ಭದ್ರತೆಯಲ್ಲೂ ಪಕ್ಷಪಾತ
ರಾಜಕೀಯದ ಇತಿಹಾಸದಲ್ಲಿಯೇ ಅಪರೂಪ ಎನಿಸುವಂತಹ ಸಂಗತಿಗಳು ಈ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ನಡೆಯುತ್ತಿವೆ. ಮೋದಿಗೆ ಉಗ್ರರಿಂದ ಬೆದರಿಕೆ ಇದೆ ಎನ್ನುವುದು ಗೊತ್ತಿದ್ದರೂ ಅವರಿಗೆ ಭದ್ರತೆಒದಗಿಸುವ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬಿಜಿ.ಪಿ. ಸರ್ಕಾರ ಆಡಳಿತ ಮಾಡುತ್ತಿದ್ದಾಗ ಎಲ್ಲ ಪಕ್ಷದ ವ್ಯಕ್ತಿಗಳಿಗೆ ಭದ್ರತೆ ಒದಗಿಸುತ್ತಿದ್ದುದ್ದು ಗೊತ್ತಿದೆ. ಕಾಂಗ್ರೆಸ್ ಮಾತ್ರ ಕಾಲೆಳೆಯುವ ಕೆಲಸ ಮಾಡುತ್ತಿದೆ. ರಾಹುಲ್, ಸೊನಿಯಾಗಾಂಧೀ ಈ ದೇಶದ ಯಾವುದೇ ಉನ್ನತವಾದ ಸ್ಥಾನ ಅಲಂಕರಿಸದಿದ್ದರೂ ಅವರಿಗೆ ಮಾತ್ರ ಎಸ್.ಪಿ. ಜ. ಭದ್ರತೆ! ಗುಜರಾತ್ ಆಳುತ್ತಿರುವ ಒಬ್ಬ ಹಾಲಿ ಮುಖ್ಯಮಂತ್ರಿಗೆ ಈ ಮಾದರಿ ಭದ್ರತೆ ಕೊಡಲು ಹಿಂದೂ ಮುಂದು ನೋಡುತ್ತಿರುವುದು ಆಘಾತಕಾರಿ ವಿಷಯ. ಕೆಲಸಕ್ಕೆಬಾರದ ಎಷ್ಟೋ ಮಾಜಿ ಮಂತ್ರಿಗಳಿಗೆ, ಮಾಜಿ ಶಾಸಕರಿಗೆ ಭದ್ರತೆ ಕೊಡುತ್ತದೆ, ಆದರೆ ಮೋದಿಗೆ ಕೊಡಲು ಹಿಂದೇಟು! ಈ ದೇಶ ಸಂಸ್ಕೃತಿ, ಧರ್ಮ ನಾಶ ಮಾಡಲು ಏನು ಬೇಕೋ ಅಷ್ಟನ್ನೂ ಈ ಸರ್ಕಾರ ಮಾಡುತ್ತಿದೆ. ಮೋದಿಗೆ ಭದ್ರತೆ ಕೊಡಲು ಹಿಂದೇಟು ಹಾಕುತ್ತಿರುವುದನ್ನು ನೋಡುತ್ತಿರುವುದನ್ನು ನೋಡಿದರೆ ಅವರ ಜನಪ್ರಿಯತೆ ಸಹಿಸಲು ಆಗದಷ್ಟು ಮತ್ಸರ ಕಾಂಗ್ರೆಸ್ಗಿದೆ ಎನ್ನುವುದು ಗೊತ್ತಾಗುತ್ತಿದೆ.
- ಎಮ್.ಪರಮೆಶ್ವರ, ಮದ್ದಿಹಳ್ಳಿ, ಚಿತ್ರದುರ್ಗ
ವೋಲ್ವೋದಲ್ಲಿ ಕನ್ನಡವಿರಲಿ
ಇತ್ತೀಚೆಗೆ ವೋಲ್ವೋ ಬಸ್ಸಿನಲ್ಲಿ ನಡೆದ ಎರಡು ಬೆಂಕಿ ದುರಂತದಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ಬಗೆಗಿನ ಕೆಲವು ಕುಂದುಕೊರತೆಗಳನ್ನು ನಾವು ಗಮನಿಸಬಹುದಾಗಿದೆ. ಕೆಲವೊಮ್ಮೆ ತುರ್ತು ನಿರ್ಗಮನದ ಬಾಗಿಲುಗಳಿದ್ದರೂ ಸಹ ಅದನ್ನು ಬಳಸುವ ಬಗೆಗಿನ ಸೂಚನೆಗಳು ಕನ್ನಡದಲ್ಲಿರುವುದಿಲ್ಲ. ವಿಮಾನಗಳಲ್ಲಿ, ರೈಲುಗಳಲ್ಲಿ ಸೂಚನೆಗಳನ್ನು ಯಾವುದೋ ಒಂದು ಭಾಷೆಯಲ್ಲಿ ತಿಳಿಸಲಾಗುತ್ತದೆಯೇ ಹೊರತು ಅದು ರಾಜ್ಯ ಭಾಷೆಗಳಲ್ಲೂ ಇರಬೇಕೆಂಬುದರ ಬಗ್ಗೆ ಯಾವುದೇ ಮಾನದಂಡಗಳಿಲ್ಲ. ಎಟಿಎಂನಲ್ಲಿಯೂ ಸಹ ಕನ್ನಡವನ್ನು ಸರಿಯಾಗಿ ಬಳಸದೆ ಇರುವುದರಿಂದ ಕೆಲವೊಮ್ಮೆ ವಯಸ್ಸಾದವರು, ಇಂಗ್ಲಿಷ್ ಬಾರದವರು ಸಹಾಯಕ್ಕಾಗಿ ಯಾರೋ ಪಕ್ಕದಲ್ಲಿರುವವರ ಮೊರೆ ಹೋಗುವುದನ್ನು ನಾವು ನೋಡಬಹುದು.
