ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 16 Oct 2013, 10:34 am

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ರವಿ ಶಿವಪ್ಪ ಕೋರೆ ಅವರು ಬರೆಯುತ್ತಾರೆ- 'ಅ.15ರ ಸಂಚಿಕೆಯ ಮೊದಲ ಪುಟದಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಕಾಲ್ತುಳಿತದ ವರದಿ ಪ್ರಕಟವಾಗಿದೆ. ಅದರಲ್ಲಿ ಘಟನೆ ನಡೆದದ್ದು ಸಿಂಧು ನದಿಯ ಮೇಲಿನ ಸೇತುವೆಯಲ್ಲಿ ಅಂತ ಉಲ್ಲೇಖವಾಗಿದೆ ಆದರೆ ಆ ನದಿಯ ಹೆಸರು 'ಸಿಂಧು' ಅಲ್ಲ, ಅದು 'ಸಿಂಧ್‌' ಅಂತಾಗಬೇಕಿತ್ತು.'
'ಸಿಂಧು ನದಿ ಟಿಬೆಟ್‌ನಲ್ಲಿ ಹುಟ್ಟಿ ಕಾಶ್ಮೀರದಲ್ಲಿ ಹರಿದು, ಪಾಕಿಸ್ತಾನಕ್ಕೆ ಸಾಗುತ್ತದೆ. ಸಿಂಧ್ ನದಿ ಮಧ್ಯಪ್ರದೇಶದಲ್ಲಿ ಹುಟ್ಟಿ ಉತ್ತರ ಪ್ರದೇಶದಲ್ಲಿ ಯಮುನಾ ನದಿಗೆ ಕೂಡುತ್ತದೆ. ಕಾಲ್ತುಳಿತ ಸಂಭವಿಸಿರುವುದು ಈ  ಸಿಂಧ್ ನದಿಯ ಮೇಲೆಯೇ ಹೊರತು ಸಿಂಧು ನದಿಯ ಮೇಲಲ್ಲ' ಎಂದಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತಂಗಿ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಅ.15ರ ಸಂಚಿಕೆಯ ಪುಟ 13ರ ಮೇಲ್ಭಾಗದಲ್ಲಿ ಪ್ರಕಟವಾಗಿರುವ 'ಮೈಸೂರು ಮೃಗಾಲಯದ ಅಮೂಲ್ಯ ಹುಲಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 5ನೇ ಬಾರಿಗೆ ದತ್ತು ಸ್ವೀಕರಿಸಿದರು' ಎಂದಿದೆ. 'ದತ್ತು' ಎನ್ನುವುದು ನನಗೆ ತಿಳಿದಂತೆ ಒಂದು ಬಾರಿ ಮಾತ್ರ, 5ನೇ ಬಾರಿ ಎನ್ನುವುದು ಅರ್ಥವಿಲ್ಲದ್ದು. ಇದರ ಬಗ್ಗೆ ವಿವರಣೆ ಬಯಸುತ್ತೇನೆ' ಎಂದಿದ್ದಾರೆ.
ಮಕ್ಕಳ ವಿಷಯದಲ್ಲಿ ದತ್ತು ಎಂದರೆ ಒಂದು ಬಾರಿ ಮಾತ್ರ ತೆಗೆದುಕೊಳ್ಳುವಂಥದ್ದು. ಆದರೆ ಪ್ರಾಣಿಗಳ ವಿಷಯದಲ್ಲಿ ಹೀಗೆ ಹೇಳಲಾಗುವುದಿಲ್ಲ. ಯಾಕೆಂದರೆ ಒಂದು ಪ್ರಾಣಿಯನ್ನು ಜೀವನಪರ್ಯಂತ ದತ್ತು ತೆಗೆದುಕೊಳ್ಳಲಾಗುವುದಿಲ್ಲ. ಒಂದು ವರ್ಷದ ಮಟ್ಟಿಗೆ ಮಾತ್ರ ದತ್ತು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ 5ನೇ ಬಾರಿ ದತ್ತು ತೆಗೆದುಕೊಂಡರು ಎಂದು ಹೇಳುವುದರಲ್ಲಿ ತಪ್ಪಿಲ್ಲ. ಆದರೂ ಸತತ 5ನೇ ವರ್ಷವೂ ಹುಲಿ ದತ್ತು ಪಡೆದ ಯಡಿಯೂರಪ್ಪ ಎಂದು ಬರೆದಿದ್ದರೆ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ.
ಮೈಸೂರಿನಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಅ.8ರಂದು 'ಕನ್ನಡಪ್ರಭ' ಮುಖಪುಟದಲ್ಲಿರುವ 'ಸುಪ್ರಭತಾ'ದಲ್ಲಿ ಒಂದು ಸಣ್ಣ ತಪ್ಪಾಗಿದೆ. 'ಖುಷಿ' ಎಂಬುದು 'ಖಷಿ' ಎಂದಾಗಿದೆ. 'ಸುಪ್ರಭತಾ' ಸಂಗ್ರಹಯೋಗ್ಯವಾಗಿರುವುದರಿಂದ ಹಾಗೂ ಓದುಗರು ಅದನ್ನು ಕತ್ತರಿಸಿ ಸಂಗ್ರಹಿಸಿಟ್ಟುಕೊಳ್ಳುವುದರಿಂದ ಮತ್ತೊಮ್ಮೆ ಈ 'ಸುಪ್ರಭತಾ' ಪ್ರಕಟವಾಗಲಿ' ಎಂದಿದ್ದಾರೆ.
ಇನ್ನೊಮ್ಮೆ ಅದನ್ನು ಪ್ರಕಟಿಸುವುದು ಸರಿಯಾಗಲಾರದು. 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಪ್ರಕಟಿಸಿದ ನಂತರ ಓದುಗರು ಅದನ್ನು ತಿದ್ದಿಕೊಳ್ಳುತ್ತಾರಾದ್ದರಿಂದ ಅದನ್ನು ಮತ್ತೆ ಪ್ರಕಟಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement