ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 20 Oct 2013, 9:52 am

ಮೈಸೂರು ಮಧುರಾನಗರದಿಂದ ಗೋವಿಂದನ್ ಹೆಮ್ಮಿಗೆ ಅವರು ಬರೆಯುತ್ತಾರೆ- 'ಇತ್ತೀಚೆಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಸಣ್ಣ ಪುಟ್ಟ ತಪ್ಪುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಓದುಗರು ತಪ್ಪನ್ನು ಕಂಡು ಹಿಡಿಯಲೆಂದೇ ಈ ರೀತಿಯ ತಪ್ಪುಗಳು ಆಗುತ್ತಿದೆಯೋ ಅಥವಾ ಕಣ್‌ತಪ್ಪಿನಿಂದ ಆಗುತ್ತಿದೆಯೋ ನನಗೆ ಗೊತ್ತಿಲ್ಲ. ಅದು ಹೇಗಾದರೂ ಇರಲಿ.'
'ಸೆ.28ರ ಪತ್ರಿಕೆಯಲ್ಲಿ ನನ್ನ ಕಣ್ಣಿಗೆ ಕೆಲವು ತಪ್ಪುಗಳು ಗೋಚರವಾಗಿದೆ. 4ನೇ ಪುಟದ ಕೊನೆಯಲ್ಲಿ 'ನಗರಸಭೆಯಲ್ಲಿ ರಸ್ತೆ ಗುಂಡಿಯದ್ದೇ ಕಾರುಬಾರು' ಎಂಬ ಶೀರ್ಷಿಕೆಯ ಮೇಲಿನ ಸಾಲಿನಲ್ಲಿ, 'ಅಧಿಕಾರಿಗಳ್ಯಾರೂ ತಮ್ಮಕೇಳುತ್ತಿಲ್ಲ ಎಂದು ಸದಸ್ಯರ' ಎಂದಿದೆ. ಅದು ಅಧಿಕಾರಿಗಳ್ಯಾರೂ ತಮ್ಮನ್ನು ಎಂದಿರಬೇಕಾಗಿತ್ತು. 5ನೇ ಪುಟದಲ್ಲಿ 'ಸಾಂಬಾರು ಪಾತ್ರೆಗೆ ಬಿದ್ದ ಮೂರು ವರ್ಷದ ಮಗು' ಎಂಬ ಶೀರ್ಷಿಕೆಯಲ್ಲಿ ಬಲಗಡೆಯ ಪ್ಯಾರಾದ 7ನೇ ಸಾಲಿನಲ್ಲಿ 'ಮಗುವನ್ನು ಹೆಚ್ಚಿ ಚಿಕಿತ್ಸೆಗಾಗಿಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ...' ಎಂದಿದೆ. ಅದು ಹೆಚ್ಚಿನ  ಎಂದಿರಬೇಕಾಗಿತ್ತು.'
'ಇದು ಹೋಗಲಿ ಬಿಡಿ 'ಬೈಟು ಕಾಫಿ' ವಿಭಾಗದಲ್ಲಿ 'ವೃದ್ಧ ಭಾರತ'ಎಂಬ ಶೀರ್ಷಿಕೆಯಲ್ಲಿ 'ಇದು ತಿಳಿದಿರಲಿ' ಎಂಬ ಶೀರ್ಷಿಕೆಯಲ್ಲಿ 6ನೇ ಸಾಲಿನಲ್ಲಿ... 'ವೃದ್ದರನ್ನು ನಾವು ಮಕ್ಕಳನ್ನು ಮಾಡಿದಂತೆಯೇ ಜೋಪಾನ ಮಾಡಬೇಕು' ಎಂದಿದೆ. ಇದು ಯಾವ ರೀತಿಯ ವಾಕ್ಯ ಪ್ರಯೋಗ ಸ್ವಾಮೀ? ಆಭಾಸಕ್ಕೆ ಎಡೆ ಮಾಡಿಕೊಡುವುದಿಲ್ಲವೇ? ನನಗೆ ಅನ್ನಿಸಿದ ಹಾಗೆ ಅದು 'ಮಕ್ಕಳನ್ನು ನೋಡಿಕೊಳ್ಳುವಂತೆ ಜೋಪಾನವಾಗಿ ನೋಡಿಕೊಳ್ಳಬೇಕು' ಎಂದಿರಬೇಕಾಗಿತ್ತು ಎಂದು ಅನ್ನಿಸುತ್ತೆ' ಎಂದಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರದಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಅ.8ರ ಸಂಚಿಕೆಯ ಪುಟ 6ರಲ್ಲಿ 'ಮಂಗಳೂರು: ಮೂವರು ಬಾಲಕಿಯರು ನಾಪತ್ತೆ' ಶೀರ್ಷಿಕೆಯ ಲೇಖನದಲ್ಲಿ 'ಪಣಂಬೂರು ಎನ್‌ಎಂಪಿಟಿ ಕೇಂದ್ರೀಯ ವಿದ್ಯಾಲಯದ 6ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. '6ನೇ ತರಗತಿ' ವಿದ್ಯಾರ್ಥಿನಿಯರಾದ ಕಾವೂರು ನಿವಾಸಿ ವರ್ಷಿಣಿ, ಕೋಡಿಕಲ್ ನಿವಾಸಿ ರಕ್ಷಿತಾ, ಪರ್ದಪದವು ನಿವಾಸಿ ವಿಶ್ವರೂಪ ಸೋಮವಾರ ಶಾಲೆಗೆ ಹೋಗಿದ್ದು ವಾಪಸ್ ಮನೆಗೆ ಹೋಗಿಲ್ಲ' ಎಂದು ಪ್ರಕಟವಾಗಿದೆ.'
'6ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದ ಮೇಲೆ ಮತ್ತೆ 6ನೇ ತರಗತಿಯ ವಿದ್ಯಾರ್ಥಿನಿಯರಾದ ಎಂದು ಹೇಳುವ ಅಗತ್ಯವಿತ್ತೇ? ಹಾಗೂ ಸೋಮವಾರ ಸಂಜೆ ಶಾಲೆ ವಾಹನದಲ್ಲಿ ಮನೆಗೆ ಹೋಗಿಲ್ಲ ಎಂದಿದೆ. ಅಂದರೆ 7ನೇ ತಾರೀಖು ಸಂಜೆ ಘಟನೆ ನಡೆದಿದೆಯೇ? ಅದೇ ದಿನ ಸಂಜೆಯೇ ದೂರು ದಾಖಲಾಗಿದೆಯೇ? ಒಟ್ಟಿನಲ್ಲಿ ಮೂವರು ಬಾಲಕಿಯರು ನಾಪತ್ತೆಯಾದ ದಿನಾಂಕವೇ ಪ್ರಕಟವಾಗಿಲ್ಲ'  ಎಂದಿದ್ದಾರೆ.
ಸುದ್ದಿಯಲ್ಲಿ ನೇರವಾಗಿ ವಿದ್ಯಾರ್ಥಿನಿಯರು ಯಾವಾಗ ನಾಪತ್ತೆಯಾದರು ಎಂಬುದನ್ನು ಹೇಳಿಲ್ಲವಾದರೂ, ಸೋಮವಾರ (ಅ.7) ಸಂಜೆ ಶಾಲೆ ವಾಹನದಲ್ಲಿ ಮನೆಗೆ ತೆರಳಿಲ್ಲ ಎಂದು ಹೇಳಲಾಗಿದೆ. ಅ.8 ಪತ್ರಿಕೆಯಲ್ಲಿ ಬಂದಿದೆ ಅಂದ ಮೇಲೆ ಸೋಮವಾರವೇ ಅವರು ನಾಪತ್ತೆಯಾಗಿದ್ದಾರೆ ಎಂದೇ ಅರ್ಥವಲ್ಲವೇ? ಅ.6 ಭಾನುವಾರ ಶಾಲೆ ಇರುವುದಿಲ್ಲ. ಸೋಮವಾರ ಶಾಲಾ ವಾಹನದಲ್ಲಿ ಮನೆಗೆ ಹೋಗಿಲ್ಲ ಅಂದ ಮೇಲೆ ಅವರು ಶಾಲೆಗೆ ಬಂದಿದ್ದರೂ ಎಂಬುದನ್ನೂ ಅದರಲ್ಲಿ ಹೇಳಿದಂತಾಗಿದೆ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement