ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮತ್ತೆ ಪಂಚಶೀಲದ ನೆನಪು

Srinivasa Murthy VN
Updated On : 24 Oct 2013, 10:56 am

ಸ್ವತಂತ್ರ ಭಾರತ, ಜನತಾ ಚೀನಾಗಳ ನಡುವಣ ಬಾಂಧವ್ಯ ಹಳೆಯದು-ಉಭಯ ರಾಷ್ಟ್ರಗಳ ನಡುವಣ ಜಗಳಗಳೂ ಹಳೆಯವೇ. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹರಲಾಲ ನೆಹರೂ ಅವರಿಗೆ ಚೀನೀ ಜನ ನಾಯಕರಲ್ಲಿ ಬಹುಮಂದಿ ಚಿರಪರಿಚಿತರು.
 ಜನತಾ ಚೀನದ ಮೊದಲ ಪ್ರಧಾನಿ ಚೌಎನ್‌ಲೈ ಅವರು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾಗ, ನೆಹರೂ- ಚೌಎನ್‌ಲೈ ಅವರ ಸಂಯುಕ್ತ ಪ್ರಯತ್ನದಿಂದ ರೂಪಗೊಂಡಿದ್ದು ಪಂಚಶೀಲ ಸೂತ್ರ.
ಆ ಸೂತ್ರವನ್ನು ಉಭಯ ರಾಷ್ಟ್ರಗಳೂ ಸರಿಯಾಗಿ ಅರ್ಥ ಮಾಡಿಕೊಂಡು, ಏಷ್ಯದ ಎರಡು ದೊಡ್ಡ ರಾಷ್ಟ್ರಗಳ ಜನಸಮುದಾಯಗಳ ಹಿತದೃಷ್ಟಿಯಿಂದ ಜಾರಿಗೊಳಿಸಿದ್ದರೆ, ಈಗಿನ ದಿನಗಳ ಷರತ್ತುಬದ್ಧ ಒಪ್ಪಂದಗಳ ಅವಶ್ಯಕತೆಯೇ ಇರುತ್ತಿರಲಿಲ್ಲ.
ಆದರೇನು ಮಾಡುವುದು. ಎರಡು ರಾಷ್ಟ್ರಗಳ ನಡುವೆ ಮೈತ್ರಿಯನ್ನು ಕಳೆದುಕೊಳ್ಳುವುದಕ್ಕೆ ಬೇಕಾದಷ್ಟು ಕಾರಣಗಳು ಸಿಕ್ಕವು. ಅದರಲ್ಲಿ ಪ್ರಮುಖವಾಗಿ, ಭಾವನಾ ಪ್ರಧಾನ ವಿಷಯವಾದ ಟಿಬೆಟ್‌ನ ಸ್ಥಾನಮಾನ.
ಭಾರತದ ಆಶ್ರಯ ಕೇಳಿ ಬಂದ ಟಿಬೆಟ್‌ನ ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರಿಗೆ ಆಶ್ರಯ ನೀಡಿದ್ದಲ್ಲದೆ, ಭಾರತದ ನೆಲದಲ್ಲೇ ಒಂದು ಟಿಬೆಟ್ ಸರ್ಕಾರವನ್ನು ಸ್ಥಾಪಿಸಲೂ ಅವಕಾಶ ನೀಡಿತು. ಭಾರತದ ಈ ವರ್ತನೆಯನ್ನು ಚೀನಾ ಸಹಿಸಲಿಲ್ಲ. ಚೀನಾ ಸುಮ್ಮನೆ ಕೂಡಲಿಲ್ಲ. ಈಶಾನ್ಯ ಭಾರತದ ರಾಜ್ಯಗಳ ಮೇಲೆ ಒಂದು ರೀತಿಯಲ್ಲಿ ದಾಳಿಯನ್ನೇ ಆರಂಭಿಸಿತು.
ಅದಾದ ಅನಂತರ ಚೀನಾ ಈಶಾನ್ಯ ಭಾರತದ ಮೇಲೆ ದಾಳಿ ನಡೆಸುವುದು ಸುಲಭವಾಯಿತು. ಆ ಪ್ರದೇಶದಲ್ಲಿ ಚೀನಾಗೆ ಪರ್ವತ ಶ್ರೇಣಿಗಳಲ್ಲಿ ಎತ್ತರದ ಆಯಕಟ್ಟಿನ ಜಾಗಗಳಿವೆ. ಅದಾದ ಅನಂತರ ಹಿಮಾಚಲಕ್ಕೆ ಅನೇಕ ಬಾರಿ ಬೆಂಕಿ ಬಿದ್ದದೆ. ಆದರೆ ಯಾವ ಕಾಲದಲ್ಲೂ ಚಕಮಕಿ ಎರಡು ದೊಡ್ಡ ರಾಷ್ಟ್ರಗಳ ನಡುವೆ ಸಮರದ ಸ್ವರೂಪವನ್ನು ಪಡೆಯಲಿಲ್ಲ ಎನ್ನುವುದೇ ಸಮಾಧಾನಕರವಾದ ವಿಷಯ.
ಈಗಲೂ ಭಾರತ-ಚೀನಾಗಳ ನಡುವೆ ಗಡಿಯ ವಿವಾದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಸಾಧ್ಯ ಎನ್ನುವ ಆಸೆ, ಎರಡೂ ದೇಶಗಳ ಜನರಲ್ಲಿ ಇದೆ. ಹಿಂದೆಯೂ ಭಾರತ- ಚೀನಾಗಳ ನಡುವೆ ಬೇಕಾದಷ್ಟು ವ್ಯಾಪಾರ ನಡೆಯುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಚೀನಾ ಭಾರತೀಯ ರೇಷ್ಮೆ ಉದ್ಯಮವನ್ನು ನಾಶಪಡಿಸುವ ಪ್ರಯತ್ನ ನಡೆಸಿದೆ ಎನ್ನುವ ದೂರೂ ಇತ್ತು.
ಔದ್ಯಮಿಕ ಆಧುನಿಕರಣದ ಜತೆಯಲ್ಲೇ ಚೀನಾ ಆರಂಭಿಸಿದ ಸಣ್ಣ ಪ್ರಮಾಣದ ಕೈಗಾರಿಕಾ ವಲಯದಲ್ಲಿ ದೊಡ್ಡ ಪ್ರಮಾಣದ ಸಾಧನೆ ನಡೆಸಿದ್ದು ಸಣ್ಣ- ಪುಟ್ಟ ಉಕ್ಕಿನ ಕುಲುಮೆಗಳು, ಸಿಮೆಂಟ್ ಉದ್ಯಮದಲ್ಲಿ ಚಿಕ್ಕ ರೋಟರಿ ಕಿಲ್ನ್ ಯಂತ್ರದ ಸಾಧನೆ, ಭಾರತದ ಅನೇಕ ಕಡೆಗಳಲ್ಲಿ ಈಗಲೂ ಇರಬೇಕು.
ಇತ್ತೀಚೆಗೆ ಚೀನಾದ ವಂಡರ್ ಎಂದೇ ಹೆಸರಾದ ಎಲ್‌ಇಡಿ- ವಿದ್ಯುತ್ ದೀಪಗಳ ಆವಿಷ್ಕಾರ ಅನೇಕ ಭಾರತೀಯ ನಗರಗಳಲ್ಲಿ ಜನಜೀವನದ ವಿಧಾನವನ್ನೇ ಬದಲಾಯಿಸಿದಂತಿದೆ. ಇವೆಲ್ಲದರ ನಡುವೆ, ಈಗ ಪ್ರಧಾನಿ ಮನಮೋಹನ ಸಿಂಗ್ ಅವರ ಚೀನಾ ಭೇಟಿಯ ಕಾಲದಲ್ಲಿ ಗಡಿಯ ವಾಸ್ತವ ನಿಯಂತ್ರಣ ರೇಖೆ ಕುರಿತ ಒಪ್ಪಂದಕ್ಕೆ ಸಹಿ ಬಿದ್ದಿರುವುದು ಸ್ವಾಗತಾರ್ಹ. ವಾಸ್ತವದಲ್ಲಿ ಇದೊಂದು ವಿಶ್ವಾಸದ ಕೊಂಡಿಯನ್ನು ಸ್ಥಾಪಿಸುವ ಪ್ರಯತ್ನ. ಇಂತಹ ಪ್ರಯತ್ನದಿಂದ ಪೂರ್ಣ ಪ್ರಮಾಣದ ಸಮರವನ್ನು ತಪ್ಪಿಸುವುದು ಸಾಧ್ಯವಾಗಲಾರದು. ಆದರೆ ಇಂತಹ ಪ್ರಯತ್ನಗಳು ದಿಢೀರನೆ ಯಶಸ್ವಿಯಾಗುವುದಿಲ್ಲ ಎನ್ನುವುದೂ ನಿಜ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement