ತಪ್ಪಾಯ್ತು ತಿದ್ಕೋತೀವಿ
ಶಿವಮೊಗ್ಗದಿಂದ ಎಲ್.ಎಂ. ಮಾಧವ ಶಾಸ್ತ್ರಿ ಅವರು ಬರೆಯುತ್ತಾರೆ- 'ವಿನಯ ಕುಮಾರ್ ಅವರು ರನ್ ನೀಡುವಿಕೆಯಲ್ಲಿ ಕೊಂಚ ದುಬಾರಿಯಾದ ಕಾರಣ ಅವರ ಸ್ಥಾನ ಧವಳ್ ಕುಲಕರ್ಣಿ ಅವರಿಗೆ ಜಾರಿತ್ತು. ಆದರೆ ಇದೀಗ ಧವಳ್ ಕುಲಕರ್ಣಿ ಅವರು ಗಾಯಾಳುವಾಗಿದ್ದು, ಆ ಸ್ಥಾನ ಮರಳಿ ವಿನಯ್ಕುಮಾರ ಅವರಿಗೆ ಲಭಿಸಿದ್ದು ಕರ್ನಾಟಕದ ಪಾಲಿಗೆ ಸಮಾಧಾನಕರ ಸಂಗತಿ. ಇದನ್ನು 'ಹೆಮ್ಮೆಯ ಸಂಗತಿ' ಎಂದು ಪ್ರತಿಪಾದಿಸುತ್ತೀರಿ. ನ.21ರಂದು ಈ ರೀತಿಯ ಸುದ್ದಿ ಪ್ರಕಟಿಸಿದ್ದೀರಿ. ಇದು ಎಷ್ಟರ ಮಟ್ಟಿಗೆ ಸರಿ?' ಎಂದು ಪ್ರಶ್ನಿಸಿದ್ದಾರೆ.
ಎಲ್.ಎಂ. ಮಾಧವ ಶಾಸ್ತ್ರಿ ಅವರ ಪ್ರಶ್ನೆ ಸೂಕ್ತವಾಗಿದೆ. ಇನ್ನೊಬ್ಬರು ಗಾಯಗೊಂಡರು ಎಂಬ ಕಾರಣಕ್ಕೆ ರಾಜ್ಯದ ಆಟಗಾರರಿಗೆ ಅವಕಾಶ ಸಿಕ್ಕರೆ ಅದು ಹೆಮ್ಮೆಯ ಸಂಗತಿಯಾಗಲು ಸಾಧ್ಯವಿಲ್ಲ. ಇತರರನ್ನು ಮೀರಿಸಿ ನಮ್ಮ ಆಟಗಾರರು ಆಯ್ಕೆಯಾದರೆ ಮಾತ್ರ ಹೆಮ್ಮೆಯ ಸಂಗತಿಯಾಗಲು ಸಾಧ್ಯ.
ಸಾಗರದಿಂದ ಬೊ.ನಾ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ನ.21ರಂದು 'ಹಿರಿಯರ ಹಾದಿ' ಅಂಕಣದಲ್ಲಿ ಕೆಲವು ತಪ್ಪುಗಳಾಗಿವೆ. 1) ನರಸಿಂಹ ಶಾಸ್ತ್ರಿಗಳ ಊರು ಕಮಗೋಡು ಅಲ್ಲ ಕಮಕೋಡು. ತೀರ್ಥಹಳ್ಳಿ ತಾಲೂಕಿನ ಸಂಕದಹೊಳೆಯ ಸಮೀಪದಲ್ಲಿದೆ.'
'ಶಿವಮೊಗ್ಗ ಜಿಲ್ಲೆಯಲ್ಲಿ ಸಮಗೋಡು, ಕಾನುಗೋಡು, ಗೋಳಗೋಡು, ಸುಳಗೋಡು (ಸುಳುಗೋಡು), ಕಾಗೋಡು, ಕೋಗೋಡು ಇತ್ಯಾದಿ ಊರುಗಳು ಇರುವುದು ಹೌದಾದರೂ, ಕಮಗೋಡು ಎಂಬುದು ಬಹುಶಃ ಇಲ್ಲ. ಒಮ್ಮೆ ಇದ್ದರೂ ಆ ಕಮಗೋಡು ನರಸಿಂಹಶಾಸ್ತ್ರಿಗಳ ಊರು ಅಲ್ಲ.'
'ಇನ್ನೊಂದು ಹಾ.ಮಾ. ನಾಯಕರ ಹೆಸರು ಹ.ಮಾ. ನಾಯಕರು ಎಂದಾಗಿದೆ' ಎಂದಿದ್ದಾರೆ.
ಬೆಂಗಳೂರಿನಿಂದ ರವಿಕುಮಾರ ಜಿ.ಬಿ. ಅವರು ಬರೆಯುತ್ತಾರೆ- 'ನ.14ರ ಸಂಚಿಕೆಯ 'ಬೈಟು ಕಾಫಿ'ಯಲ್ಲಿ 'ಅಪ್ಪು' ಚಿತ್ರದ ಮೂಲಕ ಬಣ್ಣಹಚ್ಚಿದ ಕನ್ನಡದ ಕುವರಿ ರಮ್ಯಾ ಎಂದು ಪ್ರಕಟಗೊಂಡಿದೆ. ಅವರು ಬಣ್ಣ ಹಚ್ಚಿದ ಮೊದಲ ಚಿತ್ರ 'ಅಭಿ" ಎಂದಿದ್ದಾರೆ.
ಬಾಗಲಕೋಟ ಜಿಲ್ಲೆ ಹುನಗುಂದದಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ- 'ಅ.28ರ ಪುಟ 6ರಲ್ಲಿ ಪಿ. ತ್ಯಾಗರಾಜ ಅವರ ಲೇಖನ 'ಮೋದಿ ಅಸ್ತ್ರ ಎದುರಿಸುವಲ್ಲಿ ಶಕ್ತಿಗುಂದಿರುವ ಕೈಪಾಳಯ' ಎಂಬ ಲೇಖನದ 3ನೇ ಕಾಲಮ್ಮಿನಲ್ಲಿ 'ಸಂತೋಷ್ ಲಾಡ್ ಅವರ ನೆದ್ದೆಗೆಡಿಸಿದ್ದಾರೆ' ಎಂಬಲ್ಲಿ 'ನಿದ್ದೆಗೆಡಿಸಿದ್ದಾರೆ' ಎಂತಾಗಬೇಕಿತ್ತು.'
'ಅಂತೆಯೇ ಇನ್ನೊಂದು ಲೇಖನ ಅದೇ ಪುಟದಲ್ಲಿ 'ಮದುವೆ ಮನಸ್ಸುಗಳ ಮಿಲನವಾಗಬೇಕು' ಎಂಬ ಲೇಖನದ ಮೂರನೇ ಕಾಲಮ್ಮಿನಲ್ಲಿ 'ಮಧುಮಗ' ಮತ್ತು 'ಮಧುಮಗಳು' ಎಂಬುದು 'ಮದುಮಗ' ಮತ್ತು 'ಮದುಮಗಳು' ಎಂದಾಗಬೇಕಿತ್ತು' ಎಂದಿದ್ದಾರೆ.
-ವಿಶ್ವೇಶ್ವರ ಭಟ್