ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹಾದಿ-ಬೀದಿ ಜಗಳ ಬೇಡ

Srinivasa Murthy VN
Updated On : 22 Oct 2013, 10:10 am

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವೆ "ಲೂಟಿಯ ಆರೋಪ ಕುರಿತು ಈಗ ನಡೆದಿರುವ ವಾಗ್ವಾದವನ್ನು ಬೀದಿ ಜಗಳದಲ್ಲಿನ ಮಾತುಗಳ ವಿನಿಮಯಕ್ಕೆ ಹೋಲಿಸದೇ ಇರಲು ಬೇರೆ ಹೋಲಿಕೆಯೇ ಇಲ್ಲ.
ಸಿದ್ದರಾಮಯ್ಯ ಅವರು ಶಿವಮೊಗ್ಗದ ಒಂದು ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ - ಈಶ್ವರಪ್ಪ ಅವರಿಬ್ಬರೂ ಹಣವನ್ನು ಲೂಟಿ ಮಾಡಿ ಅಭಿವೃದ್ಧಿ ಕೆಲಸಗಳನ್ನು ನಿರ್ಲಕ್ಷಿಸಿದರೆಂದು ಆರೋಪಿಸಿದ್ದು, ಅದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಕುರಿತು ಬಹಿರಂಗವಾಗಿ ಅವಹೇಳನಕರವಾದ ಮಾತುಗಳನ್ನು ಆಡಿದ್ದು, ಎರಡೂ ಖಂಡನೆಗೆ ಅರ್ಹ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ದಂಡಧಾರಿ. ಜನತಾಂತ್ರಿಕ ವ್ಯವಸ್ಥೆಯಲ್ಲಿ ದಂಡಧಾರಿಗಳು ಸಂಯಮದಿಂದ ವರ್ತಿಸಬೇಕು. ಯಾರಾದರೂ ಸರ್ಕಾರದ ಹಣವನ್ನು ಲೂಟಿ ಮಾಡಿದ್ದರೆ, ಅಂತವರನ್ನು ಪತ್ತೆ ಹಚ್ಚಿ ಕಾಯಿದೆಯ ನಿಯಮಗಳಂತೆ ಶಿಕ್ಷಿಸುವ ಅಧಿಕಾರವಿರುವ ಮುಖ್ಯಮಂತ್ರಿ, ಬಹಿರಂಗವಾಗಿ ನಾಲಗೆಯನ್ನು ಸಡಿಲ ಬಿಡುವುದು ಸರಿಯಲ್ಲ.
ಯಡಿಯೂರಪ್ಪ ಅವರೂ ಎಷ್ಟೇ ಪ್ರಚೋದನೆ ಇದೆ ಎಂದು ಅವರು ಭಾವಿಸಿದ್ದರೂ, ರಾಜ್ಯದ ಮುಖ್ಯಮಂತ್ರಿಯನ್ನು ಹೀನಾಯವಾಗಿ ಅವಹೇಳನ ಮಾಡಿದ್ದೂ ತಪ್ಪು. ಸಿದ್ದರಾಮಯ್ಯ - ಯಡಿಯೂರಪ್ಪ ಅವರಿಬ್ಬರೂ ಸಾಕಷ್ಟು ಅನುಭವ ಇರುವ ಹಿರಿಯ ರಾಜಕಾರಣಿಗಳು. ರಾಜಕೀಯ ಸಂಘರ್ಷವನ್ನು ಬೀದಿ ಜಗಳದ ಮಟ್ಟಕ್ಕೆ ತಂದು ನಿಲ್ಲಿಸುವುದು ಇಬ್ಬರಿಗೂ ಶೋಭೆ ತರುವಂತಹ ವಿಷಯವಲ್ಲ. ಈ ಪ್ರವೃತ್ತಿ ಸಲ್ಲದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement