ಕನ್ನಡದಲ್ಲೇ ಕಾಯಿದೆ ರಚನೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾನುವಾರ ಬಹುಮುಖ್ಯವಾದ, ಆಡಳಿತದಲ್ಲಿ ಕನ್ನಡದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕಟುವಾದ ಸತ್ಯವನ್ನು ನುಡಿದು, ಇನ್ನು ಮುಂದೆ ರಾಜ್ಯದ ಶಾಸನಗಳನ್ನು ಕನ್ನಡದಲ್ಲೇ ರಚಿಸಬೇಕೆಂದು ಖಡಾಖಂಡಿತವಾಗಿ ಹೇಳಿರುವುದು ಒಂದು ರೀತಿಯಲ್ಲಿ ರಾಜ್ಯೋತ್ಸವದ ಆಚರಣೆಗೆ ನಾಂದಿಯಂತಿದೆ.
ಆದರೆ ಅವರು ಇದಕ್ಕೆ ಕಾಯಿದೆ ಇಲಾಖೆ ಹಾಗೂ ವಿಧಾನ ಮಂಡಲದ ಕಾರ್ಯಾಲಯಗಳನ್ನಷ್ಟೇ ನಂಬಿದರೆ ಕೆಲಸ ಆಗುವುದಿಲ್ಲ. ನಿಜ. ಈಗಾಗಲೇ ಅನೇಕ ಸಮ್ಮೇಳನಗಳಲ್ಲಿ ಕನ್ನಡದಲ್ಲೇ ಕಾಯಿದೆ ರಚನೆಯಾಗಬೇಕೆನ್ನುವ ನಿರ್ಣಯಗಳಾಗಿವೆ.
ಕೆಲವು ವರ್ಷಗಳ ಹಿಂದೆ ಕೆಲವು ಉತ್ಸಾಹಿ ನೌಕರರು ಕಾಯಿದೆಯ ಕರಡುಗಳನ್ನು ಕನ್ನಡದಲ್ಲೇ ರಚಿಸಿ, ಅದಕ್ಕಾಗಿಯೇ ಹೊಗಳಿಸಿಕೊಂಡಿದ್ದೂ ಆಗಿದೆ. ಆದರೆ, ಅದು ಕಡ್ಡಾಯವಾಗಲಿಲ್ಲ. ಅಷ್ಟೇ ಅಲ್ಲ. ಸರ್ಕಾರದ ಹಿರಿಯ ಅಧಿಕಾರಿಗಳು ಈ ಪ್ರಯತ್ನವನ್ನು ಮೆಚ್ಚಲೂ ಇಲ್ಲ.
ಈಗ ಹೆಚ್ಚು ಕಡಿಮೆ ಎಲ್ಲ ಕಾಯಿದೆಗಳ ಕರಡೂ ಸಿದ್ಧವಾಗಿರುವಾಗುವುದು ಇಂಗ್ಲಿಷಿನಲ್ಲೇ. ಅದಕ್ಕೆ ನಮ್ಮ ಕಾಯಿದೆ ರಚಿಸುವ ವಿಭಾಗದಲ್ಲಿರುವವರ ಇಂಗ್ಲಿಷ್ ಮೇಲಿನ ಪ್ರೇಮವೂ ಕಾರಣವಲ್ಲ ಅಥವಾ ಅವರ ಭಾಷಾ ಪ್ರಭುತ್ವವೂ ಕಾರಣವಲ್ಲ. ಇಂಗ್ಲಿಷ್ನಲ್ಲಿ ಕಾಯಿದೆಯ ಕರಡು ರಚನೆ ಸುಲಭ.
ಯಾವುದೋ ಕಾಲದಲ್ಲಿ ಯಾರೋ ರೂಪಿಸಿದ ಚೌಕಟ್ಟುಗಳಿವೆ. ಆ ಚೌಕಟ್ಟಿಗೆ ಹೊಸ ಕಾಯಿದೆಯ ಉದ್ದೇಶವನ್ನು ಅಳವಡಿಸುವುದಕ್ಕೂ ಉದಾಹರಣೆಗಳೂ ಒಂದಲ್ಲ ಒಂದು ಕಡೆ ಸಿಗುತ್ತವೆ. ಆದ್ದರಿಂದ ಇಂಗ್ಲಿಷಿನಲ್ಲಿ ಕಾಯಿದೆಯ ರಚನೆಗೆ ನಮ್ಮ ಮೆದುಳಿಗೆ ಹೆಚ್ಚು ಕೆಲಸ ಕೊಡುವ ಅಗತ್ಯವಿಲ್ಲ.
ಆದರೆ ಕನ್ನಡದಲ್ಲಿ ಕಾಯಿದೆಯ ಕರಡನ್ನು ರಚಿಸಲು ಶ್ರಮ ಪಡಬೇಕು. ಅಧ್ಯಯನ ಮಾಡಬೇಕು. ಕೊನೆಗೆ ಕನ್ನಡವನ್ನು ಬಳಸುವ ಕೌಶಲ ಬೇಕು.
ಈಗಲೂ ಇಂಗ್ಲಿಷಿನಲ್ಲಿ ಬಳಸಲಾಗುವ ಅನೇಕ ಪದಗಳಿಗೆ ಸಮಾನ ಅರ್ಥದ ಕನ್ನಡ ಪದಗಳು ಸಿಗುವುದಿಲ್ಲ. ಇಂಗ್ಲಿಷಿನ ರಚನೆಯನ್ನು ಕನ್ನಡದ ಅವತರಣೆಗೆ ತರುವಾಗ ಪದಗಳನ್ನು ಹುಡುಕುವ ಕೆಲಸ ಕಷ್ಟ. ಕೊನೆಗೆ ಯಾರಿಗೂ ಅರ್ಥವಾಗದ ರೀತಿಯ ಪದಗಳನ್ನು ಬಳಸಿ, ಕಾಯಿದೆಯ ಮೂಲ ಗುಣವನ್ನೇ ನಾಶ ಮಾಡುವ ಅಪಾಯವಿದೆ.
ಸರ್ಕಾರದ ಭಾಷೆಯಲ್ಲಿ ದ್ವಂದ್ವಾರ್ಥಕ್ಕೆ ಅವಕಾಶವಿರಬಾರದು. ಏನನ್ನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳಬೇಕು. ಬಗೆ ಬಗೆಯ ವ್ಯಾಖ್ಯಾನಕ್ಕೆ ಒಗ್ಗುವಂತಹ ಭಾಷೆ ಸಲ್ಲದು. ಅದಕ್ಕೇ ಇಂಗ್ಲಿಷಿನ ಕರಡಿನಲ್ಲೂ ತುಂಬಾ ನೀರಸ ಎನ್ನಬಹುದಾದ ಭಾಷೆಯನ್ನೇ ಬಳಸುವುದು. ಕನ್ನಡದಲ್ಲೇ ಕಾಯಿದೆಯ ಕರಡಿನ ವಿಚಾರ ಕುರಿತ ಚಿಂತನೆ ಆರಂಭವಾದರೆ (ಅದು ಇಂಗ್ಲಿಷಿನಿಂದ ಎರವಲು ಪಡೆದಿರಬಾರದು) ಸ್ವಲ್ಪ ಕಷ್ಟಪಟ್ಟರೆ, ಕನ್ನಡದಲ್ಲೇ ಕಾಯಿದೆ ರಚನೆ ಸಾಧ್ಯ. ನಿಜ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಎಡರು ತೊಡರುಗಳು ಕಂಡುಬರಬಹುದು. ಕೆಲವು ವಾಕ್ಯಗಳ ರಚನೆ ಲೇವಡಿಗೂ ಒಳಗಾಗಬಹುದು.
ಆದ್ದರಿಂದ ಯಾರೂ ವಿಚಲಿತರಾಗಬೇಕಾಗಿಲ್ಲ. ಸ್ವತಂತ್ರ ಭಾರತದಲ್ಲಿ ರಚನೆಯಾದ ಅನೇಕ ಕಾಯಿದೆಗಳನ್ನು (ಇಂಗ್ಲಿಷ್ನಲ್ಲೇ) ಗಮನಿಸಿದರೆ, ನಮ್ಮಲ್ಲಿ ಕಾಯಿದೆ ರಚನೆಯ ಕಾರ್ಯಾಂಗ ಪ್ರಗತಿ ಕಡಿಮೆ ಎಂದು ಸುಪ್ರೀಂ ಕೋರ್ಟಿನಲ್ಲೇ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಅಗತ್ಯ ಬಿದ್ದರೆ, ಕಾಯಿದೆ ರಚನೆಯ ಕೌಶಲ್ಯ ಕಲಿಯಲಿಕ್ಕೆ ಸರ್ಕಾರಿ ಅಧಿಕಾರಿಗಳನ್ನು ಹೊಸ ಕಾನೂನು ವಿಶ್ವವಿದ್ಯಾಲಯಗಳಿಗೆ ಕಳುಹಿಸಲೂ ಬಹುದು. ಕಾಯಿದೆ ರಚನೆಗೆ ಸಂಕಲ್ಪ ಶಕ್ತಿ ಬೇಕು.