯ ದಾಖಲೆಯೇ ಇಲ್ಲದೇ ಪ್ರಕರಣಗಳು ಹೇಗೋ ಇತ್ಯರ್ಥವಾಗಿ ಬಿಡುತ್ತಿವೆ. ಅಪರಾಧಗಳ ಸಂಖ್ಯೆಯನ್ನು ಕುಗ್ಗಿಸುವ ತಂತ್ರಗಳಲ್ಲಿ ಇದೂ ಒಂದು ತಂತ್ರ ಎಂದು ಅನೇಕರ ಅಭಿಪ್ರಾಯ. ಇನ್ನು ಬೇರೆ ರೀತಿಯ ಅವ್ಯವಹಾರಗಳ ಪ್ರಸ್ತಾವವೂ ಇದೆ. ಸುಪ್ರೀಮ್ ಕೋರ್ಟಿನ ಈ ಮಹತ್ವದ ಆದೇಶವನ್ನು ಪಾಲಿಸದ ಅಥವಾ ಕಡೆಗಾಣಿಸುವ ಅಧಿಕಾರಿಗಳು ಶಿಕ್ಷಾರ್ಹರೆನ್ನುವ ಉಲ್ಲೇಖ, ನ್ಯಾಯಂಗದ ಅತ್ಯುನ್ನತ ಮಟ್ಟದಲ್ಲಿ ಮೊದಲ ಮಾಹಿತಿ ವರದಿಗೆ ಇರುವ ಪ್ರಾಮುಖ್ಯಕ್ಕೆ ಸಾಕ್ಷಿ.
ಪೊಲೀಸ್ ಠಾಣೆಗಳಲ್ಲಿ ಇನ್ನು ಮುಂದೆ, ಠಾಣೆಗೆ ಹೋಗಿ ದೂರು ಕೊಟ್ಟರೂ ಅದನ್ನು ದಾಖಲಿಸಲು ನಿರಾಕರಿಸಿದ ಆರೋಪಗಳಿಗೆ ಅವಕಾಶ ಇರಬಾರದು. ನಿಜ. ಠಾಣೆಗೆ ಬರುವ ಎಲ್ಲ ದೂರುಗಳೂ (ಗಂಭೀರ ಸ್ವರೂಪದ ಆರೋಪಗಳೇ ಇದ್ದರೂ) ಸಾಚಾ ದೂರುಗಳೇ ಎನ್ನುವಂತಿಲ್ಲ. ವೈಯಕ್ತಿಕ ದ್ವೇಷ ಹಾಗೂ ಇತರ ಹಲವಾರು ಕಾರಣಗಳಿಂದಾಗಿ ಕೆಲವರು ಸುಳ್ಳು ದೂರುಗಳನ್ನೋ, ಉತ್ಪ್ರೇಕ್ಷಿತ ದೂರುಗಳನ್ನೋ ಕೊಡಲೂಬಹುದು. ದೂರಿನ ಆಧಾರದ ಮೇಲೆ ಮೊದಲ ಮಾಹಿತಿಯ ವರದಿಯನ್ನು ದಾಖಲಿಸಿ, ಅನಂತರದ ತನಿಖೆಯಲ್ಲಿ ದೂರು ಸುಳ್ಳು ಎಂದಾದರೆ, ಅದನ್ನು ತಿರಸ್ಕರಿಸಬಹುದು. ಅದಕ್ಕೂ ದಾಖಲೆ ಇರಬೇಕು.
ಸುಪ್ರೀಮ್ ಕೋರ್ಟಿನ ಆದೇಶವನ್ನು ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ವಾಗತಿಸಿದ್ದಾರೆ. ಆದರೆ ಅವರ ಸಮಸ್ಯೆ ಎಂದರೆ, ಪೊಲೀಸ್ ಪಡೆಗಳಲ್ಲಿ ಈಗ ಕಂಡುಬಂದಿರುವ ಕೊರತೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಠಾಣೆಗಳಿಗೆ ಬರುವ ಎಲ್ಲ ದೂರುಗಳನ್ನು ನೋಡಿ, ಮೊದಲ ಮಾಹಿತಿ ವರದಿಯನ್ನು ಸಿದ್ಧಪಡಿಸುವುದು ಕಷ್ಟ ಎನ್ನುವುದು. ಸಿಬ್ಬಂದಿಯ ಕೊರತೆಯನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ. ಅಪರಾಧಗಳ ತನಿಖೆಯ ವಿಚಾರದಲ್ಲಿ ಪ್ರಭುತ್ವ ಯಾವುದೇ ರೀತಿಯ ಹೊಂದಾಣಿಕೆಯನ್ನೂ ಮಾಡಿಕೊಳ್ಳಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement