ಕಮಗೋಡು ನರಸಿಂಹ ಶಾಸ್ತ್ರಿಗಳ ಪ್ರಾಗತಿಕ ಮನೋಭಾವ
ಕುವೆಂಪು, ನಿಟ್ಟೂರು ಶ್ರೀನಿವಾಸರಾಯರ ಸಹಪಾಠಿಯಾಗಿದ್ದ ಕಮಗೋಡು ನರಸಿಂಹ ಶಾಸ್ತ್ರಿಗಳು ಒಬ್ಬ ಅಪರೂಪದ ಕನ್ನಡ ಪಂಡಿತರು. 'ಜ್ಯೋತಿಷ ಕಲ್ಪದ್ರುಮ' ಎಂಬ ಬೃಹತ್ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಸ್ತ್ರ ಸನ್ಯಾಸ, ಸತೀಗೀತೆ, ಅರ್ಥಕೋಶ, ಮುಂತಾದ ಕೃತಿಗಳನ್ನೂ ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇಂಗ್ಲಿಷಿನಿಂದ ಮತ್ತು ಸಂಸ್ಕೃತದಿಂದಲೂ ಸಹ ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಂಸ್ಕೃತಿ, ವಿದ್ವತ್ತು, ಸೃಜನಶೀಲತೆಗೆ ಹೆಸರಾಗಿದ್ದ ಶಾಸ್ತ್ರಿಗಳ ಶಿಷ್ಯವರ್ಗಕ್ಕೆ ಸೇರಿದ ಖ್ಯಾತರೆಂದರೆ ಯು.ಆರ್.ಅನಂತಮೂರ್ತಿ, ಎಸ್.ವಿ.ಪರಮೇಶ್ವರ ಭಟ್ಟ, ಶಾಂತವೇರಿ ಗೋಪಾಲಗೌಡ ಮುಂತಾದವರು. ಅವರು ಪಾಠ ಮಾಡುತ್ತಿದ್ದ ರೀತಿಯೇ ವಿಶಿಷ್ಠವಾಗಿತ್ತು. ಪಠ್ಯದ ನೆಪದಲ್ಲಿ ನೂರಾರು ಸಂಗತಿಗಳನ್ನು ಹೇಳಿ ವಿದ್ಯಾರ್ಥಿಗಳ ಹೃದಯವನ್ನು ತುಂಬಿಸುತ್ತಿದ್ದರು. ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದರು.
ಕುರುಡು ನಂಬಿಕೆಯನ್ನೆಂದೂ ಪ್ರೋತ್ಸಾಹಿಸುತ್ತಿರಲಿಲ್ಲ. ಆ ಗುಣವನ್ನವರು ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಬಂದಿದ್ದರು. ಶಾಸ್ತ್ರಿಗಳು ಚಿಕ್ಕವರಿದ್ದಾಗ ಅವರ ಮನೆಯ ಹೊಲೆಯಾಳು ಒಮ್ಮೆ ಸೊಪ್ಪಿನ ಹೊರೆಯನ್ನು ಹೊತ್ತುಕೊಂಡು ಬರುತ್ತಿದ್ದ. ಹೊರೆಯ ಒಂದು ತುದಿ ಶಾಸ್ತ್ರಿಗಳಿಗೆ ಅಕಸ್ಮಾತ್ ತಾಗಿತು. ಅಂದಿನ ದಿನಗಳಲ್ಲಿ ಅಸ್ಪೃಶ್ಯತೆ ಸಾಮಾನ್ಯವಾಗಿತ್ತು. ತಕ್ಷಣ ಆ ಆಳು ತನ್ನ ತಲೆಹೊರೆಯನ್ನು ಕೆಳಗೆ ಹಾಕಿ, ಭಯ ಭಕ್ತಿಯಿಂದ ತಾನು ಅವರನ್ನು ನೋಡದೆ ಹೊರೆಯನ್ನು ತಾಗಿಸಿದ್ದಾಗಿಯೂ, ಅದಕ್ಕಾಗಿ ಅವರು ಅಂಗಿ ಕಳಚಿ ಸ್ನಾನ ಮಾಡಿಬರಬೇಕೆಂದೂ ಪರಿಪರಿಯಾಗಿ ಕೇಳಿದ. ಅಂದು ಅವರ ಮನೆಯಲ್ಲಿ ವಿಶೇಷ ಪೂಜೆಯೂ ಇತ್ತು. ಆದರೂ ಶಾಸ್ತ್ರಿಗಳು ಅವನ ಮಾತನ್ನು ಕೇಳಲೇ ಇಲ್ಲ. ತನ್ನಂತೆಯೇ ಅವನೂ ಒಬ್ಬ ಮನುಷ್ಯನಾದುದರಿಂದ ಅಸ್ಪೃಶ್ಯತೆಗೆ ಎಡೆಯೆಲ್ಲಿ ಎಂದವರು ಚಿಕ್ಕವಯಸ್ಸಿನಲ್ಲಿಯೇ ಯೋಚಿಸಿದರು.
ಅವರು ಯಾವಾಗಲೂ ಸತ್ಯಶೋಧನೆಯಲ್ಲದಿದ್ದರೆ ಆತ್ಮಚರಿತ್ರೆಯೆಲ್ಲವೂ ಸ್ವಪ್ರಯೋಜನ ಸಾಧನ ಎಂದು ಭಾವಿಸಿದ್ದರು. ಅವರ ಪ್ರಗತಿಪರ ಧೋರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ತೀರ್ಥಹಳ್ಳಿಯಲ್ಲಿಯೇ ನೆಲಸಿ ಮಲೆನಾಡಿನ ಹಲವಾರು ಯುವಕರಿಗೆ ಸ್ಫೂರ್ತಿ ನೀಡಿದರು ಎಂದು ಅವರ ಪ್ರಭಾವಲಯಕ್ಕೆ ಸೇರಿದ ಹ.ಮಾ.ನಾಯಕರು ಒಂದೆಡೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.