ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜನರ ಭಾವನೆಗಳೊಂದಿಗೆ ಆಟವಾಡಬಾರದು

Srinivasa Murthy VN
Updated On : 18 Oct 2013, 10:31 am

ತಾ. 12.10.13ರ ಕನ್ನಡಪ್ರಭ ಸಂಚಿಕೆಯಲ್ಲಿ ಪತ್ರಕರ್ತ ಚಂದ್ರ ಬಾರ್ಕೂರು ಅವರು "ಆಚರಣೆಗೂ ಶೋಷಣೆಗೂ ವ್ಯತ್ಯಾಸವಿಲ್ಲವೇ" ಲೇಖನದಲ್ಲಿ ಮಂಡಿಸಿದ ವಾದಗಳು ಸಮಯೋಚಿತವಾಗಿದೆ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ತಾವು ಪ್ರಗತಿಪರರು ಎಂಬ ಪಟ್ಟ ಪಡೆಯಲು ಉದ್ಯುಕ್ತರಾಗುತ್ತಿರುವವರ ಬಡಿವಾರದ ಬಗ್ಗೆ ಚೆನ್ನಾಗಿಯೂ ಬಾರಿಸಿದ್ದಾರೆ. ಯಾರಿಗೂ ತೊಂದರೆಯನ್ನು ಕೊಡದೆ ತಮ್ಮದೇ ಹಲವು ಪರಂಪರಾಗತ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವ ಸಮಾಜದ ಕೆಲವು ಪಂಗಡಗಳನ್ನು, ತಮ್ಮ ಸ್ವಾರ್ಥ ಸಾಧನೆಗಾಗಿ ಎತ್ತಿ ಕಟ್ಟಿ ಅವರ ನೆಮ್ಮದಿಯ ಸಹ ಬಾಳುವೆಗಳನ್ನು ನಾಶಗೈಯುವ ಕುಟಿಲ ಹಾಗೂ ಸ್ವಯಂಪ್ರೇರಿತ "ಸುಧಾರಕ"ರನ್ನು ಲೇಖಕರು ಬಯಲಿಗೆಳೆದಿದ್ದಾರೆ. ಲೇಖಕರು ಮಡೆ ಸ್ನಾನದ ವಿವಾದವನ್ನು ಉಲ್ಲೇಖಿಸಿ, ಇದೊಂದು ಮಾನವನ 'ಅಹಂ' ಪ್ರವೃತ್ತಿಯನ್ನು ನಿವೃತ್ತಿಗೊಳಿಸುವಲ್ಲಿನ ಸಾಧನ ಎಂದುದು ಸರಿಯಾದ ತರ್ಕವೇ. ಅವರ ಈ ತರ್ಕವನ್ನುಧರಿಸುವುದಾದಲ್ಲಿ-ಸಿಖ್ ಜನಾಂಗೀಯರಲ್ಲಿ ಭಕ್ತನಾದವನು ಅದೆಷ್ಟೇ ಸಿರಿವಂತ, ಉನ್ನತ ಹುದ್ದೆಯಲ್ಲಿದ್ದರೂಗುರುದ್ವಾರಗಳಲ್ಲಿ ಆಗಮಿಸಿದ ಭಕ್ತರ ಪಾದರಕ್ಷೆಗಳನ್ನು ಶುಚಿಗೊಳಿಸುವ ಸಂಪ್ರದಾಯ ನಡೆದು ಬರುತ್ತಿರುವುದು ಕೂಡ ಯಾರದ್ದೇ ಬಲವಂತದಿಂದಲ್ಲ. ಅದು ಅವರವರ ಭಕ್ತಿಯ ಸೂಚಕ. ಅಲ್ಲಿ ಶೋಷಣೆಯ ಭಾವ ಕಿಂಚಿತ್ತೂ ಇರುವುದಿಲ್ಲ. ನಂಬಿಕೆ, ಸಂಪ್ರದಾಯಗಳೂ ಎಲ್ಲಾ ಧರ್ಮ, ಪಂಗಡಗಳಲ್ಲಿ ಇರುವಂಥಾದ್ದೇ. ಸಂಪ್ರದಾಯದ ಸುಧಾರಣೆಯ ಸೋಗಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ದೂರವಿರಿಸಿದಷ್ಟೂ ಕ್ಷೇಮ. ಲೇಖಕರು ಅಂದಂತೆ; ಅವರದ್ದೇನಿದ್ದರೂ ಕೇವಲ ಪ್ರಚಾರಕ್ಕಾಗಿ ತಮ್ಮ ಅಸ್ತಿತ್ವಕ್ಕಾಗಿ.
-ಎನ್.ಡಿ. ಕಾರಂತ, ಮೈಸೂರು.

ಅಕ್ರಮ ಗಣಿ ಧಣಿಗಳ ಸಿಂಹಸ್ವಪ್ನ

ಎಸ್.ಆರ್. ಹಿರೇಮಠ ಅವರು ಅಕ್ರಮ ಗಣಿಧಣಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಅವರ ಸಾತ್ವಿಕ ಹೋರಾಟ, ಪರಿಸರ ರಕ್ಷಣೆಯ ಭಾಗವಾಗಿಯೂ ಅವರ ಹೋರಾಟ ಮಹತ್ವ ಪಡೆದಿದೆ. ಸಮಾಜ ಪರಿವರ್ತಿತ ಸಮುದಾಯ ಯಾವುದೇ ಅಂಜಿಕೆ, ಅಳುಕಿಲ್ಲದೆ ದೃತಿಗೆಢದೆ ಹೋರಾಡಲಿ. ಯಾವುದೇ ಬೆಂಬಲಿಗರ ದಾಂಧಲೆ ಅಥವಾ ಬೆದರಿಕೆಗೆ ಹೆದರದೆ ಹೋರಾಟ ತೀವ್ರಗೊಳಿಸಬೇಕು. ಸರ್ಕಾರದ ಬೊಕ್ಕಸಕ್ಕೂ ತುಂಬಾ ನಷ್ಟವಾಗಿದ್ದು ಅದನ್ನು ವಾಪಸು ಪಡೆಯಬೇಕು. ಅದರಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯೂ ಸೇರಿಸಿಕೊಳ್ಳಬೇಕು. ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಾಗಿರುವ ಪರಿಸರ ಮತ್ತು ಸಾರ್ವಜನಿಕ ಹಾನಿಯನ್ನು ತುಂಬಿ ಕೊಡಬೇಕು. ಇನ್ನು, ಹೋರಾಟಗಾರರು ನಡೆಸುವ ಸಭೆಗೆ ನುಗ್ಗುವುದು, ಪ್ರಶ್ನಿಸುವುದು, ದಾಂಧಲೆ ನಡೆಸುವುದು ಯಾವುದರ ಸಂಕೇತ? ಕೆಲವು ಸಾಹಿತಿಗಳು ಈ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ್ದರು. ಅವರ ಆಸೆಯಂತೆ ಅದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಹೋರಾಟಗಾರರ ಸಭೆಗೆ ನುಗ್ಗಿ ಜನಪ್ರತಿನಿಧಿಗಳ ಬೆಂಬಲಿಗರೆಂದು ಕೆಲವರು ಹಿರೇಮಠರನ್ನು ಪ್ರಶ್ನಿಸಿರುವುದರ ಬಗ್ಗೆ ಸಾಹಿತಿಗಳು ಕೂಡಲೇ ಬಾಯ್ಬಿಡಬೇಕು. ತಮ್ಮದೇ ಸರ್ಕಾರದಲ್ಲಿ ಇಂಥ ಆಘಾತಕರ ಸನ್ನಿವೇಶಗಳಿಗೆ ಅವಕಾಶ ನೀಡಲಾರರು ಎಂಬ ಆಶಯ ಪ್ರಜ್ಞಾವಂತರಲ್ಲಿದೆ.
-ವಿಜಯ್ ಮಹಾಂತೇಶ್, ಇರಕಲ್ಲಗಡ

ಬೇಕು-ಬೇಡ!?

ಅಡ್ಡಪಲ್ಲಕ್ಕಿ ಉತ್ಸವ ಬೇಡ/ಉದ್ದುದ್ದ ಕಲ್ಪನೆಗಳೂ ಬೇಡ.
ವಿರಕ್ತರಿಗೆ ದಸರಾ ದರ್ಬಾರೂ ಬೇಡ
ಈ ಅಡ್ಡ-ಉದ್ದಗಳ ನಡುವೆ ಭಕ್ತರ ಯಾವ ವಾಗ್ವಾದವೂ ಬೇಡ.
ವಜ್ರಖಚಿತ ಕಿರೀಟ ಬೇಡ. ಭಕ್ತಿ ಭಾವದ ಮುಕುಟ ಬೇಕು.
ಸ್ವಾಮೀಜಿಗಳು ಪತಿತೋದ್ಧಾರಕರಾಗಬೇಕು
ಅಂಥ ಗುರುಗಳಿಗೆ ನಮ್ಮೆಲ್ಲರ ನಮನ ಸಲ್ಲಲೇಬೇಕು.
-ಜೆ.ಆರ್. ಆದಿನಾರಾಯಣಮುನಿ, ಹಿರಿಯೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement