ಬೇಕೆ ಹೊಗೆ ಉಗುಳುವ ಮಾರ್ಕೋಪೋಲೊ?
ಹಿಂದಿನ ಬಿ.ಜೆ.ಪಿ. ಸರ್ಕಾರ ವಿದೇಶದಲ್ಲಿ ತಿರಸ್ಕರಿಸಲ್ಪಟ್ಟಿದ್ದಂತಹ ಮಾರ್ಕೋಪೋಲೊ ಎನ್ನುವ ಬಸ್ಗಳನ್ನು ಖರೀದಿಸಿ, ಬೆಂಗಳೂರು ನಗರದಲ್ಲಿ ಬಿ.ಎಂ.ಟಿ.ಸಿ. ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. ಮೊದಲೇ ಬೆಂಗಳೂರು ವಾಯುಮಾಲಿನ್ಯದಿಂದ ಮತ್ತು ಕಸದ ಸಮಸ್ಯೆಯಿಂದ ಪರಿತಪಿಸುತ್ತಿದೆ. ಇದರ ಜೊತೆಗೆ ಮಾರ್ಕೋಪೋಲೊ ಬಸ್ ಉಗುಳುವಂತಹ ಹೊಗೆ ಹತ್ತಾರು ವರ್ಷಗಳ ಹಿಂದೆ ಸೀಮೆಎಣ್ಣೆ ಗಾಡಿಗಳ ನೆನಪನ್ನು ತರಿಸುತ್ತದೆ. ಈ ಬಸ್ಗಳು ಉಗುಳುವಂತಹ ಹೊಗೆಯಿಂದ ಇದರ ಹಿಂದೆ ಹೋಗುವಂತಹ ವಾಹನ ಸವಾರರ ಮುಖ, ಬಟ್ಟೆ ಎಲ್ಲವೂ ಕಪ್ಪಾಗುತ್ತದೆ ಮತ್ತು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದುದರಿಂದ ಮಾನ್ಯ ಸಾರಿಗೆ ಸಚಿವರು ಈ ಬಸ್ಸಿನಿಂದ ಆಗುತ್ತಿರುವ ತೊಂದರೆಯನ್ನು ತಾವೇ ಒಮ್ಮೆ ಖುದ್ದಾಗಿ ಪರಿಶೀಲಿಸಿ ಕೂಡಲೇ ಇವುಗಳ ಓಡಾಟವನ್ನು ನಿಷೇಧಿಸಬೇಕೆಂದು ಕೋರಿಕೊಳ್ಳುತ್ತೇನೆ.
-ಕೆ.ಎಸ್. ನಾಗರಾಜ್, ಬೆಂಗಳೂರು
ಬೆಂಗಳೂರು ಸುತ್ತ ಹೊರವರ್ತುಲ ರಸ್ತೆ
ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರಾದ ಹೆಚ್.ಸಿ. ಮಹದೇವಪ್ಪನವರು ಬೆಂಗಳೂರು ಹೊರವಲಯದ ಉಪನಗರ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ದಾಬಸ್ಪೇಟೆ-ದೊಡ್ಡಬಳ್ಳಾಪುರ-ದೇವನಹಳ್ಳಿ-ಹೊಸಕೋಟೆ-ಸರ್ಜಾಪುರ-ಆನೇಕಲ್-ಕನಕಪುರ-ಮಾಗಡಿ -ನೆಲಮಂಗಲ ಈ ನಗರಗಳ ಮೂಲಕ ಬೆಂಗಳೂರು ಸುತ್ತ ಹೊರವರ್ತುಲ ರಸ್ತೆ ನಿರ್ಮಾಣ ಮಾಡುವ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿರುವುದು ವರದಿಯಾಗಿದೆ. ಈ ಕ್ರಮದಿಂದ ಸರಕು ಸಾಗಣೆಯ ಭಾರಿ ವಾಹನಗಳು ನಗರ ಪ್ರವೇಶಿಸದೇ ಹೊರಭಾಗದಲ್ಲಿಯೇ ಸಂಚರಿಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಅದರಂತೆ ಉದ್ದೇಶಿತ ಮಾರ್ಗವು ಈ ಮೇಲಿನ ನಗರಗಳ ಯಾವ ಯಾವ ಪ್ರದೇಶದಲ್ಲಿ ಹಾದು ಹೋಗುತ್ತದೆ ಎಂಬುದನ್ನು ಈಗಲೇ ತಾತ್ಕಾಲಿಕ ಅಧಿಸೂಚನೆಯನ್ನು ಪ್ರಕಟಿಸಿ ಈ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಮುಂದೆ ಕಡಿವಾಣ ಹಾಕಿದಂತೆ ಆಗುತ್ತದೆ. ಇದರಿಂದ ಮುಂದೆ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸಿದಂತೆ ಆಗುತ್ತದೆ.
-ಜಿ.ಸಿದ್ದಗಂಗಯ್ಯ, ಬೆಂಗಳೂರು
ಕೊಳೆರೋಗಕ್ಕೆ ಶೀಘ್ರ ಪರಿಹಾರ ಕೊಡಿ
ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ರೈತರ ಅಡಿಕೆ ಬೆಳೆಗೆ ಬಂದ ಹಿಡಿಮುಂಡಿಗೆ ಹಾಗೂ ಕೊಳೆರೋಗಕ್ಕೆ ತುತ್ತಾಗಿ ಅಡಿಕೆ ಮರಗಳಿಂದ ರಾಶಿಗಟ್ಟಲೆ ಅಡಿಕೆ ಹರಳು ಉದುರಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡ ಸರ್ಕಾರ ರೈತರಿಗೆ ಪರಿಹಾರ ಘೋಷಿಸಿದರೂ, ಕೆಲವೇ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಿದ್ದು ಉಳಿದ ತಾಲ್ಲೂಕುಗಳಲ್ಲಿ ಭದ್ರಾವತಿ, ಶಿವಮೊಗ್ಗದಲ್ಲಿ ರೋಗ ಸಮೀಕ್ಷೆ ನಡೆಸಿಲ್ಲ. ಈ ಭಾಗದ ರೈತರಿಗೆ ಯಾವ ಪರಿಹಾರವೂ ದೊರಕಿರುವುದಿಲ್ಲ. ಇದಕ್ಕೆ ಕಾರಣವಾಗಿ ಸಂಬಂಧಿಸಿದ ತೋಟಗಾರಿಕೆ ಇಲಾಖೆಯವರ ಸರಿಯಾದ ವರದಿ ಅಭಾವದಿಂದಾಗಿ ಸರ್ಕಾರದ ಪರಿಹಾರ ಘೋಷಣೆ ಅತಂತ್ರವಾಗಿದೆ. ಈಗಲಾದರೂ ಸಂಬಂಧಪಟ್ಟ ಸಚಿವರು ಮತ್ತು ಇಲಾಖೆ ಉನ್ನತಾಧಿಕಾರಿಗಳು ಗಮನ ಹರಿಸಿ ರೈತರಿಗೆ ಪರಿಹಾರ ಒದಗಿಸುವಲ್ಲಿ ನೆರವಾಗುತ್ತಾರೆಂದು ನಂಬೋಣವೆ?
-ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಮಹಿಳಾ ಮೀಸಲು ಪಕ್ಷದಲ್ಲೇಕಿಲ್ಲ?
ಮಹಿಳಾ ಮೀಸಲಾತಿಯನ್ನು ಮುಜರಾಯಿ ಇಲಾಖೆಗೆ, ಅದರಲ್ಲೂ ಅರ್ಚಕರ ನೇಮಕಾತಿಗೆ ವಿಸ್ತರಿಸುವ ಯೋಜನೆಯನ್ನು ಯೋಚಿಸುವ ಮುನ್ನ ಈ ಮೀಸಲಾತಿಯನ್ನು ಅವರ ಪಕ್ಷದ ಟಿಕೆಟ್ ಹಂಚಿಕೆಗೆ ಏಕೆ ವಿಸ್ತರಿಸಬಾರದು? ಭಾಷಣ ಬೀಗುವುದು ಹಾಗು ಉಪದೇಶ ಕೊಡುವುದು ಸುಲಭ. ಮೊದಲು ಅದನ್ನು ನಿಮ್ಮ ಪಕ್ಷದಲ್ಲಿ ಅಳವಡಿಸಿಕೊಂಡು ನಂತರ ಬೇರೆಯದಕ್ಕೆ ವಿಸ್ತರಿಸಿ.
-ಅರ್ಕನಾಥ ಶಾಸ್ತ್ರಿ, ಅಮೆರಿಕ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com