ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 24 Nov 2013, 10:47 am

ಮೈಸೂರಿನ ಬೆಟ್ಟದಪುರದಿಂದ ಬಿ.ಕೆ.ಶ್ರೀಕಾಂತ್ ಪತ್ರ ಬರೆಯುತ್ತಾರೆ, 'ನ.17ರ 'ಕನ್ನಡಪ್ರಭ'ದ ಏಳನೇ ಪುಟದಲ್ಲಿ(ಅದೂ ಮುಖಪುಟವೇ) 'ಗುಳೆ ಹೊರಟವರು ಇಳೆಗೆ ದೂರಾದರು' ಶೀರ್ಷಿಕೆಯ ವಿವರಣೆಯಲ್ಲಿ 'ಕೂಲಿ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೊರಟಿದ್ದ ಸರಕು ಸಾಗಣೆ ವಾಹನ ಉರುಳಿಬಿದ್ದ ಪರಿಣಾಮ 9 ಮಕ್ಕಳು ಮತ್ತು 9 ಮಹಿಳೆಯರು ಸೇರಿದಂತೆ 22 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು......' ಎಂದಿದೆ. 'ಗುಳೆ ಹೊರಟಿದ್ದ ಜನರಿದ್ದ ಸರಕು ಸಾಗಣೆ ವಾಹನ' ಎಂದು ವಿವರಿಸಬೇಕಿತ್ತು. ಇಲ್ಲದಿದ್ದರೆ ಗುಳೆ ಹೊರಟಿದ್ದ ಸರಕು ಸಾಗಣೆ ವಾಹನ ಎಂದಾಗುತ್ತದೆ. ಸುದ್ದಿಯ ಮುಂದಿನ ಭಾಗದಲ್ಲಿ '30 ಜನ ಗಂಭೀರವಾಗಿ ಗಾಯಗೊಂಡ ಘಟನೆ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಗಾಯಾಳುಗಳ ಪೈಕಿ 9 ಜನರ ಪರಿಸ್ಥಿತಿ ಗಂಭೀರವಾಗಿದೆ' ಎಂದಿದೆ. ಮೂವತ್ತು ಜನ ಗಂಭೀರವಾಗಿ ಗಾಯಗೊಂಡ ನಂತರ ಈ 9 ಜನ ಯಾವ ರೀತಿ ಗಂಭೀರವಾಗಿ ಗಾಯಗೊಂಡರು? ಇದೇ ಸುದ್ದಿಯ ಕೊನೆಯಲ್ಲಿ 'ಹಲವರು ಉಸಿರು ಕಟ್ಟಿ ಕೊನೆಯುಸಿರೆಳದಿದ್ದಾರೆ' ಎಂದಿದೆ. ಉಸಿರು ಕಟ್ಟಿದ ಮೇಲೆ ಅದೇ ಕೊನೆಯುಸಿರಲ್ಲವೇ?'
'ಪುಟ 9ರ 'ನಮೋ ಬೆಂಗಳೂರು ರ್ಯಾಲಿ' ವಿವರಣೆಯ ಬಾಕ್ಸ್‌ನಲ್ಲಿ 'ಬಿಡಿ ಬೆಂಕಿಪೊಟ್ಟಣ ಬೇಡ' ಎಂದಿದೆ. ಅದು ಬೀಡಿ-ಬೆಂಕಿ ಪೊಟ್ಟಣ ಎಂದಿರಬೇಕಿತ್ತು. ಬಿಡಿ ಬೆಂಕಿ ಪೊಟ್ಟಣ ತರಬೇಡಿ ಅಂದರೆ ಬಂಡಲ್ ಗಟ್ಟಲೇ ಬೆಂಕಿ ಪೊಟ್ಟಣ ತರಬಹುದು ಎಂದಾಗುವುದಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ನೀವು ಹೇಳಿದಂತೆ ಆ ಸುದ್ದಿಯ ಮೊದಲ ಪ್ಯಾರಾ ಸಂಪೂರ್ಣ ಗೊಂದಲಮಯವಾಗಿದೆ. 'ಕೂಲಿ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೊರಟ್ಟಿದ ಜನರು ಸಾಗುತ್ತಿದ್ದ ಸರಕು ಸಾಗಣೆ ವಾಹನ ಉರುಳಿಬಿದ್ದು 22 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಈ ಅಪಘಾತದಲ್ಲಿ 30 ಜನ ಗಾಯಗೊಂಡಿದ್ದು, 9 ಜನರ ಪರಿಸ್ಥಿತಿ ಗಂಭೀರವಾಗಿದೆ' ಎಂದು ಬರೆಯಬಹುದಿತ್ತು.
ಬೆಂಗಳೂರಿನಿಂದ ಕೆ.ಆರ್.ಸಂದೀಪ್ ಮಿಂಚಂಚೆ ಕಳುಹಿಸಿದ್ದಾರೆ. 'ನಿಮ್ಮ ಪತ್ರಿಕೆಯಲ್ಲಿ 'ದಿನಕ್ಕೊಂದು ಆ್ಯಪ್‌' ಮೂಡಿಬರುತ್ತಿರುವುದು ಸಂತಸದ ವಿಷಯ. ಆದರೆ ನ.22ರಂದು ಈ ಅಂಕಣದಲ್ಲಿ 'ಆ್ಯಂಟಿವೈರಸ್‌' ಬಗ್ಗೆ ಪ್ರಕಟಿಸಿದ್ದೀರಿ. ಈ ಮಾಹಿತಿ ನಿಜವಾಗಿಯೂ ಸಹಕಾರಿಯಲ್ಲ. ಯಾವುದೋ ಒಂದು ಆ್ಯಂಟಿವೈರಸ್ ಬಗ್ಗೆ ಮಾಹಿತಿ ನೀಡಿದ್ದರೆ ಒಳ್ಳೆಯದಿತ್ತು. ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚು ಕ್ಷಮತೆ, ರೇಟಿಂಗ್ಸ್ ಇರುವ ಆ್ಯಂಟಿವೈರಸ್ ಅಪ್ಲಿಕೇಷನ್‌ಗಳ ಹೆಸರು ಸೂಚಿಸಿ ಪ್ರಕಟಿಸಬಹುದಿತ್ತು. ಇದರಿಂದ ಓದಿಗರಿಗೆ ಹೆಚ್ಚು ಅನುಕೂಲವಾಗುತ್ತದೆ' ಎಂದಿದ್ದಾರೆ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement