ಸೋಲು ಗೆಲುವಿನ ಮೆಟ್ಟಿಲಾಗುವುದು ಹೇಗೆ?
ಅರುಣ್ ಪಂಡಿತ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂಬ ಉತ್ಕಟೇಚ್ಛೆ ಹೊಂದಿದ್ದ. ಹೀಗಾಗಿ ಅವನು ಸೇರಿದ್ದು ಹಿಮಾಚಲ ಪ್ರದೇಶದ ಸುಜನ್ ಪುರದ ಸೈನಿಕ ಶಾಲೆಗೆ. ಆದರೆ ಅವನ ದುರಾದೃಷ್ಟ, 12ನೇ ತರಗತಿಯ ಪರೀಕ್ಷೆಯ ಸಮಯದಲ್ಲಿ ಒಂದು ರೀತಿಯ ಊತ ಅವನ ದೇಹದಲ್ಲಿ ಕಾಣಿಸಿಕೊಂಡಿತು. ಅದಕ್ಕಾಗಿ ಆಸ್ಪತ್ರೆ ಸೇರಬೇಕಾಯಿತು. ಇದರಿಂದ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಅಂತೂ ಕೊನೆಗೆ ಎನ್.ಡಿ.ಎ.ಗೆ ಸೇರಿದನಾದರೂ ಅಲ್ಲಿ ಮೂರು ಬಾರಿ ನಪಾಸಾದ. ನಂತರ ಇಂಜಿನಿಯರಿಂಗ್ ಪದವಿ ಪ್ರವೇಶ ಪರೀಕ್ಷೆ ತೆಗೆದುಕೊಂಡ. ಅಲ್ಲಿಯೂ ಅವನಿಗೆ ಸೋಲೇ ಕಟ್ಟಿಟ್ಟ ಬುತ್ತಿಯಾಯಿತು. ಇದು ಅವನ ಮನೋಬಲವನ್ನು ಕುಗ್ಗಿಸಿತಲ್ಲದೆ, ಜೀವನದಲ್ಲಿ ತಾನು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ. ಅವನ ಸಹಪಾಠಿಗಳಾಗಿದ್ದವರು ಆಗಲೇ ಚೆನ್ನಾಗಿ ಓದಿ, ಜೀವನದಲ್ಲಿ ನೆಲೆ ನಿಂತಿದ್ದರು. ಮನೆಯವರ ಮೂದಲಿಕೆ, ಬಂಧುಗಳ ನಿಕೃಷ್ಟತೆ, ಸಮಾಜದಲ್ಲಿ ಮನ್ನಣೆ ಇಲ್ಲದಿರುವುದು ಇವೆಲ್ಲ ಅವನನ್ನು ಆತ್ಮಹತ್ಯಗೆ ಪ್ರೋತ್ಸಾಹಿಸಿದವು. ಒಂದು ದಿನ ತನ್ನ ಜೀವನವನ್ನು ಕೊನೆಗೊಳಿಸಬೇಕೆಂದು ನಿರ್ಧರಿಸಿದಾಗ ಅಚಾನಕ್ ಆಗಿ ಅವನಿಗೊಂದು ಎಸ್ಸೆಮ್ಮೆಸ್ ಬಂತು. ಅದು ಹೀಗಿತ್ತು, "ಪಾದಗಳೇ ಇಲ್ಲದ ವ್ಯಕ್ತಿಯನ್ನು ನೋಡುವವರೆಗೆ ನನಗೆ ಪಾದರಕ್ಷೆ ಇಲ್ಲವೆಂದು ರೋಧಿಸುತ್ತಿದ್ದೆ. ಈ ವಿಶ್ವವನ್ನೇ ಸವಾಲಾಗಿ ಸ್ವೀಕರಿಸು, ಆಗ ನೋಡು". ಆ ಸಂದೇಶವನ್ನು ಅದನ್ನು ಹಲವಾರು ಬಾರಿ ಓದಿದಾಗ ಹೌದು ತಾನು ಅನಕ್ಷರಸ್ಥನಿಗಿಂತ ಅದೆಷ್ಟೋ ಮೇಲು ಎನಿಸಿತು. ಕೇವಲ ಸರ್ಕಾರಿ ನೌಕರಿಯೊಂದೇ ಜೀವನದ ಗುರಿಯಲ್ಲ ಎಂದು ಆತನಿಗೆ ಮನದಟ್ಟಾಯಿತು. ಬದುಕಲು ನೂರಾರು ಮಾರ್ಗಗಳಿವೆ ಎಂಬ ಅರಿವಾಯಿತು. ತನ್ನ ಗೆಳೆಯನಿಂದ ಬಂದ ಈ ಒಂದು ಸಂದೇಶ ಅವನ ಜೀವನವನ್ನೇ ಬದಲಾಯಿಸಿತು. 25ರ ತರುಣ ಅರುಣನ ಜೀವನದ ಉದ್ದೇಶ, ಸೋಲನ್ನು ಗೆಲ್ಲುವುದೇ ಆಗಿತ್ತು. ಅರುಣ್ ಆರಿಸಿಕೊಂಡ ಉದ್ಯೋಗವೆಂದರೆ, ಎಸ್ಸೆಮ್ಮೆಸ್ ಗುಂಪೊಂದನ್ನು ರಚಿಸಿದ್ದು. ಅದಕ್ಕಾಗಿ ಒಂದು ವೆಬ್ತಾಣವನ್ನೇ ಸ್ಥಾಪಿಸಿದ್ದು. ಇಂದು ಅದೆಷ್ಟು ಪ್ರಸಿದ್ಧವಾಗಿದೆಯೆಂದರೆ, ಯಾರಿಗಾದರೂ ಹತಾಶೆ, ನಿರಾಶೆ ಉಂಟಾದರೆ ಈ ತಾಣದಲ್ಲಿ ಅಂತಹವರಿಗೆ ಸಮಾಧಾನ ದೊರಕುತ್ತದೆ. ಅದರಲ್ಲಿ ಅನೇಕ ಸ್ಫೂರ್ತಿದಾಯಕ ಕಥೆಗಳಿವೆ, ಯಶಸ್ಸನ್ನು ಪಡೆದ ವ್ಯಕ್ತಿಗಳ ಸಂದರ್ಶನಗಳು, ಸ್ಫೂರ್ತಿ ನೀಡುವ ಕವಿತೆಗಳು, ಸಂದೇಶಗಳು, ಮನೋ ವೈಜ್ಞಾನಿಕ ಪರೀಕ್ಷೆಗಳು, ಬುದ್ಧಿ ಸಾಮರ್ಥ್ಯವನ್ನಳೆಯುವ ವಿಧಾನಗಳು ಮತ್ತು ವಿಶ್ಲೇಷಣೆ, ನಗರ ಮತ್ತು ಗ್ರಾಮೀಣ ಪ್ರತಿಭೆಗಳೊಡನೆ ನಡೆಸಿದ ಸಂದರ್ಶನಗಳು - ಹೀಗೆ ಹತ್ತು ಹಲವಾರು ಉಪಯುಕ್ತ ಮಾಹಿತಿಗಳು ಇಲ್ಲಿವೆ. ಇಂದು ಅರುಣ್ ಇಡೀ ವಿಶ್ವಕ್ಕೇ ಪರಿಚಿತರಾಗಿದ್ದಾರೆ. ಅನೇಕ ಪ್ರಶಸ್ತಿ ಮತ್ತು ಪಾರಿತೋಷಕಗಳನ್ನು ಪಡೆದಿದ್ದಾರೆ. ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ನಿಂದ ಪ್ರತಿಷ್ಠಿತ ಸಂಶೋಧನಾ ಪ್ರಶಸ್ತಿ, ಮೈಕ್ರೋಸಾಫ್ಟ್ನಿಂದ ಸಂದರ್ಶನ, ಟಾಟಾನೆನ್ ಫಾಸ್ಟ್ ಡಾಟ್ ಪ್ರಶಸ್ತಿ, ಲೆವೀಸ್ ಫೆಲೋಷಿಪ್ ಪಡೆದಿದ್ದಾರೆ. ಅಲ್ಲದೆ, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ.
ಹೀಗೆ ಜೀವನದಲ್ಲಿ ಸಾಧನೆ ಮಾಡಲು ಯಾವ ಡಿಗ್ರಿಯಾಗಲೀ, ಗಾಡ್ ಫಾದರ್ ಆಗಲೀ, ವಶೀಲಿಯಾಗಲೀ ಬೇಕಾಗಿಲ್ಲ. ಬೇಕಾಗಿರುವುದು ದೃಢ ಸಂಕಲ್ಪ. ನೀವೂ ಒಮ್ಮೆ ಅರುಣ್ ಅವರ ಜಾಲತಾಣ http://dontgiveupworld.com/ ಗೆ ಭೇಟಿ ನೀಡಿ, ಅನುಭವ ಪಡೆಯಿರಿ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.