ಶಾಸಕರ ಕರ್ತವ್ಯ ಹಾಗೂ ಸೌಲಭ್ಯಗಳು
ಮಾಜಿ ಸಚಿವ, ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಬಸವರಾಜ ರಾಯರೆಡ್ಡಿ ಅವರು ಶಾಸಕರ ಕರ್ತವ್ಯಗಳು ಹಾಗೂ ಅದನ್ನು ನಿರ್ವಹಿಸಲು ಬೇಕಾದ ಪರಿಕರ- ಸೌಲಭ್ಯಗಳನ್ನು ಆಳವಾಗಿ ಅಧ್ಯಯನ ನಡೆಸಿರುವ ಶಾಸಕರಲ್ಲಿ ಒಬ್ಬರು.
ಇದು ಶಾಸಕರ ವೇತನ-ಭತ್ಯ, ಇಂತಹ ಸೌಲಭ್ಯಗಳ ವಿಚಾರ ಅಲ್ಲ. ಜನಸಾಮಾನ್ಯರ ಕುಂದು-ಕೊರತೆಗಳ ನಿವಾರಣೆ ಹಾಗೂ ಕ್ಷೇತ್ರಾಭಿವೃದ್ಧಿ ಕುರಿತಂತೆ ಆಗಿಂದ್ದಾಗ್ಗೆ ಚರ್ಚೆಯಾಗುವ ವಿಚಾರ. ವೇತನ - ಭತ್ಯದ ವಿಚಾರ ಚರ್ಚೆಯೇ ಆಗುವುದಿಲ್ಲ. ಅದು ತಾನಾಗಿ ತಾನೇ ಜಾರಿಗೆ ಬರುತ್ತಿದೆ.
ಈಗಾಗಲೇ ಎಲ್ಲ ಶಾಸಕರಿಗೂ ಸರ್ಕಾರದ ವೆಚ್ಚದಲ್ಲಿ ಒಬ್ಬ ಆಪ್ತ ಕಾರ್ಯದರ್ಶಿಯನ್ನು ಒದಗಿಸಲಾಗಿದೆ. ಅವರು ಸಚಿವರ ಎಲ್ಲ ಕೆಲಸದಲ್ಲೂ ಕಾಲಾಳುಗಳಂತೆ ಕೆಲಸ ಮಾಡಬೇಕು. ರಾಯರೆಡ್ಡಿ ಅವರು ಹಾಗೂ ಅವರಂತೆಯೇ ಚಿಂತನೆಯಲ್ಲಿ ತೊಡಗಿರುವ ಅನೇಕರ ದೃಷ್ಟಿಯಲ್ಲಿ ಶಾಸಕರಿಗೆ ಒಬ್ಬ ಸಹಾಯಕ ಸಾಲದು. ಇನ್ನೂ ಒಬ್ಬರ ನೆರವು ಬೇಕು. ಇಂತಹವರನ್ನು ಸರ್ಕಾರಿ ನೌಕರರ ಸಮುದಾಯದಿಂದಲೇ ಆರಿಸಬೇಕೆನ್ನುವ ನಿಯಮ ಅನಗತ್ಯ. ಶಾಸಕರಿಗೆ ಬೇಕಾದವರನ್ನು ಆರಿಸಿಕೊಳ್ಳುವ ಅವಕಾಶವಿರಬೇಕು ಎನ್ನುವ ಅಭಿಪ್ರಾಯ ಗಟ್ಟಿಗೊಳ್ಳುತ್ತಿದೆ.
ಕೆಲವು ಪ್ರಕಟಿತ ವರದಿಗಳ ಪ್ರಕಾರ ಈಗಾಗಲೇ ಈ ಪ್ರಸ್ತಾಪಕ್ಕೆ ಸಂಬಂಧ ಪಟ್ಟವರ ಅಧಿಕಾರದ ಮುದ್ರೆಯೂ ಬಿದ್ದಿದೆ. ಅಂದರೆ ರಾಜಕೀಯ ಅಧಿಕಾರಕ್ಕೆ ಸಮೀಪವರ್ತಿಗಳಾಗಿ ಕೆಲಸ ಮಾಡುವವರ ಒಂದು ದೊಡ್ಡ ಸಿಬ್ಬಂದಿಯ ಸೇನೆಯೇ ಸದ್ಯದಲ್ಲೇ ರಚನೆಯಾಗಬೇಕಾಗಿದೆ. ಜವಾಗಲೂ, ಈ ಸಹಾಯಕರ ಕರ್ತವ್ಯಗಳೇನು? ಅವರ ಅಧಿಕಾರ ವ್ಯಾಪ್ತಿಯ ನಕ್ಷೆ ಸಿದ್ಧವಾಗಿದೆಯೇ ಎಂದು ಕೇಳಿದರೆ ಸಿಗುವ ಉತ್ತರ ಅವರು ಸಾರ್ವಜನಿಕರ ಸೇವಕರು. ಶಾಸಕರು ಹೇಳಿದಂತೆ ಕೆಲಸ ಮಾಡುತ್ತಾರೆ ಎನ್ನುವುದೇ. ಬೇರೆ ಯಾವ ವಿವರಗಳೂ ಇಲ್ಲ. ಈಗಾಗಲೇ ಈ ವಿಚಾರದಲ್ಲಿ ಸರ್ಕಾರದ ಆದೇಶ ಪ್ರಕಟವಾಗದೇ ಇದ್ದರೆ, ಸದ್ಯದಲ್ಲೇ ಅದನ್ನು ಪ್ರಕಟಿಸುವ ಸಿದ್ಧತೆ ನಡೆದಿದೆ. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಲ್ಲಿ ವಿವರಗಳು ಪ್ರಕಟವಾಗಬಹುದು.
ಅಂದರೆ ದಿಢೀರನೆ ಸುಮಾರು 240-250 ಮಂದಿಗೆ ಉದ್ಯೋಗದ ಅವಕಾಶವನ್ನು ಒದಗಿಸಿದಂತೆ, ಆಯಿತು. ಅವರ ಮಾಸಿಕ ವೇತನ ಸುಮಾರು 12500 ರುಪಾಯಿಗಳಿಂದ ಹಿಡಿದು 15000 ರುಪಾಯಿಗಳು. ಅವರ ವಿದ್ಯಾರ್ಹತೆ ಮೊದಲ ದರ್ಜೆ ಗುಮಾಸ್ತರ ಅರ್ಹತಗೆ ಇರಬೇಕಾದಷ್ಟೇ. ಅವರಿಗೆ ಸಿಗಬೇಕಾದ ಭತ್ಯದ ವಿಚಾರ ಎಲ್ಲೂ ಪ್ರಸ್ತಾಪವಾದಂತಿಲ್ಲ. ವೇತನ ಕುರಿತ ನಿರ್ಧಾರವಾದ ಅನಂತರ ಭತ್ಯದ ಪ್ರಶ್ನೆಯ ಇತ್ಯರ್ಥ ಸುಲಭ. ಶಾಸಕರ ಕರ್ತವ್ಯಗಳನ್ನು ಎರಡು ಸ್ಥೂಲ ವಿಭಾಗಗಳ ನಡುವೆ ಹಂಚಬಹುದು. ಮೊದಲನೆಯದು ವಿಧಾನ ಮಂಡಲದ ಕಾರ್ಯಕಲಾಪದಲ್ಲಿ ಸಕ್ರಿಯವಾಗಿ ಪಾಲುಗೊಂಡು, ಶಾಸನ ರಚನೆಯ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವುದು. ಎರಡನೆಯದು ಅವರವರ ಕ್ಷೇತ್ರಾಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ. ಈಗ ಚಿಂತನೆಯ ಹಂತದಲ್ಲಿದೆ ಎನ್ನಲಾಗುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಹೊಸದಾಗಿ ಪ್ರತಿ ತಿಂಗಳು ಸುಮಾರು 47 ಲಕ್ಷ ರುಪಾಯಿಗಳನ್ನು ಅಧಿಕವಾಗಿ ವೆಚ್ಚ ಮಾಡಬೇಕಾಗಬಹುದು.
ವಿಧಾನಮಂಡಲದ ಕಾರ್ಯಕಲಾಪದಲ್ಲಿ ಶಾಸಕರ ಸಕ್ರಿಯ ಪಾತ್ರ ಹಾಗೂ ಕ್ಷೇತ್ರಾಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿಯನ್ನು ಶಾಸಕರು ಪ್ರದರ್ಶಿಸಿದರೆ, ರಾಜ್ಯದ ಅಭಿವೃದ್ಧಿ ಹಾಗೂ ಜನ ಕಲ್ಯಾಣ ಯೋಜನೆಗಳ ಜಾರಿಯ ವಿಚಾರದಲ್ಲಿ ಜನಗಳಿಗೆ ದೊಡ್ಡ ರೀತಿಯ ವರವನ್ನೇ ನೀಡಿದಂತೆ ಆಗುತ್ತದೆ. ಅದಕ್ಕೆ ಪೂರಕವಾಗಿ ಶಾಸಕರ ಕೆಲಸದಲ್ಲಿ ಸಹಕಾರಿಯಾಗುವ ಸಿಬ್ಬಂದಿಗೆ ಆಗುವ ವೆಚ್ಚ ಗೌಣ. ಆದರೆ ವಾಸ್ತವದಲ್ಲಿ ಇಂತಹ ಯೋಜನೆ ಯಾವ ರೀತಿಯಲ್ಲಿ ಕಾರ್ಯರೂಪದಲ್ಲಿ ಇಳಿಯಬಹುದು? ವ್ಯಕ್ತಿಗಳ ಆಯ್ಕೆಯನ್ನು ಸಂಪೂರ್ಣವಾಗಿ ಶಾಸಕರಿಗೇ ವಹಿಸುವುದರಿಂದ ಅವರು "ತಮಗೆ ಬೇಕಾದ ಸಮುದಾಯಗಳಿಂದಲೇ ನೌಕರರನ್ನು ಆರಿಸಿಕೊಳ್ಳುವುದು ಸಹಜ". ಹಿಂದೆ ಕೆಲವು ಸಂದರ್ಭಗಳಲ್ಲಿ ಹೀಗೆ ಆಗಿದೆ. ಸಚಿವರ ಕಾರ್ಯಾಲಯಗಳಲ್ಲೂ ಕಂಡು ಬರುವುದು ಇದೇ ರೀತಿಯ ವ್ಯವಹಾರ. ಅವಕಾಶ ಸಿಕ್ಕಾಗ, ಕೈ ನಡೆಯುವಾಗ ತಮ್ಮವರಿಗೆ ಸಹಾಯ ಮಾಡಬೇಕೆನ್ನುವುದು ನಮ್ಮದೇಶ-ರಾಜ್ಯದಲ್ಲಿ ಸಹಜವಾದ ಕಲ್ಪನೆಯೇ. ಇಂತಹ ಸಹಾಯಕರು, ಶಾಸಕರ ಮನೆಗಳಲ್ಲೂ ಕೆಲಸ ಮಾಡಬೇಕಾಗಿ ಬರುವುದು ಅನಿವಾರ್ಯ. ಅಂದರೆ ಅಂತಹ ಉದ್ಯೋಗಕ್ಕೆ "ಜಾತಿ" ಒಂದು ದೊಡ್ಡ ಅರ್ಹತೆ ಎನಿಸಿಕೊಳ್ಳಲೇಬೇಕು.
ಈ "ನೌಕರರ" ಸೇವಾ ನಿಯಮಗಳ ವಿವರಗಳೂ ಪ್ರಕಟವಾಗಿಲ್ಲ. ಇಂತಹ ವ್ಯವಸ್ಥೆಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ, ಸರ್ಕಾರ ಹಾಗೂ ವಿಧಾನ ಮಂಡಲ ಯಾವುದೇ ರೀತಿಯ ಸಿದ್ಧತೆಯನ್ನು ನಡೆಸಿದಂತಿಲ್ಲ, ಆದರೂ ಈಗಿನ ವಾತಾವರಣದಲ್ಲಿ ನಿಜವಾಗಲೂ ಕೆಲಸವೇ ಇಲ್ಲದ ಅಥವಾ ಮಾಡಬೇಕಾದ ಕೆಲಸವನ್ನು ಮಾಡುವ ಉದ್ದೇಶವನ್ನೇ ಪ್ರಕಟಿಸದ ಒಂದು ಪ್ರಭಾವ ಶಾಲಿ, ಅಧಿಕಾರಸ್ಥ ಪೀಠದ ಸಮೀಪವರ್ತಿ ಸ್ಥಾನದಲ್ಲಿರುವ ವೈಯಕ್ತಿಕ ಅಗತ್ಯಗಳ ಪೂರೈಕೆಗೇ ಹೆಚ್ಚು ಬಳಕೆಯಾಗುವ ವ್ಯವಸ್ಥೆ ನಮಗೆ ಬೇಕೇ? ಈಗಾಗಲೇ ಇಂತಹ ಕೆಲಸ ಮಾಡುತ್ತಿರುವ ಸಿಬ್ಬಂದಿಯಿಂದ ಶಾಸನ ರಚನೆಗೆ, ಅಭಿವೃದ್ಧಿಗೆ ಸಿಕ್ಕಿರುವ ಕಾಣಿಕೆಯಾದರೂ ಏನು? ಈ ಎರಡೂ ಪ್ರಶ್ನೆಗಳಿಗೆ ಅಧ್ಯಯನ ಆಧರಿತ ಪ್ರಾಮಾಣಿಕ ಮಾಹಿತಿಯ ಆಧಾರದ ಉತ್ತರಗಳು ಸಿಗುವವರೆಗಾದರೂ, ಈಗಿನ ಪ್ರಯತ್ನವನ್ನು ತಡೆಯಬೇಕು. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದ ಕಾಲದಲ್ಲಿ ಚರ್ಚೆಯ ಅನಂತರ ಮುಂದಿನ ಕ್ರಮವನ್ನು ಅನುಸರಿಸಲು ಮುಂದಾಗುವುದು ಒಳ್ಳೆಯದು.