ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜೈಲಿನಲ್ಲಿದ್ದರೂ ಚುನಾವಣೆ ಸ್ಪರ್ಧೆಗೆ ಅರ್ಹರು

Srinivasa Murthy VN
Updated On : 20 Nov 2013, 11:17 am

ಇತ್ತೀಚಿನ ಒಂದು ಸುಪ್ರೀಮ್ ಕೋರ್ಟಿನ ತೀರ್ಪಿನಂತೆ, ಯಾವುದೇ ಕಾರಣಕ್ಕೇ ಆದರೂ, ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲಿನಲ್ಲಿ ಅಥವಾ ಪೊಲೀಸ್ ಠಾಣೆಗಳಲ್ಲಿ ಬಂಧನದಲ್ಲಿದ್ದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿರಲಿಲ್ಲ.
ಈ ಕ್ರಮದಿಂದ ಇನ್ನೂ ಆರೋಪ ಸಾಬೀತಾಗುವುದಕ್ಕೆ ಮುಂಚೆಯೇ, ಒಬ್ಬ ಆರೋಪಿಯನ್ನು ಮೂಲಭೂತ ಜನತಾಂತ್ರಿಕ ಹಕ್ಕಿನಿಂದ ವಂಚಿತರನ್ನಾಗಿ ಮಾಡುವಂತೆಯೇ ಆಗುತ್ತದೆ ಎನ್ನುವುದು ಬಹುತೇಕ ರಾಜಕೀಯ ಪಕ್ಷಗಳ ಹಾಗೂ ಸರ್ಕಾರದ ಅಭಿಪ್ರಾಯವಾಗಿತ್ತು. ಸುಪ್ರೀಮ್ ಕೋರ್ಟಿನ ತೀರ್ಪು ಪ್ರಕಟವಾಗಿದ್ದು ಇದೇ ವಿಚಾರದಲ್ಲಿ ಪಟನಾ ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದ ಪರಿಣಾಮವಾಗಿ. ರಾಜಕೀಯದಲ್ಲಿ ಸಕ್ರಿಯವಾಗಿರುವ ಅನೇಕ ಹೋರಾಟಗಾರರು ಚಳವಳಿ, ಪ್ರದರ್ಶನಗಳನ್ನು ನಡೆಸಿದಾಗ, ಹಿಂಸಾಚಾರ ನಡೆದರೆ, ಆಗ ಪೊಲೀಸರು ಅನೇಕರನ್ನು ಬಂಧಿಸಿ, ಅವರ ವಿರುದ್ಧ ಗುರುತರವಾದ ಆರೋಪಗಳನ್ನು ಹೊರಿಸಿ ಜೈಲಿಗೆ ತಳ್ಳುವುದು ಹಿಂದೆ ಒಂದು ಸಂಪ್ರದಾಯವೇ ಆಗಿತ್ತು. ಬೆಂಗಳೂರಿನಲ್ಲೇ ಒಂದು ಪ್ರಕರಣದಲ್ಲಿ ರಾಜಭವನದ ಮುಂದೆ ಪ್ರದರ್ಶನ ನಡೆಸಿದಾಗ ಕಾರ್ಮಿಕರು ರೊಚ್ಚಿಗೆದ್ದು ಕಲ್ಲು ಎಸೆದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿ, ಅನೇಕರನ್ನು ಬಂಧಿಸಿ, ಅವರಲ್ಲಿ ಮುಖಂಡರ ವಿರುದ್ಧ ಕೊಲೆ ಪ್ರಯತ್ನದ ಆರೋಪವನ್ನು ಹೊರಿಸಿದ್ದ ನಿದರ್ಶನ ಇದೆ. ಆ ಪ್ರಕರಣವನ್ನು ಸರ್ಕಾರ ಘಟನೆ ನಡೆದ ದಶಕದ ಅನಂತರ ಹಿಂದಕ್ಕೆ ಪಡೆದಿದ್ದು ಬೇರ ವಿಚಾರ.
ಇನ್ನೂ ಇತರ ಕಡೆಗಳಲ್ಲೂ ಅನೇಕ ಸಂದರ್ಭಗಳಲ್ಲಿ ಜನಪರ ಹೋರಾಟಗಾರರು ಬಂಧಿತರಾಗಿ ಜೈಲು ಸೇರಿದ ಪ್ರಕರಣಗಳಿವೆ. ಪಟನಾ ಹೈಕೋರ್ಟಿನ ತೀರ್ಪಿಗೆ ಮುನ್ನ ಸಮಾಜವಾದಿ ಪಕ್ಷದ ನಾಯಕ ಜಾರ್ಜ್ ಫರ್ನಾಂಡಿಸ್ ಲೋಕಸಭೆಗೆ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದು, ಕೇಂದ್ರ ಮಂತ್ರಿಯೂ ಆಗಿದ್ದರು. ಜನ ಪ್ರಾತಿನಿಧ್ಯ ಇದೆಲ್ಲವನ್ನೂ ಗಮನಿಸಿದ ಸರ್ಕಾರ ಕಾಯಿದೆಯಲ್ಲಿ ಸೂಕ್ತ ರೀತಿಯ ಬದಲಾವಣೆ ಮಾಡಿ, ಜನತಾಂತ್ರಿಕ ಹಕ್ಕನ್ನು ರಕ್ಷಿಸುವ ಕಾಯಿದೆಯನ್ನು ರಚಿಸಿತ್ತು. ಅದಕ್ಕೆ ಸರ್ವಪಕ್ಷಗಳ ಬೆಂಬಲವೂ ಇತ್ತು. ಏತನ್ಮಧ್ಯೆ ಪಟನಾ ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿದಿದ್ದ ಸುಪ್ರೀಮ್ ಕೋರ್ಟಿನ ತೀರ್ಪಿನ ಮರುಪರಿಶೀಲನೆ ಅರ್ಜಿಯ ವಿಚಾರಣೆ ನಡೆಯಬೇಕಾಗಿದ್ದ, ಮಧ್ಯಂತರ ಅವಧಿಯಲ್ಲಿ ಜನ ಪ್ರಾತಿನಿಧ್ಯ ಕಾಯಿದೆಯ ಬದಲಾವಣೆಯ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟಿನ ತೀರ್ಪಿನ ಮರುಪರಿಶೀಲನೆಯ ಪ್ರಶ್ನೆ ಉದ್ಭವವಾಗಲಿಲ್ಲ. ಈಗ ಬಂಧಿತರು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಪಡೆದಿದ್ದಾರೆ. ಈ ತೀರ್ಪಿಗೆ ವ್ಯಾಪಕವಾದ ಜನ ಬೆಂಬಲ ವ್ಯಕ್ತವಾಗಿರುವುದು ಸ್ವಾಗತಾರ್ಹ. ನಿಜ. ಕ್ರಿಮಿನಲ್ ಕಾಯಿದೆಯಂತೆ, ಗುರುತರವಾದ ಆರೋಪದ ಮೇಲೆ ಯಾವುದಾದರೂ ನ್ಯಾಯಾಲಯದಿಂದ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆ ನಿಯಮ ಈಗಲೂ ಜಾರಿಯಲ್ಲಿದೆ.
ಸಂಸತ್ತು ಕೈಗೊಂಡ ಕಾಯಿದೆ ಬದಲಾವಣೆ ಕ್ರಮವನ್ನು ಇನ್ನೂ ಯಾರೂ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ಹೀಗಾಗಿ ಆ ಬದಲಾವಣೆಯ ಸಂವಿಧಾನಾತ್ಮಕ ಸಿಂಧುತ್ವ ಉಳಿದುಕೊಂಡಿದೆ. ಹೊಸ ಕಾಯಿದೆಯನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಅದನ್ನು ಸುಪ್ರೀಮ್ ಕೋರ್ಟ್ ಪರಿಶೀಲಿಸಬೇಕಾಗಬಹುದು. ಸದ್ಯಕ್ಕೆ ಜನರಿಗೆ ಹಿಂದೆ ಕಳೆದುಹೋಗಿದ್ದ ಹಕ್ಕು ಈಗ ಹಿಂದಕ್ಕೆ ಬಂದಿದೆ. ಅದೇ ಮುಖ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement