ತಪ್ಪಾಯ್ತು ತಿದ್ಕೋತೀವಿ
ವೀಣಾ ಭಟ್ ಅವರು ಬರೆಯುತ್ತಾರೆ- 'ತಪ್ಪನ್ನು ತಪ್ಪು ಅಂದ್ರೆ ತಪ್ಪಲ್ಲ. ತಪ್ಪು ಮಾಡದೆ ತಪ್ಪು ಒಪ್ಪಿಕೊಂಡರೆ ತಪ್ಪಲ್ವಾ? ಶೃಂಗಾರ ರಸ ತಪ್ಪು ಅರ್ಥದಲ್ಲಿ ಸನ್ನುಡಿಯಲ್ಲಿ ಬಂದಿದೆ ಅಂತ ಅಂದುಕೊಂಡು ತಪ್ಪಾಯ್ತು ಅಂತ ಒಪ್ಪಿಕೊಂಡಿದೀರ. ನನಗೆ ಇದು ತಪ್ಪು ಅನ್ನಿಸಲಿಲ್ಲ. ಇದು ತಪ್ಪೇ ಅಲ್ಲ. ಕನ್ನಡ ರತ್ನಕೋಶ, ಕನ್ನಡ ಸಾಹಿತ್ಯ ಪರಿಷತ್ತು (ಪರಿಷ್ಕೃತದಲ್ಲಿ) ಕೂಡಾ ನೋಡಿದೆ. ಶೃಂಗಾರ ಪದಕ್ಕೆ ಹಲವು ಅರ್ಥಗಳಿವೆ.'
'ಪುಟ 5, 1 ನವರಸಗಳಲ್ಲಿ ಒಂದು, ಅಲಂಕಾರ, ಪ್ರಣಯ. ಸನ್ನುಡಿಯಲ್ಲಿ ಅಲಂಕಾರ ಎಂಬ ಅರ್ಥದಲ್ಲಿ ಬಳಸಲಾಗಿದೆ. ಶೃಂಗಾರ-ಸಿಂಗಾರ-ತತ್ಸಮ-ತಧ್ಬವ ಹೀಗೂ ಇದೆ. ಶಾಲೆಯಲ್ಲಿ ಕಲಿತ ವ್ಯಾಕರಣ, ನನ್ನ ನೆನಪಿನ ಪ್ರಕಾರ. ಹೈಸ್ಕೂಲ್ ಹುಡುಗಿ ಪತ್ರ ಬರೆದದ್ದನ್ನು ನಾನೂ ಕೂಡಾ ಅಪ್ರಿಶಿಯೇಟ್ ಮಾಡ್ತೀನಿ' ಎಂದಿದ್ದಾರೆ.
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಅ.15ರಂದು 'ಬೈಟು ಕಾಫಿ' ಮುಖಪುಟದ 'ತಬಾಲಾ'ದ ಎಚ್.ಪಿ.ಬಾಲಸುಬ್ರಮಣ್ಯಮ್‌ರವರ ಬಗ್ಗೆ ಪ್ರಶ್ನೆ: ಸಂಗೀತ ಕ್ಷೇತ್ರದಲ್ಲಿ ನಿಮ್ಮ ಮೊದಲ ಹೆಜ್ಜೆ? ಉತ್ತರದಲ್ಲಿ 1960ರಲ್ಲಿ ನನಗೆ 20ರ ಹರೆಯ ಎಂದಿದ್ದಾರೆ..
ಪ್ರಶ್ನೆ: ಸಂಗೀತ ಕ್ಷೇತ್ರದಲ್ಲಿ ನಿಮ್ಮ ಅನುಭವದ ಬಗ್ಗೆ ಹೇಳಿ... ಉತ್ತರದಲ್ಲಿ ನನಗೀಗ 58 ವರ್ಷ ಎಂದಿದ್ದಾರೆ.. ಅದು ಹೇಗೆ?'
'ಅ.19ರ 'ಬೈಟು ಕಾಫಿ'ಯಲ್ಲಿ 'ನಿಶ್ಶಬ್ದ' 'ತಿರುಗಿ ಬಂದ ಟ್ರಂಕು' ಅಂಕಣದ (ಪುಟ4) ಕೊನೆಯ ಪ್ಯಾರಾದಲ್ಲಿ 'ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಮೃತಳ ಮೈಮೆಲಿದ್ದ ಒಡವೆಗಳನ್ನು ಅಮಾನತು ಪಡಿಸಿಕೊಂಡರು' ಎಂದಿದೆ. ಪ್ರಾಯಶಃ ಅದು 'ಅನಾಮತ್' ಎಂದಾಗಬೇಕಿತ್ತಲ್ಲವೇ?'
'ಅ.19ರಂದು ಪುಟ2ರಲ್ಲಿ 'ಬಸ್ ನಡುವೆ ಸಿಲುಕಿ ಮೆಕ್ಯಾನಿಕ್ ಸಾವು' ಎಂಬ ವರದಿಯಲ್ಲಿ 'ಗುರುವಾರ ರಾತ್ರಿ 2.30ರ ಸುಮಾರಿಗೆ ಬಸ್‌ಗೆ ಡೀಸಲ್ ತುಂಬಿಸಿ ಎಂಜಿನ್ ಚಾಲನೆಯಲ್ಲಿ ನಿಲ್ಲಿಸಿದ್ದರು' ಎಂದಿದೆ. ಇಲ್ಲಿ ರಾತ್ರಿ 2.30ರ ಬದಲು ಗುರುವಾರ ಬೆಳಗಿನ ಜಾವ 2.30ರ ಸುಮಾರಿಗೆ ಎಂದು ನಮೂದಿಸಬೇಕಿತ್ತು. ಇಂದಿನ ದಿನಗಳಲ್ಲಿ ಬಹುತೇಕ ಮಾಧ್ಯಮಗಳು 'ಬೆಳಗಿನ ಜಾವ' ಅಥವಾ 'ಮುಂಜಾನೆ' ಪದದ ಬದಲು 'ರಾತ್ರಿ' ಪದ ಬಳಸುತ್ತಿದ್ದಾರೆ.'
'ಪುಟ4ರಲ್ಲಿ 'ವರ್ಷದೊಳಗೆ ಮೆಟ್ರೋಸುರಂಗ ಪೂರ್ಣ' ವರದಿಯ ಕಿರು ಅಂಕಣದಲ್ಲಿ 'ಪೀಣ್ಯದಿಂದ ಹೆಸರಘಟ್ಟಕ್ಕೆ' ಎಂಬ ಕಿರುವರದಿ ಇದೆ. ಆದರೆ ಪ್ರಸ್ತುತ ಯೋಜನೆ ಇರುವುದು ಹೆಸರಘಟ್ಟ ಕ್ರಾಸ್‌ವರೆಗೆ (8ನೇ ಮೈಲಿಗಲ್ಲು) ಮಾತ್ರ. ಈಗಿರುವ ಯೋಜನೆಯೇ ಮೀನಾಮೇಷ ಎನ್ನುತ್ತಿದೆ. ಇನ್ನು ಹೆಸರಘಟ್ಟದವರೆಗೆ ಮಾ. 14ರೊಳಗೆ ಎಂದಾದರೆ ಇದು ಪವಾಡವೇ ಸರಿ' ಎಂದಿದ್ದಾರೆ.
ಮುಂಜಾನೆ ಅಂದರೆ ಬೆಳಿಗ್ಗೆ. ತುಂಬ ತಾಂತ್ರಿಕವಾಗಿ ಯೋಚಿಸಿದರೆ ಮಧ್ಯರಾತ್ರಿ 12ರ ನಂತರ ಮರುದಿನವಾಗಿಬಿಡುತ್ತದೆ. ಆದರೆ ಸಾಮಾನ್ಯವಾಗಿ ಬೆಳಗ್ಗಿನ ಜಾವ 4-4:30ರ ವರೆಗೆ ಅದನ್ನು ರಾತ್ರಿ ಎಂದೇಪರಿಗಣಿಸಲಾಗುತ್ತದೆ. ಬೆಳಗಿನ ಜಾವವನ್ನು ಮುಂಜಾವ ಎಂದು ಕರೆಯಬುಹುದು. ಆದ್ದರಿಂದ ರಾತ್ರಿ 2:30ರ ಸುಮಾರಿಗೆ ಎಂದು ಬರೆದಿದ್ದು ಖಂಡಿತ ತಪ್ಪಲ್ಲ.
ವಿಶ್ವೇಶ್ವರ ಭಟ್