ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 21 Oct 2013, 9:55 am

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಒಂದು ವೇಳೆ 'ಕನ್ನಡಪ್ರಭ' ಪ್ರಧಾನ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ವರದಿ ಸಿದ್ಧಪಡಿಸುವ ಸಹೋದ್ಯೋಗಿಗಳೆಲ್ಲಾ ತಮ್ಮ ಅಂಕಣ ' ತಪ್ಪಾಯ್ತು ತಿದ್ಕೋತೀವಿ'ಯನ್ನು ತಪ್ಪದೇ ಓದಲೇಬೇಕು ಅಂತ ಫರ್ಮಾನು ಇಲ್ಲ ಸುಗ್ರೀವಾಜ್ಞೆ ಹೊರಡಿಸಿದರೆ ಏನಾಗಬಹುದು? ಹಾಗಾದಾಗ ಪ್ರಧಾನ ಸಂಪಾದಕರು ಯಾವುದನ್ನು ತಪ್ಪಾಯ್ತು ಅಂತ ಒಪ್ಪಿಕೊಳ್ಳುತ್ತಾರೋ ಆ ತಪ್ಪುಗಳು ಅಪ್ಪಿತಪ್ಪಿಯೂ ಪತ್ರಿಕೆಯಲ್ಲಿ ಇನ್ನು ಮುಂದೆ ಕಾಣಸಿಗುವುದಿಲ್ಲ.'
'ಅ.16 ರ ಸಂಚಿಕೆಯ ಮುಖಪುಟಕ್ಕೆ ಮುಖಮಾಡಿದರೆ ವೇದ್ಯವಾಗುತ್ತೆ.'ಸಿಡಲಿಗೆ 5, ನೀರಲ್ಲಿ ಮುಳುಗಿ 4 ಬಲಿ' ಓದಿ. ಈ ಸುದ್ದಿಯಲ್ಲಿ 'ಜಲ ಸಮಾಧಿ' ಎಂಬ ಆಕ್ಷೇಪಾರ್ಹ ಪದ ಪುನಃ ಸಮಾಧಿಯಿಂದ ಎದ್ದು ಬಂದು ಕೂತಂತಿದೆ. ಕೆಲವು ತಿಂಗಳ ಹಿಂದೆ ಬೇಲೂರು ಕೆರೆಗೆ ಕರ್ನಾಟಕ ಸಾರಿಗೆ ಬಸ್ ಬಿದ್ದಾಗ ಜಲ ಸಮಾಧಿ ಪದ ಪ್ರಸ್ತಾಪವಾಗಿತ್ತು.'
'ಈ ಪದಕ್ಕೆ ನನ್ನದೇ ಹೆಸರಿನ ನಮ್ಮೂರಿನ ನ್ಯಾಯವಾದಿಗಳು ಹಾಗೂ ನನ್ನ ಪಕ್ಕದ ಬಡಾವಣೆಯ ಕೊ. ಸು. ನರಸಿಂಹಮೂರ್ತಿಗಳು ತಕರಾರು ಎತ್ತಿದ್ದರು. ತಾವು ತಪ್ಪನ್ನು ಒಪ್ಪಿಕೊಂಡಿದ್ದು ನನಗೆ ನೆನಪಿದೆ. ಸಂಬಂಧಪಟ್ಟವರು ಅಪ್ಪ ಹಾಕಿದ ಆಲದಮರ ಎನ್ನುವಂತೆ ಪದೇ ಪದೇ ಈ ಪದಗಳಿಗೆ ಏಕೆ ಜೋತುಬೀಳುತ್ತಾರೆ? ತಪ್ಪಿನ ಪದಗಳಿಗೆ ಪೂರ್ಣ ವಿರಾಮ ಹಾಕಬೇಕಿತ್ತಲ್ಲವೇ? ಹಾಗಿಲ್ಲದಿದ್ದರೆ ನೀವು ತಪ್ಪು ಒಪ್ಪಿಕೊಳ್ಳೋಣ, ಸಹೋದ್ಯೋಗಿಗಳು ಮತ್ತದೇ ತಪ್ಪು ಮಾಡೋಣವನ್ನು ನೋಡಿದಾಗ ತೊಟ್ಟಿಲು ತೂಗುವ ಜೊತೆಗೆ ಮಗುವನ್ನು ಚಿವುಟಿದಂತಾಗುತ್ತದೆ ಅಲ್ಲವೇ ಭಟ್ರೇ?
'ವಿಶ್ವೇಶ್ವರ ಭಟ್ಟರು ಹುಟ್ಟು ಹಾಕಿದ ಈ ಅಂಕಣ ಮುದ್ದಿನ ಕೂಸಂತೆ.ಈ ಅಂಕಣವನ್ನು ಮುದ್ದು ಮಾಡುವ ದೊಡ್ಡ ಓದುಗ ಬಳಗ ಪತ್ರಿಕೆಯ ಇನ್ಯಾವುದೇ ಅಂಕಣಕ್ಕೆ ಇಲ್ಲ ಎಂದರೆ ಅತಿಶಯೋಕ್ತಿಯ ಮಾತಲ್ಲ. ಓದುಗರಿಂದ ಓದುಗರಿಗೆ ಎನ್ನುವಂತಾಗಿದೆ ಈ ಅಂಕಣ. ಅರಿವಿನ ಯಾಜ್ಞಮಾನದ ಸೆಲೆ ಎಂದೆನಿಸಿ ಜನಪ್ರಿಯವಾಗಿದೆ.  ಗೊತ್ತಿಲ್ಲದ ಸಂಗತಿಯನ್ನು ಗೊತ್ತಿದ್ದವರು ಗೊತ್ತಿಲ್ಲದವರಿಗೆ ತಿಳಿಸುವ ಮಾಧ್ಯಮ ಈ ಅಂಕಣ.'
'ನ್ಯಾಯವಾದಿಗಳು  ಭಟ್ಟರ ಕೋರ್ಟ್‌ನಲ್ಲಿ ಮರು ಪರಿಶೀಲನೆ ಅರ್ಜಿ ಹಾಕುವ ಮುಂಚೆ ಕ್ರಮ ಕೈಗೊಳ್ಳಲಿ' ಎಂದಿದ್ದಾರೆ.
'ಜಲ ಸಮಾಧಿ' ಕುರಿತು ಬರೆದಿದ್ದು ನೆನಪಿದೆ. ಬಳಕೆ ತಪ್ಪು ಎಂದು ಒಪ್ಪಿಕೊಂಡಿಲ್ಲ ಎಂಬುದು ನನ್ನ ನೆನಪು. ನೀರಲ್ಲಿ ಮುಳುಗಿ ಸಾಯುವುದರ ಪಕ್ಕಾ ಅರ್ಥ 'ಜಲಸಮಾಧಿ' ಅಲ್ಲವಾದರೂ, ಅದನ್ನು ಸೂಚ್ಯವಾಗಿ ಆ ರೀತಿಯಲ್ಲಿ ಬರೆಯಲಾಗುತ್ತದೆ. ನೀರಲ್ಲಿ ಮುಳುಗಿದವರು ಮತ್ತೆ ಬದುಕಿ ಬರಲಿಲ್ಲ ಎಂಬ ಅರ್ಥದಲ್ಲಿ ಹಾಗೆ ಬಳಸಲಾಗುತ್ತದೆ ಎಂಬ ವಿವರಣೆ ನೀಡಲಾಗಿತ್ತು.

-ವಿಶ್ವೇಶ್ವರಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement