ಕೋಮು ಹಿಂಸೆಗೆ ಅವಕಾಶವಿಲ್ಲ
ಕೇಂದ್ರ ಸರ್ಕಾರ ಯಾವುದೋ ಕಾಲದಲ್ಲಿ ಸಿದ್ಧಪಡಿಸಿದ್ದ ಕೋಮುವಾರು ಹಿಂಸೆಗೆ ಪ್ರಚೋದನೆಯ ವಿರುದ್ಧದ ಕಾಯಿದೆಯ ಕರಡು ವಿಧೇಯಕ, ಈಗ ಇದ್ದಕ್ಕಿದ್ದಂತೆ ಸರ್ಕಾರದ ಮುಂದೆ ಪ್ರತ್ಯಕ್ಷವಾಗಿರುವಂತಿದೆ.
ಈ ಮಸೂದೆಯ ಪ್ರಮುಖ ಅಂಶಗಳಲ್ಲಿ ಹಿಂಸಾಚಾರವನ್ನು ತಡೆಯುವುದಕ್ಕೆ ಹಾಗೂ ಹಿಂಸಾಚಾರಕ್ಕೆ ನೆರವು ನೀಡಿದವರಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸುವ ಕ್ರಮಗಳು ಗಮನಾರ್ಹ. ಹಿಂಸಾಚಾರಕ್ಕೆ ಮುನ್ನ ದ್ವೇಷ ಪೂರಿತ ಭಾಷಣಗಳಿಂದ ಜನರನ್ನು ಪ್ರಚೋದಿಸುವುದು, ಹಿಂಸಾಚಾರಕ್ಕೆ ಸರಿಸಾಟಿಯಾದ ಅಪರಾಧವಾಗಿ ಪರಿಗಣಿಸುವ ನಿಯಮವಂತೂ ತೀರಾ ಅಗತ್ಯವಾಗಿತ್ತು.
ಆದರೆ 2011 ರಲ್ಲೇ ಪ್ರಕಟವಾಗಿ ಸಾಕಷ್ಟು ಗಮನ ಸೆಳೆದಿದ್ದ ಈ ವಿಧೇಯಕದ ನಿಯಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಇದು ಅಲ್ಪ ಸಂಖ್ಯಾತರಿಗಾಗಿಯೇ ಹೇಳಿ ಮಾಡಿಸಿದಂತಹ ವ್ಯವಸ್ಥೆ ಎನ್ನುವ ಟೀಕೆಯನ್ನು ಸರ್ಕಾರ ಎದುರಿಸಲೇ ಬೇಕಾಗಬಹುದು.
ಸಂತ್ರಸ್ತರಿಗೆ ನ್ಯಾಯವನ್ನು ಬೇಡಿ ಪಡೆಯುವ ಹಕ್ಕಿರಬೇಕು. ಈಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಸರ್ಕಾರಗಳ ಬ್ರಹ್ಮಾಂಡ ಸ್ವರೂಪದ ವೈಫಲ್ಯವನ್ನು ಗಮನಿಸಿದರೆ, ಎಲ್ಲ ಬಗೆಯ ಅವಾಂತರ - ಅನಾಹುತಕ್ಕೂ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಅಧಿಕಾರಸ್ಥ ರಾಜಕಾರಣಿಗಳ ವಿಚಾರದಲ್ಲಿ ಮೃದುವಾದ ಕ್ರಮಗಳನ್ನು ಸಲಹೆ ಮಾಡಿರುವಂತಿದೆ. ಇದು ಅನರ್ಥಕಾರಿ ತಂತ್ರಗಾರಿಕೆ.