ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಾಲ್ಮೀಕಿ ಚಿತ್ರದಲ್ಲಿ ಕಂಡ ಅಭಾಸ

Srinivasa Murthy VN
Updated On : 27 Oct 2013, 2:28 am

ತಾ. 19.10.13ರ ಪ್ರತಾಪಸಿಂಹರ ಲೇಖನ ಮತ್ತು ತಾ. 21.10.13ರ ಗೋಪಾಲ ಅವರ ಲೇಖನ ಎಲ್ಲರ ಕಣ್ಣು ತೆರಸುವಂಥದ್ದೇ. ನಾನು ಗೌರವಿಸುವ ಅತೀ ಉನ್ನತ ವ್ಯಕ್ತಿಗಳಲ್ಲಿ ಡಾ. ವಿರೇಂದ್ರ ಹೆಗ್ಗಡೆಯವರಿಗೆ ಮೊದಲ ಸ್ಥಾನ ಕೊಡುತ್ತೇನೆ. ಅವರ ಸಮಾಜ ಸೇವೆ ಮತ್ತು ಸಾಮಾಜಿಕ ಕಳಕಳಿ ಅಂತಹದ್ದು. ನಾನು ನೋಡಿದಂತೆ ಶ್ರೀ ಮಂಜುನಾಥಸ್ವಾಮಿ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಇವರನ್ನು ಸಮಾನ ಗೌರವದಲ್ಲಿ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ನೋಡುತ್ತಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಕೇಳಿಬರುತ್ತಿರುವ ಹೆಸರು ಯಾರದ್ದೇ ಆಗಿರಲಿ, ನಿಷ್ಕಳಂಕ ತನಿಖೆ ಸಿಐಡಿ ಅಥವಾ ಸಿಬಿಐನಿಂದ ನಡೆಯಲಿ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಮಸಿ ಬಳಿಯುವುದು ಸರಿಯಲ್ಲ.
-ಎನ್.ಎಸ್. ಶೆಟ್ಟಿ, ಬೆಳಗಾವಿ

'ಹುಲಿದೇವರು; ಕಾಡಿನ ಕಾವಲಿಗೆ ಮೊದಲ ಫಾರೆಸ್ಟರ್‌' (ಕ.ಪ್ರ. ಅ.18) ಲೇಖನಕ್ಕೆ ಪೂರಕ ಪತ್ರ. ಮಹಾಭಾರತದ ಉದ್ಯೋಗಪರ್ವದಲ್ಲಿ (25-55) ಶ್ರೀಕೃಷ್ಣ ಸಂಜಯನಿಗೆ ಹೇಳುವ ಮಾತೊಂದು ಹೀಗಿದೆ-
ನಿರ್ವನೋ ವಧ್ಯತೇ ವ್ಯಾಘ್ರಃ/ ನಿರ್ವ್ಯಾಘ್ನಂ ಛಿದ್ರತೇ ವನಂ!
ತಸ್ಮಾತ್ ವ್ಯಾಘ್ರೋವನಂ ರಕ್ಷೇತ್,/ ವನಂ ವ್ಯಾಘ್ರಂ ಚ ಪಾಲಯೇತ್‌॥
ಕಾಡೇ ಇಲ್ಲದಿದ್ದರೆ (ನಾಡಿಗೆ ಬಂದ?) ಹುಲಿಯನ್ನು ಕೊಲ್ಲುತ್ತಾರೆ. ಹುಲಿಯಿಲ್ಲದಿದ್ದರೆ ಮಾನವರು ದಟ್ಟವಾದ ಅರಣ್ಯವನ್ನೇ ಕಡಿದು ಮುಗಿಸುತ್ತಾರೆ. ಈ ಕಾರಣದಿಂದ ಹುಲಿಯು ಅರಣ್ಯವನ್ನೂ, ಅರಣ್ಯವು ಹುಲಿಯನ್ನು ರಕ್ಷಿಸುತ್ತದೆ. (ಕೌರವ ಪಾಂಡವರು ವ್ಯಾಘ್ರಾರಣ್ಯನ್ಯಾಯದ ರೀತಿಯಲ್ಲಿ ಪರಸ್ಪರ ಹೊಂದಿಕೊಂಡು ಬದುಕಿದರೆ ಲೋಕಕ್ಕೆ ಕ್ಷೇಮ.) 'ವಿಶ್ವಮಾನವ ವಾಲ್ಮೀಕಿ...' ಲೇಖನದಲ್ಲಿ ಬಳಸಿಕೊಂಡ ಚಿತ್ರ ದೋಷಯುಕ್ತ. ಏಕೆಂದರೆ ವಾಲ್ಮೀಕಿ ಕುಶ-ಲವರಿಗೆ ರಾಮಾಯಣದ ಶ್ಲೋಕಗಳನ್ನು ಬಾಯ್ದೆರೆ ಹೇಳಿ ಕಂಠಪಾಠ ಮಾಡಿಸಿದ್ದ. ಆಗ ಬರವಣಿಗೆಯ ಮೂಲಕ ರಾಮಾಯಣದ ರಚನೆಯಾಗಿರಲಿಲ್ಲ. ಹಾಗಾಗಿ ಚಿತ್ರದಲ್ಲಿರುವ ಕುಶ-ಲವರ ಕೈಯಲ್ಲಿ ಪುಸ್ತಕ ಅಸಂಬದ್ಧ. ಶ್ರೀರಾಮನ ಸನ್ನಿಧಿಯಲ್ಲಿ ಕುಶ-ಲವರು 24,000 ಶ್ಲೋಕಗಳನ್ನು ಹಾಡುತ್ತಾರೆ.
-ಎಂ. ಸುಬ್ರಹ್ಮಣ್ಯಭಟ್, ಮುಡಿಪು

ಸೋಮವಾರ ಅನುಭವ ಮಂಟಪದಲ್ಲಿ ಗಾಳಿಪಟ ಹಾರಿಸುವ ನಂಬಿರಾಜರು ಮೈಸೂರಲ್ಲೇ ಜಾಸ್ತಿ ಪಟ ಹಾರಿಸ್ತಾರೆ. ಅಲ್ಲೇ ಗಾಳಿಸುದ್ದಿ ಜಾಸ್ತೀನಾ? ಒಮ್ಮೊಮ್ಮೆ ಮಂಡ್ಯ-ಬೆಂಗಳೂರು-ಮಂಗಳೂರಲ್ಲೂ ಹಾರಿಸ್ತಾರೆ. ದಯಮಾಡಿ ಬೀದರ್-ಗುಲ್ಬರ್ಗ-ರಾಯಚೂರು-ಬಳ್ಳಾರಿ-ಧಾರವಾಡ ಮುಂತಾದ ಜಿಲ್ಲೇಲೂ ಹಾರಿಸಿ ಸಾರ್, ದಾರ ಕಮ್ಮಿ ಆದ್ರೆ ನಾವ್ ಕೊಡ್ತೀವಿ!
-ಬಿ.ಕೆ. ಶ್ರೀಕಾಂತ್, ಬೆಟ್ಟದಪುರ, ಮೈಸೂರು

ಅಕ್ಟೋಬರ್ 22ರ ವಕ್ರತುಂಡೋಕ್ತಿ-'ಜನರು ಚೌಕಾಶಿ ಮಾಡಲಿಚ್ಛಿಸದ ಏಕೈಕ ಸ್ಥಳವೆಂದರೆ ಮೆಡಿಕಲ್ ಶಾಪ್‌' ಅಂತ ಬರೆದಿದ್ದಾರೆ. ಪ್ರಾಯಶಃ ವಿಶ್ವೇಶ್ವರಭಟ್ಟರ ಗಮನಕ್ಕೆ ಬಾರದಿದ್ದ ವಿಷಯವೆಂದರೆ ಈಗಿತ್ತಲಾಗಿ ಮೆಡಿಕಲ್ ಶಾಪ್‌ನಲ್ಲೂ ಚೌಕಾಶಿ ಪ್ರಾರಂಭವಾಗಿದೆ. ಇಲ್ಲಿ ಚೌಕಾಶಿ ದರಕ್ಕಾಗಿ ಅಲ್ಲ; ಕಮಿಷನ್‌ಗಾಗಿ. ಕೆಲವು ಅಂಗಡಿಗಳು 10ರ್ ಕಮಿಷನ್ ಕೊಟ್ಟರೆ, ಇನ್ನು ಕೆಲವರು 5ರ್. ಪ್ರಾರಂಭದ ದಿನಗಳಲ್ಲಿ ಕೊಡುತ್ತಿದ್ದ 10ರ್ ಕಮಿಷನ್ ಬರಬರುತ್ತಾ 5ರ್ ಆಗಿರುವುದೂ ಇದೆ. ಇನ್ನು ಕೆಲ ಮೆಡಿಕಲ್ ಶಾಪ್‌ನವರು 'ಕಾರ್ಡ್‌' ವ್ಯವಸ್ಥೆ ಮಾಡಿಕೊಡುತ್ತಾರೆ. ಅಂಥ ಕಾರ್ಡ್ ಹೊಂದಿದವರಿಗೆ ಸೀದಾ 10ರ್  ಕಮಿಷನ್. ಚೌಕಾಶಿ ಇಲ್ಲದಿರುವ ಸ್ಥಳ ಆಸ್ಪತ್ರೆ ಹಾಗೂ ಡಾಕ್ಟರ್‌ಗಳ ಪಾವತಿ ಅಂತ ಈಗೆಲ್ಲ ಹೇಳಬಹುದೇನೋ? ಅಂದ ಹಾಗೆ, ಬಸ್/ಟ್ರೈನ್ ಟಿಕೆಟ್ ದರಗಳಲ್ಲಿ ಚೌಕಾಶಿಗೆ ಅವಕಾಶವಿರದು. (ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯ ಬಿಟ್ಟು).
-ಶಂಕರನಾರಾಯಣಭಟ್,ಮಾಡಗೇರಿ. ಮೊ. 9632 821920