-ಗಿರೀಶ್ ಕಾರ್ಗದೆ
ಹೇಳಿದ್ದು 5, ಕೊಡುತ್ತಿರುವುದು 4 ಲೀಟರ್
ಬಿಪಿಎಲ್ ಕಾರ್ಡುದಾರರಿಗೆ ನೀಡಬೇಕಾದ ಸೀಮೆಎಣ್ಣೆಯನ್ನು ಐದು ಲೀಟರ್ ಬದಲಾಗಿ ನಾಲ್ಕೇ ಲೀಟರ್ ಕೊಡಲಾಗುತ್ತಿದೆ. ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಾದ್ಯಂತ ಈ ಪರಿಸ್ಥಿತಿ ಇದೆ. ಪಡಿತರ ಸೀಮೆ ಎಣ್ಣೆ ವಿತರಕರನ್ನು ಈ ಕುರಿತು ಕೇಳಲು ಹೋದರೆ ಅವರು "ಸರ್ಕಾರ ನಮ್ಗ ಕೊಡುದ ಅಷ್ಟು. ಅಷ್ಟು ನಿಮಗ ಕೊಡುತ್ತಿದ್ದೇವೆ. ಬೇಕಂದ್ರ ತೋಗೋರಿ ಇಲ್ಲಂದ್ರ ಬಿಡ್ರಿ" ಎನ್ನುತ್ತಿದ್ದಾರೆ. ಇಲ್ಲವಾದರೆ ಅದೂ ಇಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ. ಸೀಮೆ ಎಣ್ಣೆ ವಿತರಕರಿಗೆ ನೀಡಲಾಗುವ ಸೀಮೆ ಎಣ್ಣೆ ಪ್ರಮಾಣ ಎಷ್ಟು? ಪ್ರತಿ ಕಾರ್ಡುದಾರರಿಗೆ ವಿತರಿಸುವ ಸೀಮೆ ಎಣ್ಣೆ ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ ಎಂದು ಕಾರ್ಡುಗಳಲ್ಲಿ ಬರೆಯುವುದಿಲ್ಲ. ಈ ಬಗ್ಗೆ ವಿಚಾರಣೆ ನಡೆಸಲು ಹೋಗುವವರನ್ನೇ ಗುರಿಯಾಗಿರಿಸಿ ಅವರ ಮೇಲೆ ವಿವಿಧ ರೀತಿಯ ದಬ್ಬಾಳಿಕೆಯನ್ನು ಮಾಡುತ್ತಾರೆ. ಸಚಿವರಾದ ದೀನೇಶ ಗುಂಡೂರಾವ್ ಅವರು ಬಡವರಿಗೆ ಐದು ಲೀಟರ್ ಸೀಮೆ ಎಣ್ಣೆ ಕೊಡುವುದಾಗಿ ಹೇಳಿಕೆ ಕೊಡುತ್ತಿದ್ದರೂ ವಾಸ್ತವದಲ್ಲಿ ಬಡವರ ಸೀಮೆಎಣ್ಣೆ ಡಬ್ಬಕ್ಕೆ ಬೀಳುತ್ತಿರುವುದು ಕೇವಲ ನಾಲ್ಕೇ ಲೀಟರ್ ಮಾತ್ರ. ಈ ಬಗ್ಗೆ ಸೂಕ್ತ ವ್ಯವಸ್ಥೆಯೊಂದನ್ನು ಸಂಬಂಧಿಸಿದ ಅಧಿಕಾರಿಗಳು ರೂಪಿಸಿ ಬಡವರ ಬದುಕಿಗೆ ಬೆಳಕಾಗಿರುವ ಇಂಧನವನ್ನು ದೊರೆಯುವಂತೆ ನೋಡಿಕೊಳ್ಳುವರೇ?
-ಶಂಕರ್, ಹೆಬ್ಬಾಳ, ಮುದ್ದೇಬಿಹಾಳ ತಾಲೂಕು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com