ಸರ್ಕಾರಿ ಭೂಮಿ ಒತ್ತುವರಿ: ತೆರವಿಗೆ ಆಲಸ್ಯ ಸಲ್ಲದು
ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಿಚಾರ ಹಳೆಯದು. ಹೆಚ್ಚು ಕಡಿಮೆ ರಾಜ್ಯದ ಎಲ್ಲ ಭಾಗಗಳಲ್ಲೂ ಅನೇಕ ವರ್ಷಗಳಿಂದ ಈ ಕೆಲಸ ನಡೆದಿದೆ. ಈ ಭೂಮಿಯನ್ನು ತೆರವು ಮಾಡಿಕೊಂಡು, ಅದನ್ನು ಯೋಗ್ಯ ರೀತಿಯಲ್ಲಿ ಬಳಸಬೇಕಾದ್ದು ಸರ್ಕಾರದ ಕರ್ತವ್ಯ. ಎಲ್ಲ ಕಡೆ ಬಡವರೇ ಜೀವನೋಪಾಯಕ್ಕಾಗಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದೇನೂ ಅಲ್ಲ. ಅಂತಹ ಪ್ರಕರಣಗಳೂ ಇರಬಹುದು. ಆದರೆ ಬಹು ಮಟ್ಟಿಗೆ ಇಂತಹ ಅಕ್ರಮ ದಂಧೆಗೆ ಕೈ ಹಾಕುವ ಧೈರ್ಯವಿರುವುದು ಬಲಿಷ್ಠರಿಗೇ ಹಾಗೂ ಶ್ರೀಮಂತರಿಗೆ. ಸರ್ಕಾರದ ಭೂ ಸುಧಾರಣೆ ನೀತಿಯ ಮೂಲ ಉದ್ದೇಶವನ್ನೇ ಅನೇಕ ಕಡೆಗಳಲ್ಲಿ ಉಲ್ಲಂಘಿಸಲು ಇಂತಹ ಅಕ್ರಮದ ಮಾರ್ಗವನ್ನೂ ಅನುಸರಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಭೂಮಿಯ ಖಾಸಗಿ ಆಕ್ರಮಣದ ವ್ಯವಹಾರ ಹಾಗೂ ಆ ವಿಚಾರದಲ್ಲಿ ಸರ್ಕಾರದ ನೀತಿ ದೊಡ್ಡ ರೀತಿಯ ವಿವಾದದ ಅಲೆಗಳನ್ನೇ ಎಬ್ಬಿಸಿರುವುದು ನಿಜ. ಅಧಿಕಾರದ ಸ್ಥಾನದಲ್ಲಿ ಕೂತವರಲ್ಲಿ ಯಾರೂ ಈ ಅಕ್ರಮ ಒತ್ತವರಿಯನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿಲ್ಲ. ಆದರೆ ಯಾರೂ ತೆರವುಗೊಳಿಸಲು ಗಂಭೀರವಾದ ಪ್ರಯತ್ನವನ್ನೇ ನಡೆಸಿಲ್ಲ.
ಈ ವಿಚಾರದಲ್ಲಿ ಸರ್ಕಾರದ ಮುಂದೆ ಒಬ್ಬ ನಿವೃತ್ತ ಹಿರಿಯ ಐ.ಎ.ಎಸ್. ಅಧಿಕಾರಿ ನೀಡಿದ ವರದಿ ಇದೆ. ಇದಕ್ಕೆ ಸಂಬಂಧಿಸಿದಂತೆಯೇ, ಬೆಂಗಳೂರು ಹಾಗೂ ಇತರ ದೊಡ್ಡ ನಗರಗಳ ಸುತ್ತಮುತ್ತಲ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಹತ್ತಾರು ಸಹಸ್ರ ಎಕರೆಗಳಷ್ಟು ಸರ್ಕಾರಿ ಭೂಮಿಯನ್ನು ಕಬಳಿಸಿರುವ ವಿಚಾರದಲ್ಲಿ ವಿಧಾನ ಮಂಡಲದ ಒಂದು ವಿಶೇಷ ತನಿಖಾ ಸಮಿತಿಯ ವರದಿಯೂ ಇದೆ.
ಈ ಎರಡೂ ವಿಚಾರಗಳೂ ಆಗಿಂದ್ದಾಗ್ಗೆ ವಿಧಾನ ಮಂಡಲದ ಸದನಗಳ ಮುಂದೆ ಪ್ರಸ್ತಾಪವಾದಾಗ, ಸರ್ಕಾರ ಅಕ್ರಮ ಒತ್ತುವರಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಖಚಿತ ಎನ್ನುವ ಭರವಸೆಯನ್ನೂ ನೀಡಿದೆ. ಸುಮಾರು ಹತ್ತು ವರ್ಷಗಳ ಕತೆ ಇದು.
ಈಗ ಅಕ್ರಮ ಒತ್ತುವರಿಯ ಭೂಮಿಯ ತೆರವಿನ ವಿಚಾರ ಸಾರ್ವಜನಿಕ ಹಿತರಕ್ಷಣಾ ವಿವಾದದ ಮೂಲಕ ಹೈಕೋರ್ಟನ್ನೂ ತಲುಪಿದೆ. ಸೋಮವಾರ ಹೈಕೋರ್ಟಿನಲ್ಲಿ ಈ ಪ್ರಕರಣದ ಪ್ರಸ್ತಾಪವಾದಾಗ, ಸರ್ಕಾರದ ಪರವಾಗಿ ನೀಡಲಾದ ಅಂಕಿ-ಅಂಶಗಳಿಂದ ತುಂಬಿದ ವರದಿಯನ್ನು ನ್ಯಾಯಪೀಠ ಕಟುವಾಗಿ ಖಂಡಿಸಿದ್ದು ಸಾಮಾನ್ಯ ವಿಚಾರವಲ್ಲ. ವರದಿಯಲ್ಲಿ ಅಂಕಿ-ಅಂಶಗಳನ್ನು ಬಿಟ್ಟು ಏನೂ ಇಲ್ಲ ಎನ್ನುವುದು ನ್ಯಾಯಪೀಠದ ಅಭಿಪ್ರಾಯ. ಅಕ್ರಮವಾಗಿ ಒತ್ತವರಿಯಾದ ಭೂಮಿಯಲ್ಲಿ ಒಂದು ದೊಡ್ಡ ಭಾಗವನ್ನು ಸಕ್ರಮಗೊಳಿಸಬೇಕೆನ್ನುವ ಅರ್ಜಿಯೂ ಸರ್ಕಾರದ ಪರಿಶೀಲನೆಯಲ್ಲಿದೆ. ಕಾಯಿದೆಯಲ್ಲಿ ಅದಕ್ಕೆ ಅವಕಾಶವಿದೆಯಂತೆ. ಉಳಿದಂತೆ ಒಂದು ಲಕ್ಷ ಎಕರೆಯಷ್ಟು ಭೂಮಿಯನ್ನು ತೆರವು ಮಾಡಲಾಗಿದೆಯಂತೆ. ಅನೇಕ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ನೋಟೀಸು ಜಾರಿಯಾಗಿದೆ. ಇಂತಹ ಪ್ರಕರಣಗಳಲ್ಲಿ ನೋಟೀಸು ಜಾರಿ ಮಾಡುವುದೆಂದರೆ, ನ್ಯಾಯಾಲಯದಲ್ಲಿ ದೀರ್ಘ ಕಾಲದ ವಿಚಾರಣೆಗೆ ಆಹ್ವಾನ ನೀಡಿದಂತೆಯೇ. ಅಕ್ರಮ ಒತ್ತುವರಿ ಭೂಮಿಯನ್ನು ತೆರವು ಮಾಡುವ ವಿಚಾರದಲ್ಲಿ ಸರ್ಕಾರ ಸಮಗ್ರ ಸ್ವರೂಪದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ.
ಈ ಕ್ರಿಯಾಯೋಜನೆ ನಿಜವಾಗಲೂ ಅವಧಿಬದ್ಧವಾಗಿರಬೇಕು ಹಾಗೂ ಕಾರ್ಯಸಾಧುವಾಗಿರಬೇಕು. ಬಡವರು ಮಾಡಿರಬಹುದಾದ ಒತ್ತುವರಿ ಪ್ರಕರಣಗಳಿಗೇ ಸೀಮಿತವಾಗಬಾರದು. ಹೈಕೋರ್ಟಿನ ಆಶಯದಂತೆ ತೆರವು ಮಾಡುವ ಆಂದೋಲನ ದೊಡ್ಡವರಿಂದಲೇ, ದೊಡ್ಡ ರೀತಿಯಲ್ಲೇ ಆರಂಭವಾಗಬೇಕು. ಇನ್ನು ನೆಪ ಬೇಡ.