ಅಕ್ಟೋಬರ್ 17ರ ಕ.ಪ್ರ.ದಲ್ಲಿ ಪ್ರಕಟವಾದ ಶಾಶ್ವತಿ ಸರ್ಕಾರ್‌ರವರ ಮೋದಿ ಬಗೆಗಿನ ಲೇಖನ ಅರ್ಥಪೂರ್ಣವಾಗಿತ್ತು. ನೀವೇನೆ ಹೇಳಿದರೂ "ಅದೇನೋ ಒಂದು ಗಾದೆನೇ ಇದೆಯಲ್ಲಾ" ಊರು ಇದ್ದಲ್ಲಿ ... ಇರುತ್ತೇ ಅಂತಾ" ಹಾಗೇ ನಮ್ಮ ರಾಜ್ಯದಲ್ಲಿ ಮೋದಿಯನ್ನು ನರಹಂತಕ ಹಾಗೆ ಹೀಗೇ ಅಂತಾ ಬಿಂಬಿಸುವ ಒಂದು ವರ್ಗವೇ ಸೃಷ್ಟಿಯಾಗಿದೆ. ಇವರುಗಳು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವ ಖಯಾಲಿಯವರು. ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲೇ ಇದುವರೆಗೂ 150ಕ್ಕಿಂತ ಹೆಚ್ಚು ನಕಲಿ ಎನ್‌ಕೌಂಟರ್‌ಗಳು ನಡೆದಿದ್ದರೂ, ಇವರು ಗುಜರಾತ್‌ನ ಇಶ್ರತ್ ಜಹಾನ್ ಎನ್‌ಕೌಂಟರ್ ಬಗ್ಗೆ ಮಾತ್ರ ಬೊಬ್ಬಿಡುತ್ತಾರೆ. ಗೋಧ್ರಾ ಘಟನೆ ನಂತರ 12 ವರ್ಷಗಳಲ್ಲಿ ಅಲ್ಲಲ್ಲಿ ಒಂದೇ ಒಂದು ಕೋಮುಗಲಭೆ ನಡೆದಿಲ್ಲ. ಆ ಘಟನೆಗೂ ಮೊದಲೇ ಗುಜರಾತ್ ಸೇರಿದಂತೆ ದೇಶಾದ್ಯಂತ ಸಾವಿರಾರು ಕೋಮು ಗಲಭೆ ನಡೆದಿವೆ. ಇದರ ಬಗ್ಗೆ ಇವರು ತುಟಿ ಬಿಚ್ಚಲ್ಲ. ಒಂದು ಕಡೆ ಮೋದಿಯನ್ನು ನರಹಂತಕ ಅಂತ ಬೊಬ್ಬಿಡುವ ಇವರು ಇನ್ನೊಂದು ಕಡೆ ನಕ್ಸಲರನ್ನು ಬೆಂಬಲಿಸುತ್ತಾರೆ. ಅವರೇನು ದೇಶಭಕ್ತರಾಗಿ ಕಾಣುತ್ತಿರುವರೆ? ದೇಶ ಕಾಯುವ ಸೈನಿಕರ ತಲೆ ಕತ್ತರಿಸಿದರೆ ಇವರ ಕಣ್ಣೀರು ಬತ್ತಿ ಹೋಗಿರುತ್ತೆ. ಭಾರತಮಾತೆಯ, ಸರಸ್ವತಿಯ ನಗ್ನ ಚಿತ್ರ ಬಿಡಿಸಿದರೆ ಅದೊಂದು ಕಲೆ, ಇವರು, ತಮ್ಮ ತಾಯಿ ಅಥವಾ ಅಕ್ಕ-ತಂಗಿ ಚಿತ್ರ ಬಿಡಿಸಿದರೆ ಏನೆಂದು ಹೇಳುತ್ತಾರೆ?
-ರಾಮು ಎನ್. ಗೌಡ ಬೆಂಗಳೂರು., ಮೊ. 9986 746942

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement