ಸಿ.ಇ.ಟಿ. ಮಾಡ್ರಿ...
ಎಸ್ಡಿಎ, ಎಫ್ಡಿಎ, ಪ್ರಾಥಮಿಕ ಶಾಲಾ ಶಿಕ್ಷಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ, ಪೊಲೀಸ್, ಪಿಎಸ್ಐ, ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ ಹೀಗೆ ಎಲ್ಲದಕ್ಕೂ ಸಿ.ಇ.ಟಿ. ಮೂಲಕ ನೇಮಕಾತಿ ನಡೆಯುತ್ತೆ. ಆದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ನೇಮಕಾತಿ ಮಾತ್ರ ನೇರ ನೇಮಕಾತಿ ನಡೆಯುತ್ತೆ. ಅದೂ ಸಂದರ್ಶನದ ಮೂಲಕ. ಯಾಕಂದ್ರೆ ಅಲ್ಲಿ ನೇರವಾಗಿ ಅಕ್ರಮ ಮಾಡಬಹುದು. ಕಳೆದ ಭಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಲು ಒಬ್ಬೊಬ್ಬ ಅಭ್ಯರ್ಥಿ 20 ರಿಂದ 30 ಲಕ್ಷ ಹಣಕೊಟ್ಟು ಉದ್ಯೋಗ ಪಡೆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬಡ ಅಭ್ಯರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಲು ಇವತ್ತು ಸಾಧ್ಯವೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಉನ್ನತ ಶಿಕ್ಷಣ ಸಚಿವರೆ... ನಮ್ಮಂತಹ ಬಡ ಉದ್ಯೋಗಾಕಾಂಕ್ಷಿಗಳು ಉದ್ಧಾರ ಆಗಬೇಕಾದ್ರೆ ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿಯಂತೆ ಬರೀ ಸಿ.ಇ.ಟಿ.ಯೊಂದನ್ನೆ ಆಯ್ಕೆಯ ಮಾನದಂಡವನ್ನಾಗಿ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡಿ. ಕೆ.ಪಿ.ಎಸ್.ಸಿಯನ್ನು ನಾವು ಯಾರೂ ನಂಬೋದಿಲ್ಲ ಸ್ವಾಮಿ. ಕ್ಲರ್ಕ್ ಹುದ್ದೆಯಿಂದ ಹಿಡಿದು ಕೆ.ಎ.ಎಸ್. ನೇಮಕದವರೆಗೂ ಅದರ ಇತಿಹಾಸದ ತುಂಬಾ ಬರೀ ಅಕ್ರಮಗಳೇ. ದಯಮಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ನೇಮಕಾತಿಯನ್ನು ಕೆ.ಪಿ.ಎಸ್.ಸಿ.ಗೆ ಕೊಡದೆ, ಸಿ.ಇ.ಟಿ. ಮೂಲಕವೇ ಆಯ್ಕೆ ಮಾಡಿ. ಯಾಕಂದ್ರೆ ಎಲ್ಲಿ ಸಂದರ್ಶನವಿದೆಯೋ ಅಲ್ಲಿ ಅಕ್ರಮಗಳು ನಡೆಯುತ್ತವೆ ಅಂತ ನಮಗೆ ಕೆ.ಪಿ.ಎಸ್.ಸಿ. ಹುಟ್ಟಿದಾಗಿನಿಂದ ಗೊತ್ತು. ಬರೀ ಸಿಇಟಿ ಮೂಲಕ ಆಯ್ಕೆ ನಡೆಸಿದರೂ ಸಾಲದು, ಪ್ರಶ್ನೆ ಪತ್ರಿಕೆ ಬಯಲಾಗದಂತೆ ನೋಡಿಕೊಳ್ಳಿ. ಏಕೆಂದರೆ ಈ ಹಿಂದೆ ಪಿಎಸ್ಐ, ಪಿಡಿಒ, ಎಫ್ಡಿಎ, ಎಸ್ಡಿಎ ಪ್ರಶ್ನೆ ಪತ್ರಿಕೆಗಳು ವಾರದ ಮುಂಚೆಯೇ 15 ರಿಂದ 20 ಲಕ್ಷಕ್ಕೆ ಬಿಕರಿಯಾದ ವಿದ್ಯಮಾನ ನಮ್ಮ ಕಣ್ಣೆದುರಿಗೆ ಇದೆ.
ಇತ್ತೀಚೆಗೆ ತಾವು ಧಾರವಾಡದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ 431 ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ನೇಮಕಾತಿ ಕುರಿತಂತೆ ಸಿಇಟಿ ಮೂಲಕ ನೇಮಕ ಮಾಡುವ ಕುರಿತು ಏನನ್ನು ಪ್ರಸ್ತಾಪಿಸಿಲ್ಲ. ಆದರೆ ಈ ಹಿಂದೆ ತಾವು ಸಿಇಟಿ ಮೂಲಕ ಆಯ್ಕೆ ಮಾಡಲು ನಿಯಮಾವಳಿಗಳನ್ನು ರೂಪಿಸುವುದಾಗಿ ಭರವಸೆ ನೀಡಿದ್ದಿರಿ. ಆದರೆ ಈಗ ಅದರ ಬಗ್ಗೆ ಮಾತನಾಡದಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ದಯವಿಟ್ಟು ನಮಗೆ ಸ್ಪಷ್ಟನೆ ನೀಡಬೇಕಾಗಿ ವಿನಂತಿ. ಆಯ್ಕೆಯ ಪ್ರಕ್ರಿಯೆ ತಡವಾಗಿಯಾದರೂ ಪರವಾಗಿಲ್ಲ, ಸಿಇಟಿ ಮೂಲಕವೇ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ನೇಮಕಾತಿ ನಡೆಯಲಿ ಎಂಬುದು ನಮ್ಮಂತಹ ನೂರಾರು ಬಡ ಅಭ್ಯರ್ಥಿಗಳ ಕನಸು. ದಯವಿಟ್ಟು ಸ್ಪಷ್ಟನೆ ನೀಡುತ್ತೀರೆಂಬ ಭರವಸೆಯಲ್ಲಿದ್ದೇವೆ.
-ವೀರೇಂದ್ರಪಾಟೀಲ್ ದೇಸಾಯಿ, ಗಬ್ಬೂರು
ಅಶ್ಲೀಲಕ್ಕಿಲ್ಲವೇ ಕಡಿವಾಣ?
ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಚರಿಸುವಾಗ ಕೆಟ್ಟ ಕುತೂಹಲದಿಂದ ಅಕ್ಕಪಕ್ಕದ ಗೋಡೆಗಳ ಸಿನೆಮಾ ಜಾಹೀರಾತುಗಳನ್ನು ಗಮನಿಸಿದೆ. ಏನಾಶ್ಚರ್ಯ! ಶೇಕಡಾ 60ರಷ್ಟು ವಾತ್ಸಾಯನನ ಬೆಂಬಲಿಗರದ್ದೇ!
"ಕಾಮಸ್ತ್ರೀ, "ಬ್ಲೂಮೂನ್", "ಸಿಲ್ಕ್-ಸಕತ್ ಹಾಟ್-ಮಗಾ", ಉಮೇಶ್, ಕಾಮಿನಿ, ಖತರ್ನಾಕ್, ಇವೆಲ್ಲ ಕನ್ನಡದದ್ದಾರೆ, ಉಳಿದವು; ನಿರ್ದೋಶಿ (ತೆ), ಸೂಪರ್ ಮಾಡೆಲ್ (ಹಿಂ), ದಿ ಡರ್ಟಿ ರಿಲೇಷನ್ (ಹಿಂ). ಒಂದೆರಡಲ್ಲ-ಸಾಲು ಸಾಲು ಚಿತ್ರಗಳು, ಈ ಎಲ್ಲ ಚಿತ್ರಗಳ ಜಾಹೀರಾತಿನಲ್ಲಿಯೂ ಹೆಣ್ಣಿನ ಅಂಗಾಂಗ ಪ್ರದರ್ಶನವೇ ಮುಖ್ಯ. ಹೆಂಗಳೆಯರು, ಕುಟುಂಬದ ಸಮೇತ ಪಕ್ಕದಲ್ಲಿ ಸಾಗಲಾಗದ ದುಸ್ಥಿತಿ. ಪೋಸ್ಟರ್ ನೋಡುತ್ತಾ ವಾಹನ ಚಲಿಸಿ ಅಪಘಾತ ಮಾಡುವ ಚಾಲಕರು ಒಂದೆಡೆ. ಈ ಮಾದರಿ ಪೋಸ್ಟರ್ಗಳಿಗೆ ಹಾಗೂ ಚಿತ್ರಗಳಿಗೆ ಕಡಿವಾಣವೇ ಇಲ್ಲವೇ? ಸೆನ್ಸಾರ್ ಸತ್ತಿದೆಯೇ? "ಸಂಸ್ಕಾರ, ಹಂಸಗೀತೆ, ಬಂಗಾರದ ಮನುಷ್ಯ" ಕಂಡ ನಾಡಿನಲ್ಲಿ ಎಂಥೆಂಥವರ ಅಬ್ಬರ?
-ಕೆ. ಆದಿತ್ಯ ಹೆಬ್ಬಾರ್, ಹರಪನಹಳ್ಳಿ, ದಾವಣಗೆರೆ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.