ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 24 Oct 2013, 10:57 am

ಬೆಂಗಳೂರಿನಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಅ.15ರ 'ಪತ್ರಪ್ರಭ'ದಲ್ಲಿ ನನ್ನ ಪತ್ರ (ದೇವಕಣ-ದೈವಲೀಲೆ!) ಪ್ರಕಟವಾಗಿದ್ದು, ಅದರಲ್ಲಿ 'ಎಂಗ್ಲರ್ಟ್‌ರಿಗೆ' ಎಂಬ ಪದವಿದೆ. ಈ ಪದವನ್ನು ನಾನು  'ಎಂಗ್ಲೇರ್‌ರಿಗೆ' ಎಂದು ಬರೆದು ಕಳಿಸಿದ್ದೆ. ನಾನು ಬರೆದದ್ದು ಸರಿಯಾದ ರೂಪ. ನೊಬೆಲ್ ಪ್ರಶಸ್ತಿ ವಿಜೇತ ಆ ವಿಜ್ಞಾನಿಯು ಬೆಲ್ಜಿಯಮ್ ದೇಶದವರಾಗಿದ್ದು ಆ ದೇಶದಲ್ಲಿ ಫ್ರೆಂಚ್ ಮತ್ತು ಡಚ್ ಭಾಷೆಗಳು ಬಳಕೆಯಲ್ಲಿವೆ.'
'ಸದರಿ ವಿಜ್ಞಾನಿಯ ಹೆಸರು ಫ್ರೆಂಚ್ ಭಾಷೆಯದಾಗಿದ್ದು, 'ಋಖಆಗಈಕಐಖ ಊಃಎಔಊಖಖಿ' ಎಂಬ ಆ ಹೆಸರನ್ನು ಕನ್ನಡ ಪತ್ರಿಕೆಗಳು ಉಚ್ಚರಿಸುತ್ತಿರುವಂತೆ 'ಫ್ರಾಂಕೋಯಿಸ್ ಎಂಗ್ಲರ್ಟ್‌' ಎಂದು ಉಚ್ಚರಿಸದೆ 'ಫ್ರಾನ್ಸ್‌ವ ಎಂಗ್ಲೇರ್‌' ಎಂದು ಉಚ್ಚರಿಸಬೇಕು. ಫ್ರೆಂಚ್ ಭಾಷೆಯಲ್ಲಿ ಇಂಥ ವಿಚಿತ್ರ ಉಚ್ಚಾರದ (ಅಥವಾ ವಿಚಿತ್ರ ಅಕ್ಷರ ಜೋಡಣೆಯ) ಹೇರಳ ಉದಾಹರಣೆಗಳಿವೆ. ಅಂದ ಹಾಗೆ ನಿಮ್ಮ ಹೆಸರೇನು? ಎಂದು ನೀವು ಅ.6ರ 'ನಂಗೆ ಇಷ್ಟಾನೋ!' ಅಂಕಣದಲ್ಲಿ ಸರಸವಾಗಿ ಬರೆದಿರುವಂತೆ, ಈ ಫ್ರೆಂಚ್ ಭಾಷೆಯ ಉಚ್ಚಾರ ವೈಚಿತ್ರ್ಯವನ್ನೂ ಮುಂದೆಂದಾರೂ ಬರೆಯಲಡ್ಡಿಯಿಲ್ಲ.'
'ಅಂದ ಹಾಗೆ ಕನ್ನಡದ ಪತ್ರಕರ್ತರೆಲ್ಲರಿಗೂ ಪ್ರಪಂಚದ ಸಕಲ ಭಾಷೆಗಳೂ ಗೊತ್ತಿರಬೇಕೆಂದು ನಿರೀಕ್ಷಿಸುವುದು ಮೂರ್ಖತನದ ಪಾರಮ್ಯವೆಂದು ಗೊತ್ತಿದ್ದೂ ನಾನು ಈ ಪದಜಿಜ್ಞಾಸೆಗಿಳಿದದ್ದು 'ಕನ್ನಡಪ್ರಭ' ಓದುಗರ ಗಮನಕ್ಕೆ ವಿಶಿಷ್ಟ ಸಂಗತಿಯನ್ನು ತರುವ ಉದ್ದೇಶದಿಂದ.'
'ಮತ್ತೆ ಅಂದ ಹಾಗೆ ಅ.15ರ 'ತಪ್ಪಾಯ್ತು' ಅಂಕಣದಲ್ಲಿ ಗುರುಮಲ್ಲಪ್ಪ ಅವರು ಕಾಯಕವೇ ಕೈಲಾಸದ ನಿಜದರ್ಶನ ಮಾಡಿಸಿರುವುದನ್ನು (ಈ ಸತ್ಯ ಕತೆ ನನಗೆ ಮೊದಲೇ ಗೊತ್ತಿದ್ದು, ದಶಕಗಳ ಹಿಂದೆಯೇ ಪತ್ರಿಕೆಯೊಂದರಲ್ಲಿ ಈ ಬಗ್ಗೆ ಬರೆದಿದ್ದೆ) ಓದಿದಾಗ ನನಗೆ ನಮ್ಮೂರಿನ ಪುಢಾರಿಯೊಬ್ಬರ ನೆನಪಾಯಿತು. ಯಾರ್ಯಾರ ಹೇಳಿಕೆಗಳನ್ನೆಲ್ಲ (ಕೆಲವೊಮ್ಮೆ ತಮ್ಮವೇ ಆಣಿಮುತ್ತುಗಳನ್ನೂ) ಮಹಾತ್ಮ ಗಾಂಧೀಜಿ ಹೇಳಿದ್ದೆಂದು ಬುರುಡೆ ಬಿಡುತ್ತಿದ್ದ ಆ ಪುಢಾರಿಯು, ಒಮ್ಮೆ ಭಾಷಣವೊಂದರಲ್ಲಿ ಅಂತರ್ಜಾಲದ ಬಗ್ಗೆ ಗಾಂಧೀಜಿ ಹೀಗೆ ಹೇಳಿದ್ದಾರೆ ಎಂದು ಹೇಳಿಕೆಯೊಂದನ್ನು ಒದರಿ ನಗೆಪಾಟಲಿಗೀಡಾಗಿದ್ದರು.'
'ತಮಸೋ ಮಾ ಜ್ಯೋತಿರ್ಗಮಯ' ಎಂಬ ಉಪನಿಷತ್ ಉಕ್ತಿಯನ್ನು ಗೌತಮ ಬುದ್ಧನ ಸೃಷ್ಟಿಯೆಂದು ಹೇಳುತ್ತಿರುವ ವಿದ್ವಾಂಸರೂ ಇದ್ದಾರೆ! ಬುದ್ಧ-ಬಸವ-ಗಾಂಧಿ ಈ ಮೂವರ ಲಕ್ ನೋಡಿ!' ಎಂದಿದ್ದಾರೆ.
ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಅ.13ರಂದು ಮೈಸೂರು ಆವೃತ್ತಿಯ ಪುಟ1ರ 'ಅಂಬಾರಿ ಗಜಪಡೆಗೆ ವಿಶೇಷ ಕುಸುರೆ!' ಶೀರ್ಷಿಕೆಯಲ್ಲಿ ಬಳಸಿದ 'ಕುಸುರೆ' ಪದದ ಬಗ್ಗೆ ನನ್ನ ಆಕ್ಷೇಪವಿದೆ. ಕುಶಲ ಕೈ ಕೆಲಸಗಳಿಂದ ರಚಿಸುವ ಕಲೆಗೆ 'ಕುಸುರಿ ಕಲೆ' ಎನ್ನುತ್ತಾರೆ. 'ಕುಸುರು' ಪದ ಕೂಡ ಇದನ್ನೇ ಹೇಳುತ್ತದೆ. 'ಕುಸುರೆ' ಪ್ರಯೋಗ ಸರಿಯಿಲ್ಲ (ಆಧಾರ: ಕಸಾಪದ ಸಂಕ್ಷಿಪ್ತ ನಿಘಂಟು ಪುಟ 227-1935ರ ಆವೃತ್ತಿ) ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement