ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅನ್ನಭಾಗ್ಯದ ಬೇಡದ ಕಾಣಿಕೆ

Srinivasa Murthy VN
Updated On : 21 Oct 2013, 9:51 am

ಬಡವರಿಗೆ, ಕಡು ಬಡವರಿಗೆ ಹಸಿವೆಯಿಂದ ಮುಕ್ತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ 'ಅನ್ನಭಾಗ್ಯ', 'ಅಮ್ಮ ಭಾಗ್ಯ' ಯೋಜನೆಗಳಿಂದ ಅನಪೇಕ್ಷಿತವಾಗಿ ದೊರೆಯಬಹುದಾದ ಕಾಣಿಕೆ ಎಂದರೆ ಧಾನ್ಯ ಪೇಟೆಯ ಕಳ್ಳ ಮಾರಾಟ ಹಾಗೂ ಬೆಲೆ ಕುಸಿತ.
ಜಗತ್ತಿನಲ್ಲಿ ಯಾವ ದೇಶದಲ್ಲೂ ಇಂತಹ ಮಹಾನ್ ಯೋಜನೆ ಜಾರಿಯಲ್ಲಿಲ್ಲ. ಆದ್ದರಿಂದ ಈ ಯೋಜನೆಯನ್ನು ರೂಪಿಸುವಾಗ, ಬಡವರೆಂದರೆ ಯಾರು, ಅವರಿಗೆ ನಿಜವಾಗಲೂ ಬೇಕಾದ ಧಾನ್ಯದ ಪ್ರಮಾಣ ಎಷ್ಟು ಎನ್ನುವ ಅಂಕಿಯನ್ನು ಸರಿಯಾಗಿ ಸಂಗ್ರಹಿಸಬೇಕು ಹಾಗೂ ಕಡುಬಡವರಿಗೆ ನಿಜವಾಗಲೂ ಎಷ್ಟು ಬೆಲೆ ಕೊಡುವುದು ಸಾಧ್ಯ ಎನ್ನುವುದೂ ಸರಿಯಾಗಿ ಅಂದಾಜಾಗಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ಈ ಜನಕಲ್ಯಾಣ ಯೋಜನೆಗಳನ್ನು ಓಟ್ ಬ್ಯಾಂಕ್‌ಗಳ ಸೃಷ್ಟಿಗೆ ಬಳಸಬಾರದು. ಈಗ ಜಾರಿಗೆ ಬಂದಿರುವ ಸ್ವರೂಪದಲ್ಲಿ ಈ ಯೋಜನೆ, ದೇಶದಲ್ಲಿ ಅಕ್ಕಿ-ಗೋದಿಗೆ ವ್ಯಾಪಕವಾದ ಕಳ್ಳಪೇಟೆಯನ್ನು ಸೃಷ್ಟಿಸುವ ಲಕ್ಷಣಗಳು ಕಂಡುಬರುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ (ರಾಜ್ಯದ ಇತರ ನಗರಗಳಲ್ಲೂ ಹಾಗೇ ಆಗಿರಬಹುದು) ಬಡವರು ರುಪಾಯಿಗೊಂದು ಕೇಜಿ ದರದಲ್ಲಿ ಕೊಳ್ಳಬೇಕಾದ ಅಕ್ಕಿಯನ್ನು ಮುಂಗಡವಾಗಿಯೇ ಮಾರಾಟ ಮಾಡುವ ಜಾಲ-ಸೃಷ್ಟಿಯಾಗಿರುವಂತಿದೆ. ಅದರ ಪರಿಣಾಮ ನಿಜಕ್ಕೂ ಅಪಾಯಕಾರಿ. ಸರ್ಕಾರ ಬಹಿರಂಗವಾಗಿ ಅಗ್ಗದ ಅಕ್ಕಿಯ ಕಳ್ಳಮಾರಾಟವನ್ನು ಅಲ್ಲಗಳೆಯಬಹುದು. ಆದರೆ ಕಳ್ಳ ಪೇಟೆ ಇರುವುದು ನಿಜ ಎನ್ನುವುದು ಸರ್ಕಾರಕ್ಕೂ ಗೊತ್ತು. ಅದನ್ನು ತಪ್ಪಿಸಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement