ಸಾಲ ಮನ್ನ ನೀತಿ ವೈಖರಿ
2008ರಲ್ಲಿ ಕೇಂದ್ರ ಸರ್ಕಾರ ಸುಮಾರು ಮೂರೂವರೆ ಕೋಟಿ ರೈತರ ಕೃಷಿ ಸಾಲ ಮನ್ನ ಮಾಡಿದ ನೀತಿ ಜಾರಿಗೆ ಬಂದ ರೀತಿಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳನ್ನು ಕುರಿತು ಸರ್ಕಾರ ತನಿಖೆ ನಡೆಸಲಿಲ್ಲ.
ಆದರೆ ಆಡಿಟರ್ ಜನರಲ್ರ ಕಾರ್ಯಾಲಯ ಸುಮಾರು 90,000 ಪ್ರಕರಣಗಳಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ ಎನ್ನುವ ವರದಿ ನೀಡಿತ್ತು. ಕಾರ್ಯಾಲಯದ ಸಿಬ್ಬಂದಿ ಅನೇಕ ಪ್ರಕರಣಗಳನ್ನು ವಿವರವಾಗಿ ಪರಿಶೀಲಿಸಿ ಈ ಪ್ರಕರಣಗಳಲ್ಲಿ ಸುಮಾರು ನೂರು ಕೋಟಿ ರುಪಾಯಿಗಳಷ್ಟು ಅವ್ಯವಹಾರ ನಡೆದಿದೆ ಎನ್ನುವುದನ್ನು ಪತ್ತೆ ಹಚ್ಚಿತ್ತು. ಮೋಸದ ವ್ಯವಹಾರಕ್ಕೆ ಅನೇಕರು ಬಳಸಿದ ತಂತ್ರ ಕಳ್ಳ ಸಹಿ, ಕೃತಕ ದಾಖಲೆಗಳ ಸೃಷ್ಟಿ, ಬೇರೆಯವರ ಹೆಸರಲ್ಲಿ ವ್ಯವಹಾರ ನಡೆಸಿದಂತಹ ಚಾಣಾಕ್ಷತೆ. ಆಡಿಟರ್ ಜನರಲ್ರ ಕಾರ್ಯಾಲಯ ಈ ಪ್ರಕರಣಗಳನ್ನು ಬ್ಯಾಂಕ್ಗಳಿಗೆ ರವಾನಿಸಿದಾಗ, ರಿಸರ್ವ್ ಬ್ಯಾಂಕಿನ ಆದೇಶದಂತೆ ಅನೇಕ ಬ್ಯಾಂಕ್ಗಳು 5092 ಪ್ರಕರಣಗಳಲ್ಲಿ ಸುಮಾರು 85 ಕೋಟಿ ರುಪಾಯಿಗಳನ್ನು ವಶಪಡಿಸಿಕೊಂಡಿವೆ. ಈ ಸಂಬಂಧದಲ್ಲಿ 499 ಮಂದಿ ಬ್ಯಾಂಕ್ಗಳ ಆಡಿಟರ್ಗಳ ವಿರುದ್ಧ ತನಿಖೆಯನ್ನು ನಡೆಸಲಾಗುತ್ತಿದೆ. ಹೆಚ್ಚು ಕಡಿಮೆ, ಸಾಲ ಮನ್ನ ನೀತಿಯ ಜಾರಿಯಲ್ಲಿ ನಡೆದ ಎಲ್ಲ ಅವ್ಯವಹಾರಗಳಲ್ಲೂ ಬ್ಯಾಂಕ್ ನೌಕರರ ಪಾತ್ರ ಹಾಗೂ ಸಹಕಾರ ಇದ್ದೇ ಇದೆ ಎನ್ನುವ ಅಭಿಪ್ರಾಯ ತೀರ ತರ್ಕಬದ್ಧ.
ಮನ್ನ ಆಗಿದ್ದ ಸಾಲ, ರೈತರು ಕೃಷಿ- ಉದ್ದೇಶಗಳಿಗೆಂದೇ ಪಡೆದಿದ್ದೆನ್ನುವ ಕಾಗದ ಪತ್ರಗಳಿವೆ. ಬಹುತೇಕವಾಗಿ ಇಂತಹಸಾಲ ಮಂಜೂರಾಗುವುದು ಗ್ರಾಮೀಣ ಶಾಖೆಗಳ ಮೂಲಕವೇ. ಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಖಾತೆದಾರರ ವಿವರಗಳು ಚೆನ್ನಾಗಿಯೇ ಗೊತ್ತಿರುತ್ತದೆ. ಮನ್ನ ಆದ ಸಾಲ ಕೇಳುವಾಗ ಒದಗಿಸಿದ್ದ ದಾಖಲೆಗಳನ್ನು ಪರಿಶೀಲಿಸಿದವರಿಗೆ ಸಾಲ ಪಡೆದ ರೈತ ಯಾರು ಎನ್ನುವುದು ಗೊತ್ತೇ ಇರಬೇಕು. ಅಂತಹ ಸನ್ನಿವೇಶದಲ್ಲಿ ಕಳ್ಳ ಸಹಿ ಹಾಕುವುದು, ಬೇರೆ ಯಾರದೋ ಹೆಸರಿನಲ್ಲಿರುವ ಸಾಲ ತನ್ನದೇ ಎಂದು ಹೇಳುವುದು ಸುಲಭವಲ್ಲ.
ಇಷ್ಟು ದೊಡ್ಡ ವ್ಯವಹಾರ ನಡೆದಿರುವಾಗ, ಅದರ ಲೆಕ್ಕ ಪತ್ರಗಳ ತಪಾಸಣೆ ಸರಿಯಾಗಿಯೇ ನಡೆದಿರುತ್ತದೆ ಎನ್ನುವ ವಿಶ್ವಾಸ ಜನರಿಗೆ ಇಲ್ಲ. ದೊಡ್ಡ ಪ್ರಮಾಣದಲ್ಲಿ ಹಲವು ಹತ್ತು ಸಾವಿರ ಕೋಟಿ ರುಪಾಯಿಗಳ ಸಾಲ ಮನ್ನದಂತಹ ಬಡಜನರ ಕಲ್ಯಾಣ ಯೋಜನೆಗಳ ಜಾರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ಕೊಡುವ ವ್ಯವಸ್ಥೆಯೂ ಆಗಬೇಕು. ಎಷ್ಟಾದರೂ ಸರ್ಕಾರದ ದುಡ್ಡು, ಯಾರಿಗೆ ಸೇರಿದರೇನಂತೆ ಎನ್ನುವ ಮನೋಧರ್ಮ ದೇಶದ ಹಿತಕ್ಕೆ ಮಾರಕ.