ವಿವೇಕಾನಂದರಿಗೆ ಸೌತೇಕಾಯಿ ತಿನ್ನಿಸಿದ ಫಕೀರ
ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರಾದ್ಯಂತ ವಿಶಿಷ್ಠ ರೀತಿಯಲ್ಲಿ ಆಚರಿಸಲಾಗುತ್ತಿದೆ. ಯುವಕರಿಗೆ ದೇಶಸೇವೆ ಮಾಡಲು ಸದಾ ಪ್ರೇರೇಪಿಸುತ್ತಿದ್ದ ವಿವೇಕಾನಂದರು ತಮ್ಮ ಅತ್ಯದ್ಭುತ ವಾಕ್ಚಾತುರ್ಯದಿಂದ ವಿಶ್ವದ ಎಲ್ಲರ ಗಮನ ಸೆಳೆದಿದ್ದರು. ಅವರು ಅಷ್ಟೊಂದು ಹೆಸರು ಗಳಿಸಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇದ್ದುಬಿಡುತ್ತಿದ್ದರು. ಒಮ್ಮೆ ಅವರು ಕಾಕ್ರಿಘಾಟ್ನಿಂದ ಅಲ್ಮೋರಾಕ್ಕೆ ನಡೆದು ಬರುತ್ತಿದ್ದರು. ವಿಪರೀತ ಹಸಿವಾಗಿ ಆಯಾಸಗೊಂಡು ದಾರಿಯಲ್ಲಿಯೇ ಕುಸಿದು ಕುಳಿತರು. ಅವರಿಗೆ ಒಂದು ಹೆಜ್ಜೆಯೂ ಮುಂದೆ ಇಡಲಾಗಲಿಲ್ಲ.
ಅಲ್ಲಿಯೇ ರಸ್ತೆಯ ಪಕ್ಕದಲ್ಲಿ ಮುಸಲ್ಮಾನರ ಸ್ಮಶಾನವಿತ್ತು. ಅಲ್ಲಿದ್ದ ಒಬ್ಬ ಬಡಫಕೀರ, ಸ್ವಾಮೀಜಿಯವರ ಸ್ಥಿತಿಕಂಡು ಮರುಗಿದ. ತಕ್ಷಣ ತನ್ನ ಬಳಿಯಿದ್ದ ಸೌತೆಕಾಯಿಯನ್ನು ತಂದು ಅದನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ತಂದುಕೊಟ್ಟನು. ಆದರೆ ವಿವೇಕಾನಂದರಿಗೆ ಅದನ್ನು ತಿನ್ನಲು ಸಹ ತ್ರಾಣವಿಲ್ಲದೆ ಆ ಫಕೀರನಿಗೇ ತಿನ್ನಿಸಲು ತಿಳಿಸಿದರು. ಆತ ಮುಸಲ್ಮಾನನಾಗಿದ್ದುದರಿಂದ ತಿನ್ನಿಸಲು ಸ್ವಲ್ಪ ಹಿಂಜರಿದ. ಆಗ ವಿವೇಕಾನಂದರೇ, "ಪರವಾಗಿಲ್ಲ ನಾವೆಲ್ಲರೂ ಸಹೋದರರೇ ಅಲ್ಲವೆ? ದಯಮಾಡಿ ನೀನೇ ನನಗೆ ತಿನ್ನಿಸು" ಎಂದು ಕೇಳಿಕೊಂಡರು. ಆಗ ಫಕೀರನು ಆ ಸೌತೆಕಾಯಿ ಹೋಳನ್ನು ಅವರಿಗೆ ತಿನ್ನಿಸಿದನು. ನಂತರ ವಿವೇಕಾನಂದರು ಚೇತರಿಸಿಕೊಂಡು ತಮ್ಮ ಪಯಣವನ್ನು ಮುಂದುವರೆಸಿದರು. ಅದಾಗಿ ಏಳು ವರ್ಷಗಳ ನಂತರ ಅವರು ಅಲ್ಮೋರಾಕ್ಕೆ ಬಂದಾಗ ಅದ್ಧೂರಿಯಿಂದ ಅವರನ್ನು ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಅಪಾರ ಜನಸ್ತೋಮ ಸೇರಿತ್ತು. ನಂತರ ನಡೆದ ಸಮಾರಂಭದಲ್ಲಿ ವಿವೇಕಾನಂದರು ಪಾಲ್ಗೊಂಡಿದ್ದಾಗ ಅಲ್ಲಿಯೇ ದೂರದ ಮೂಲೆಯೊಂದರಲ್ಲಿ ನಿಂತಿದ್ದ ಫಕೀರನನ್ನು ನೋಡಿದರು. ಫಕೀರನಿಗೆ ನೆನಪಿಲ್ಲದಿದ್ದರೂ ವಿವೇಕಾನಂದರು ಮರೆತಿರಲಿಲ್ಲ.
ಒಡನೆಯೇ ಆ ಫಕೀರನನ್ನು ತಮ್ಮ ಬಳಿ ಕರೆದು ಅವನನ್ನು "ಹಿಂದೆ ತಮ್ಮ ಜೀವವನ್ನುಳಿಸಿದ ಮಹಾತ್ಮ" ಎಂದು ಸಭೆಗೆ ಪರಿಚಯಿಸಿ, ಅವನು ಮಾಡಿದ ಉಪಕಾರವನ್ನು ವಿವರಿಸಿ ಹೇಳಿದರು. ಅಲ್ಲದೆ ಕೃತಜ್ಞತೆಯ ಕುರುಹಾಗಿ ಅವನಿಗೆ ಒಂದಿಷ್ಟು ಹಣವನ್ನು ಕೊಡಿಸಿದರು. ಆ ಫಕೀರ ಸ್ವಾಮೀಜಿಗೆ ಸೌತೆಕಾಯಿ ತಿನ್ನಿಸಿದ ಸ್ಥಳದಲ್ಲಿ ಭಕ್ತನೊಬ್ಬ ವಿವೇಕಾನಂದರ ಹೆಸರಿನಲ್ಲಿ ಛತ್ರವೊಂದನ್ನು ಕಟ್ಟಿಸಿದ್ದಾನೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.