ಎಲ್ಲ ಶಾಲೆಗಳ ಸಮೀಕ್ಷೆ ನಡೆಯಲಿ
ಇತ್ತೀಚೆಗೆ ಸರ್ಕಾರಿ ಶಾಲೆಗಳ ಸರ್ವೆಯೊಂದನ್ನು ನಡೆಸಿದ್ದು, ಅದರಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಕಳಪೆ ಎಂದು ವರದಿ ಬಂದಿದೆಯಂತೆ. ಆದರೆ ಕೇವಲ ಸರ್ಕಾರಿ ಶಾಲೆಗಳ ಸಮೀಕ್ಷೆ ಮಾಡಿ ಅವು ಕಳಪೆಯೆಂದು ಪ್ರಚಾರ ಕೊಟ್ಟರೆ ಖಾಸಗಿ ಶಾಲೆಗಳು ಉತ್ತಮ ಎಂಬ ಅರ್ಥ ಬರುವುದಿಲ್ಲವೇ? ಈಗಾಗಲೇ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಹೊಂದಿರುವ ಪೋಷಕರನ್ನು ವಂಚಿಸಲು ಖಾಸಗಿಯವರಿಗೆ ಇನ್ನೊಂದು ಅಸ್ತ್ರ ಸಿಕ್ಕಂತಾಗಲಿಲ್ಲವೇ? ಗುಣಮಟ್ಟವನ್ನು ಕಂಡುಹಿಡಿಯುವ ಉದ್ದೇಶವೇ ಇದ್ದರೆ ಸರ್ಕಾರಿ ಹಾಗೂ ಖಾಸಗಿ- ಎರಡೂ ಶಾಲೆಗಳ ಸರ್ವೇ ನಡೆದು ಅದನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳಲಿ. ಸರಿಯಾದ ಸಮೀಕ್ಷೆ ನಡೆದರೆ ಖಾಸಗಿ ಶಾಲೆಗಳಲ್ಲಿರುವ ಗುಣಮಟ್ಟ ಎಷ್ಟರ ಮಟ್ಟಿನದ್ದು ಎಂಬ ಸತ್ಯ ಹೊರಬರುತ್ತದೆ. ಒಂದುವೇಳೆ ಈ ವರದಿಯನ್ನು ಶಿಕ್ಷಣ ಇಲಾಖೆಯು ತನ್ನ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ಆಂತರಿಕವಾಗಿ ಬಳಸುವುದಾದರೆ ಅದಕ್ಕೆ ಒಳಗೊಳಗೇ ಕಾರ್ಯತಂತ್ರವನ್ನು ರೂಪಿಸಬೇಕೇ ಹೊರತು ಸರ್ಕಾರಿ ಶಾಲೆಗಳು ಕಳಪೆ ಎಂದು ಮಾಧ್ಯಮಗಳ ಮೂಲಕ ಪ್ರಚಾರಕೊಟ್ಟು ತನ್ನ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುವ ಹಾಗೂ ಪೋಷಕರಲ್ಲಿ, ಮಕ್ಕಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಹುಟ್ಟಿಸುವ ಕೆಲಸವನ್ನು ಮಾಡಬಾರದು.
-ಗಿರೀಶ್ ಕಾರ್ಗದ್ದೆ
ಸೌರವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿ
ಉತ್ತರ ಕರ್ನಾಟಕದ ಜಿಲ್ಲೆಗಳಾದ ವಿಜಾಪುರ, ಬಾಗಲಕೋಟ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಬೀದರ್ ಜಿಲ್ಲೆಗಳಲ್ಲಿ ವರ್ಷದ ಒಂಬತ್ತು ತಿಂಗಳೂ ಬಿಸಿಲೇ ಇರುತ್ತದೆ. ಬೇಸಿಗೆಯಲ್ಲಿ ನೀರಾವರಿ ಹಾಗೂ ಗೃಹ ಬಳಕೆಗಾಗಿ ವಿದ್ಯುತ್ನ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಈ ಸಂದರ್ಭದಲ್ಲಿ ನಮ್ಮ ಬಹುತೇಕ ಜಲಾಶಯಗಳು ಖಾಲಿಯಾಗಿ ಜಲವಿದ್ಯುತ್ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದನ್ನು ತಪ್ಪಿಸಲು ಅಥವಾ ಇದಕ್ಕೆ ಪರಿಹಾರವಾಗಿ ಈ ಜಿಲ್ಲೆಗಳಲ್ಲಿ ಸರ್ಕಾರ ಸೌರವಿದ್ಯುತ್ ಸ್ಥಾವರಗಳನ್ನು ಅಳವಡಿಸಬೇಕು ಹಾಗೂ ಇಂತಹವುಗಳನ್ನು ಸ್ಥಾಪಿಸಿಕೊಳ್ಳಲು ಮುಂದೆ ಬರುವ ರೈತರು ಹಾಗೂ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಪ್ರೋತ್ಸಾಹ ಸಹಾಯ ಧನವನ್ನು ನೀಡಬೇಕು. ಇಂಥ ಸ್ಥಾವರಗಳನ್ನು ರೈತರಿಗೆ ವಿದ್ಯುತ್ ಪಂಪ್ಸೆಟ್ಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಕರ ಯೋಜನೆಗಳನ್ನು ರೂಪಿಸಬೇಕು. ಪಡಭೂಮಿ ಅಥವಾ ಬಂಜರುಭೂಮಿಗಳಲ್ಲಿ ಸ್ಥಾಪಿಸಬೇಕು. ಇದರಿಂದ ನಿರಂತರ ವಿದ್ಯುತ್ ಸಂಪರ್ಕ ರೈತರಿಗೆ ದೊರೆಯುತ್ತದೆ.
-ಸುದರ್ಶನ ಎಚ್. ಯಡಹಳ್ಳಿ., ವಿಜಾಪುರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com